ಮೊರ್ಬಿ ದುರಂತ | ನೀವು ಕೊಡುವ ಪರಿಹಾರದ ಹಣ ಪುಸ್ತಕ, ಬಟ್ಟೆಗೆ ಸಾಕಾಗಲ್ಲ; ಸರ್ಕಾರಕ್ಕೆ ಗುಜರಾತ್‌ ಹೈಕೋರ್ಟ್‌ ತರಾಟೆ

  • ಮೊರ್ಬಿ ತೂಗು ಸೇತುವೆ ದುರಂತದಲ್ಲಿ ಅನಾಥರಾದ ಏಳು ಮಕ್ಕಳು 
  • ಪರಿಹಾರ ಕೊಡಲು ಮೀನಮೇಷ ಎಣಿಸುತ್ತಿರುವ ಗುಜರಾತ್‌ ಸರ್ಕಾರ

ಮೊರ್ಬಿ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟವರಿಗೆ ಮತ್ತು ಗಾಯಗೊಂಡಿರುವವರಿಗೆ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಗುಜರಾತ್‌ ಹೈಕೋರ್ಟ್‌ ಗುಜರಾತ್‌ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. 

ಘಟನೆಯಲ್ಲಿ ಗಾಯಗೊಂಡವರಿಗೆ ಸರ್ಕಾರ ಘೋಷಿಸಿರುವ ಪರಿಹಾರದ ಕುರಿತಾಗಿ ಗುಜರಾತ್‌ ಹೈಕೋರ್ಟ್‌ ಕಿಡಿಕಾರಿದೆ. "ಪರಿಹಾರವು ವಾಸ್ತವಿಕವಾಗಿರಬೇಕು. ಜತೆಗೆ ಹಾಗೆ ಪರಿಹಾರ ನೀಡುವುದು ಇಂದಿನ ತುರ್ತು" ಎಂದು ನ್ಯಾಯಾಲಯ ಅಭಿಪ್ರಾಯಟ್ಟಿದೆ.

ದುರಂತದಲ್ಲಿ ಪೋಷಕರನ್ನು ಕಳೆದುಕೊಂಡು ಏಳು ಮಕ್ಕಳು ಅನಾಥರಾಗಿದ್ದರೆ, 12 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಇವರಿಗೆ ಮಾಸಿಕವಾಗಿ ಮೂರು ಸಾವಿರ ರೂ. ಕೊಡಲು ಸರ್ಕಾರ ನಿರ್ಧರಿಸಿತ್ತು.

ಇದಕ್ಕೆ ಗರಂ ಆದ ಹೈಕೋರ್ಟ್‌, "ನೀವು ನೀಡುವ ಹಣ ಮಕ್ಕಳ ಸಮವಸ್ತ್ರ ಮತ್ತು ಪುಸ್ತಕಗಳ ಖರೀದಿಗೆ ಸಾಕಾಗುವುದಿಲ್ಲ. ರಾಜ್ಯ ಸರ್ಕಾರವು ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಬೇಕು ಅಥವಾ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು" ಎಂದು ಆದೇಶಿಸಿತು. 

ಇದೇ ವೇಳೆ, ಅಪಘಾತದಲ್ಲಿ ಮೃತಪಟ್ಟಿರುವವರನ್ನು ಅವಲಂಬಿಸಿ ಎಷ್ಟು ಮಂದಿ ಜೀವನ ನಡೆಸುತ್ತಿದ್ದರು ಎಂಬುದರ ವರದಿ ಸಲ್ಲಿಸಬೇಕು. ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ, ಗಾಯಗೊಂಡವರಿಗೆ ನೀಡುವ ಪರಿಹಾರ ಏನು? ಎಷ್ಟು ಮೊತ್ತ ನೀಡಲಾಗುತ್ತದೆ ಎಂಬುದನ್ನು ತಿಳಿಸಬೇಕು ಎಂದು ಗುಜರಾತ್‌ ಸರ್ಕಾರಕ್ಕೆ ಸೂಚಿಸಿದೆ. ಮೃತರ ಪಟ್ಟಿಯಲ್ಲಿ ಹೆಸರು, ಸ್ಥಳದ ಜತೆಗೆ ಜಾತಿಯ ವಿವರ ನಮೂದಿಸಿರುವುದಕ್ಕೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. 

ಏನಿದು ಪ್ರಕರಣ?

ಅ.30ರ ಸಂಜೆ ಗುಜರಾತ್‌ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 141ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ 50ಕ್ಕೂ ಹೆಚ್ಚು ಮಕ್ಕಳಿದ್ದರು. ನವೀಕರಣದ ನಂತರ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ ನಾಲ್ಕು ದಿನಗಳ ನಂತರ ಈ ಅವಘಡ ಸಂಭವಿಸಿತ್ತು.

ಮೊರ್ಬಿ ಪುರಸಭೆಯೊಂದಿಗೆ 15 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಒರೆವಾ ಕಂಪನಿಯು ಸೇತುವೆ ನವೀಕರಣದ ಜವಾಬ್ದಾರಿಯನ್ನು ನಕಲಿ ದಾಖಲೆಯೊಂದಿಗೆ ಸಣ್ಣ ಕಂಪನಿ 'ದೇವಪ್ರಕಾಶ್‌ ಸೊಲ್ಯೂಷನ್ಸ್‌'ಗೆ ಹೊರಗುತ್ತಿಗೆ ನೀಡಿತ್ತು.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ರಸ್ತೆ ಬದಿಯಲ್ಲಿ ಬಿದ್ದಿದ್ದ ಉದ್ಯಮಿಯ ಹೆಣದ ಹಿಂದಿದೆಯೇ ʻಆಕೆʼಯ ಕೈಚಳಕ?

ಮಾರ್ಚ್‌ನಲ್ಲಿ ಸೇತುವೆಯ ದುರಸ್ತಿ ಕಾರ್ಯಕ್ಕಾಗಿ ಒರೆವಾ ಕಂಪನಿಯನ್ನು ನೇಮಿಸಲಾಗಿತ್ತು. ಏಳು ತಿಂಗಳ ನಂತರ ಅಕ್ಟೋಬರ್ 26ರಂದು ಸೇತುವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಒಂಭತ್ತು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180