ಇನ್‌ಸ್ಟಾಗ್ರಾಂ ಸೇವೆ ಕೆಲಕಾಲ ಸ್ಥಗಿತ; ಟ್ವಿಟರ್‌ನಲ್ಲಿ ಸಮಸ್ಯೆ ತಿಳಿಸಿದ ಬಳಕೆದಾರರು

  • ಬೆಳಿಗ್ಗೆ ಸುಮಾರು 9.45ರ ಹೊತ್ತಿಗೆ ಇನ್‌ಸ್ಟಾಗ್ರಾಂ ಸ್ಥಗಿತ
  • ಲಾಗಿನ್ ಮತ್ತು ರಿಫ್ರೆಶ್‌ ಮಾಡಲು ಬಳಕೆದಾರರ ಪರದಾಟ

ಇಂದು ಮುಂಜಾನೆ ಮೆಟಾ ಒಡೆತನದ ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಕೆಲಕಾಲ ಸ್ಥಗಿತಗೊಂಡಿದ್ದು, ಅನೇಕ ಬಳಕೆದಾರರು ಇನ್‌ಸ್ಟಾಗ್ರಾಂ ಕೆಲಸ ಮಾಡದಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಟ್ವಿಟರ್‌ ಮೊರೆ ಹೋಗಿದ್ದಾರೆ. 

ಅಪ್ಲಿಕೇಶನ್‌ ಲಾಗಿನ್‌ ಸಾಧ್ಯವಾಗಲಿಲ್ಲ ಎಂದು ಕೆಲವು ಬಳಕೆದಾರರು ಹೇಳಿದರೆ, ಫೀಡ್ ರಿಫ್ರೆಶ್‌ ಮಾಡಲಾಗುತ್ತಿಲ್ಲ ಎಂದು ಕೆಲವರು ಹೇಳಿದ್ದಾರೆ.

ಸ್ಥಗಿತಗೊಂಡ ಒಂದೆರಡು ಗಂಟೆಗಳಲ್ಲಿ ಬಳಕೆದಾರರು ಸಮಸ್ಯೆಯನ್ನು ಟ್ವಿಟರ್‌ನಲ್ಲಿ ವರದಿ ಮಾಡಿದ್ದು, ತಕ್ಷಣ ಆ್ಯಪ್ ಮೊದಲಿನ ಹಾಗೆ ಕಾರ್ಯನಿರ್ವಹಿಸಿದೆ.

ಇಂದು ಬೆಳಿಗ್ಗೆ ಸುಮಾರು 9:45ರ ಹೊತ್ತಿಗೆ ಅಪ್ಲಿಕೇಶನ್ ಸ್ಥಗಿತಗೊಂಡಿದ್ದು, ಬಳಕೆದಾರರು ತಮ್ಮ ಆ್ಯಪ್ ಬಳಸಲು ಸಮಸ್ಯೆ ಎದುರಿಸಿದ್ದಾರೆ. ಸುಮಾರು 12:45 ರವರೆಗೂ ಸಮಸ್ಯೆ ಮುಂದುವರಿದಿತ್ತು. ದೆಹಲಿ, ಜೈಪುರ, ಲಕ್ನೋ, ಮುಂಬೈ, ಬೆಂಗಳೂರು ಸೇರಿದಂತೆ ಹಲವು ನಗರಗಳಿಂದ ವರದಿಗಳು ಬಂದಿವೆ. ಸೇವೆಯಲ್ಲಿ ವ್ಯತ್ಯಯವಾಗಿರುವ ಬಗ್ಗೆ  ವರದಿಯಾಗಿದೆ ಎಂದು ಡೌನ್ ಡಿಟೆಕ್ಟರ್‌ ತಿಳಿಸಿದೆ.

ಕಳೆದ ತಿಂಗಳು ಅಂದರೆ ಏಪ್ರಿಲ್ 19ರ ಮಂಗಳವಾರ ರಾತ್ರಿ ಬಳಕೆದಾರರು ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಸ್ವಲ್ಪ ಸಮಯದಲ್ಲಿಯೇ ಕಂಪನಿ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಿತ್ತು.

ಸ್ಥಗಿತದ ನಡುವೆಯೂ ಕೆಲವು ಬಳಕೆದಾರರಿಗೆ ತಮ್ಮ ಅಕೌಂಟ್‌ಗೆ ಲಾಗಿನ್‌ ಆಗಲು ಸಾಧ್ಯವಾಗಿದೆ ಎಂದು ವರದಿಯಾಗಿದೆ. ಸ್ಥಗಿತದ ಬಗ್ಗೆ ಇದುವರೆಗೆ ಇನ್‌ಸ್ಟಾಗ್ರಾಂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್