ರಾತ್ರೋರಾತ್ರಿ ಹೆಸರು ಮಾಡಲು ಟಿಕಾಯತ್‌ಗೆ ಮಸಿ: ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ

Rakesh Tikait
  • ವಾರಕ್ಕೂ ಮುಂಚೆ ಯೋಜಿಸಿದ ಮಸಿ ಸಂಚು
  • ನ್ಯಾಯಾಲಯಕ್ಕೆ 450 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ಭಾರತೀಯ ಕಿಸಾನ್‌ ಒಕ್ಕೂಟದ ಮುಖಂಡ ರಾಕೇಶ್‌ ಟಿಕಾಯತ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದ್ದು ಹೈಗ್ರೌಂಡ್ಸ್‌ ಠಾಣಾ ಪೊಲೀಸರು ಎಂಟನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ.

ಆರೋಪಿಗಳು ರಾತ್ರೋರಾತ್ರಿ ಹೆಸರು ಮಾಡುವ ದುರುದ್ದೇಶದಿಂದ ಟಿಕಾಯತ್‌ಗೆ ಮಸಿ ಬಳಿದಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 

ಬೆಂಗಳೂರಿನಲ್ಲಿ ರೈತ ಮುಖಂಡರ ಸಭೆ ನಡೆಯುವ ಮಾಹಿತಿ ತಿಳಿದಿದ್ದ ಆರೋಪಿಗಳು ಒಂದು ವಾರಕ್ಕೂ ಮುಂಚೆಯೇ ಟಿಕಾಯತ್‌ ಮೇಲೆ ಟೊಮೆಟೊ ಮತ್ತು ಮೊಟ್ಟೆ ಎಸೆಯುವ ಯೋಜನೆ ರೂಪಿಸಿದ್ದರು. ಈ ತಂತ್ರ ಸಫಲವಾಗದಿದ್ದರೆ, ಮಸಿ ಬಳಿಯಲು ಸಂಚು ರೂಪಿಸಿದ್ದರು ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 

ಈ ಸುದ್ದಿ ಓದಿದ್ದೀರಾ?: ನೂಪುರ್ ಶರ್ಮಾ ಪ್ರಕರಣ| ಎಫ್ಐಆರ್ ಒಗ್ಗೂಡಿಸಿ ದೆಹಲಿ ಪೊಲೀಸರಿಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ

ಆಡಿಯೋ ಸಾಕ್ಷ್ಯ, 89 ಮಂದಿಯ ಹೇಳಿಕೆ ದಾಖಲಿಸಿರುವ ಪೊಲೀಸರು ಒಟ್ಟು 450 ಪುಟಗಳ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ರೈತ ಮುಖಂಡ ರಾಕೇಶ್‌ ಟಿಕಾಯತ್‌ ಬೆಂಗಳೂರಿಗೆ ಬಂದಿದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ಅವರ ಮೇಲೆ ಮಸಿಯಿಂದ ದಾಳಿ ನಡೆಸಿತ್ತು. ಹಲ್ಲೆಯಿಂದ ರಾಕೇಶ್ ಟಿಕಾಯತ್ ಕೈಗೆ ತೀವ್ರ ಪೆಟ್ಟಾಗಿತ್ತು. ಮಸಿ ಎರಚಿದ್ದರಿಂದ ಅವರ ಕಣ್ಣಿಗೂ ಹಾನಿಯಾಗಿತ್ತು. ಈ ಘಟನೆ ಖಂಡಿಸಿ ರಾಜ್ಯದಾದ್ಯಂತ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಈ ಕುರಿತಂತೆ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್