ಸುದ್ದಿ ವಿವರ | ಮಣಿಪುರದಲ್ಲಿ ಐದು ದಿನಗಳ ಕಾಲ ಇಂಟರ್‌ನೆಟ್‌ ಸ್ಥಗಿತ; ಭಾರತದಲ್ಲೇ ಅತಿ ಹೆಚ್ಚು ನಿರ್ಬಂಧ

2012ರಿಂದ ಆರಂಭವಾದ ಇಂಟರ್‌ನೆಟ್‌ ಸ್ಥಗಿತ, ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಬಂದಿದೆ. ಈವರೆಗೆ ಸುಮಾರು 676 ಬಾರಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಒಂದರಲ್ಲೇ 411 ಬಾರಿ ಇಂಟರ್‌ನೆಟ್‌ ಸೇವೆ ಕಸಿದುಕೊಳ್ಳಲಾಗಿದೆ.

ಮಣಿಪುರ ಸ್ವಾಯತ್ತ ಜಿಲ್ಲಾ ಮಂಡಳಿ ತಿದ್ದುಪಡಿ ಮಸೂದೆಯನ್ನು ಸರ್ಕಾರ ವಿಧಾನಸಭೆಯ ಮುಂದಿಟ್ಟಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ಮಣಿಪುರದಲ್ಲಿ ಐದು ದಿನಗಳ ಕಾಲ ಇಂಟರ್‌ನೆಟ್‌ ಸ್ಥಗಿತಗೊಳಿಸಿ ಆದೇಶಿಸಲಾಗಿದೆ. 

ಎನ್ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವು ಮಂಗಳವಾರ ಮಣಿಪುರ (ಗುಡ್ಡಗಾಡು ಪ್ರದೇಶಗಳು) ಮಣಿಪುರ ಸ್ವಾಯತ್ತ ಜಿಲ್ಲಾ ಮಂಡಳಿ 6 ಮತ್ತು 7ನೇ ತಿದ್ದುಪಡಿ ಮಸೂದೆಗಳನ್ನು ಮಂಡಿಸಿದೆ. ಮಸೂದೆಯ ಕೆಲವು ವಿಚಾರಗಳು ರಾಜ್ಯದ ಹಿತಾಸಕ್ತಿಗೆ ಧಕ್ಕೆ ಮಾಡಿರುವ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ಪ್ರಚೋದಿಸಲಾಗುತ್ತಿದೆ ಎನ್ನುವ ಕಾರಣ ನೀಡಿ ರಾಜ್ಯ ಸರ್ಕಾರ ಇಂಟರ್‌ನೆಟ್‌ ಸ್ಥಗಿತಗೊಳಿಸಿದೆ.

"ಶನಿವಾರ ಸಂಜೆ ಫೌಗಕ್‌ಚಾವೊ ಇಖಾಂಗ್‌ನಲ್ಲಿ ಮೂರ್‍ನಾಲ್ಕು ಮಂದಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಕೋಮು ಉದ್ವಿಗ್ನತೆ ಸೃಷ್ಟಿಸಿದೆ” ಎಂದು ಎಂದು ಬಿಷ್ಣುಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರು ನೀಡಿದ ವರದಿ ತಿಳಿಸಿದೆ.

ಬಿಷ್ಣುಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಶನಿವಾರ ಸಂಜೆಯಿಂದ ಕಣಿವೆ ಜಿಲ್ಲೆಯಾದ್ಯಂತ ಎರಡು ತಿಂಗಳ ಅವಧಿಗೆ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿದ್ದಾರೆ.

ಭಾರತದಲ್ಲಿ ಅತ್ಯಧಿಕ ಇಂಟರ್‌ನೆಟ್ ಸ್ಥಗಿತ

ವಿಶ್ವದಲ್ಲಿಯೇ ಹೆಚ್ಚು ಇಂಟರ್‌ನೆಟ್‌ ಸ್ಥಗಿತ ಎದುರಿಸುತ್ತಿರುವ ದೇಶ ಭಾರತ ಎಂದು ಅಂಕಿ ಅಂಶಗಳು ಹೇಳುತ್ತವೆ. ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದತಿ, ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ಕೇಂದ್ರ ಸರ್ಕಾರದ ಇತ್ತೀಚಿನ ಕೆಲವು ನಿರ್ಧಾರಗಳಿಂದ ಹೆಚ್ಚು ಪ್ರತಿಭಟನೆಗಳು ಸಂಭವಿಸಿದ್ದು, ವದಂತಿಗಳನ್ನು ತಡೆಗಟ್ಟುವ ಮತ್ತು ಇನ್ನಿತರ ಕಾರಣಗಳನ್ನು ನೀಡಿ ಸರ್ಕಾರ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದು ಸಾಮಾನ್ಯವೆನಿಸಿದೆ.

ಭಾರತದ ಇಂಟರ್‌ನೆಟ್ ಸ್ಥಗಿತ ಇತಿಹಾಸ

2012ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಯಿತು. ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಶಾ ಗಿಲಾನಿ ಮತ್ತು ಬುರ್ಹಾನ್ ವಾನಿ ಅವರ ಸಾವಿನ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಇನ್ನಷ್ಟು ದಿನ ಇಂಟರ್ನೆಟ್ ಸ್ಥಗಿತವಾಗಿತ್ತು.

ದೆಹಲಿ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಯ ವೇಳೆಯೂ ಇಂಟರ್‌ನೆಟ್‌ಗೆ ನಿರ್ಬಂಧ ಹೇರಲಾಗಿತ್ತು. ಶಾಲಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಪಶ್ಚಿಮ ಬಂಗಾಳವು ವಿವಿಧ ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಿತ್ತು!

ಈ ಸುದ್ದಿ ಓದಿದ್ದೀರಾ? ಸುದ್ದಿ ವಿವರ | ಏನಿದು ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ?

ಇಂಟರ್‌ನೆಟ್‌ ಸ್ಥಗಿತದ ಅಂಕಿ ಅಂಶ

2014ರಿಂದ ಗಣನೀಯ ಪ್ರಮಾಣದಲ್ಲಿ ಸ್ಥಗಿತಗಳ ಸಂಖ್ಯೆ ಏರಿಕೆಯಾಗಿದೆ. ಎಸ್‌ಎಫ್‌ಎಲ್‌ಸಿ ಡಾಟ್‌ ಇನ್‌ ವರದಿಯ ಪ್ರಕಾರ, 2022ರಲ್ಲಿ 62 ಬಾರಿ, 2021ರಲ್ಲಿ 101, 2020ರಲ್ಲಿ 132, 2019ರಲ್ಲಿ 109, 2018ರಲ್ಲಿ 135, 2017ರಲ್ಲಿ 79, 2016ರಲ್ಲಿ 31, 2015ರಲ್ಲಿ 14, 2014ರಲ್ಲಿ 6, 2013ರಲ್ಲಿ 5, 2012ರಲ್ಲಿ ಮೂರು ಬಾರಿ ದೇಶದಲ್ಲಿ ವಿವಿಧ ಕಾರಣಗಳನ್ನು ನೀಡಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ.

2012ರಿಂದ ಸುಮಾರು 676 ಬಾರಿ ಭಾರತದಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ. ಜಮ್ಮು- ಕಾಶ್ಮೀರ ಒಂದರಲ್ಲೆ 411 ಬಾರಿ ಇಂಟರ್‌ನೆಟ್‌ ಸೇವೆ ಕಸಿದುಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಅತಿ ಹೆಚ್ಚು ಇಂಟರ್‌ನೆಟ್‌ ಸ್ಥಗಿತವನ್ನು ಎದುರಿಸಿದ ರಾಜ್ಯ ರಾಜಸ್ಥಾನ (89).

ಗೋವಾ, ಕೇರಳ, ಮಿಜೊರಾಂ, ಸಿಕ್ಕಿಂ, ಲಡಾಖ್‌ ಪ್ರದೇಶಗಳಲ್ಲಿ ಒಮ್ಮೆಯೂ ಇಂಟರ್‌ನೆಟ್‌ ನಿರ್ಬಂಧಿಸಲಾಗಿಲ್ಲ.

ಅಧಿಕ ಅವಧಿಯ ಇಂಟರ್‌ನೆಟ್‌ ಸ್ಥಗಿತ

ಭಾರತದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ,  2019 ಆಗಸ್ಟ್‌ 4ರಿಂದ 202ರ ಮಾರ್ಚ್‌ 4ರವರೆಗೆ ಬರೊಬ್ಬರಿ 213 ದಿನಗಳ ಕಾಲ ಜಮ್ಮು- ಕಾಶ್ಮೀರದಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಿದ್ದು, ಭಾರತದ ಇತಿಹಾಸದಲ್ಲೇ ಹೆಚ್ಚು ಅವಧಿಗೆ ಸ್ಥಗಿತಗೊಳಿಸಲಾಗಿತ್ತು. 2016ರ ಜುಲೈ 8ರಂದು ಬುರ್ಹಾನ್ ವಾನಿ ಅವರ ಹತ್ಯೆಯಿಂದ ಪ್ರತಿಭಟನೆಗಳು ಉದ್ವಿಗ್ನಗೊಂಡಿದ್ದವು. ಆದ್ದರಿಂದ 133 ದಿನಗಳ ಕಾಲ, 2016ರ ನವೆಂಬರ್ 19ರಿಂದ 2017ರ ಜನವರಿ ತನಕ ಇಂಟರ್‌ನೆಟ್‌ ಸೇವೆ ನಿಲ್ಲಿಸಲಾಗಿತ್ತು. 2019ರ ಆಗಸ್ಟ್‌ 4ರಿಂದ ಡಿಸೆಂಬರ್‌ರವರೆಗೆ ಸುಮಾರು 145 ದಿನಗಳ ಕಾಲ, ಇದು ಸಹ 137 ರದ್ದತಿಯ ಉದ್ದೇಶದಿಂದ ಸ್ಥಗಿತಗೊಳಿಸಲಾಗಿದೆ. ಲ್ಯಾಂಡ್‌ಲೈನ್‌ ಮೊಬೈಲ್, ಎಸ್‌ಎಂಎಸ್‌  ಸಂವಹನವನ್ನು ಇಂಟರ್‌ನೆಟ್‌ ಜೊತೆಗೆ ಸ್ಥಗಿತಗೊಳಿಸಲಾಗಿತ್ತು.

ಜಾಗತಿಕವಾಗಿ ನಿರ್ಬಂಧದಲ್ಲಿ ಮುಂದು

ಭಾರತ ವಿಶ್ವ ಇಂಟರ್‌ನೆಟ್‌ ಸ್ಥಗಿತದ ರಾಜಧಾನಿ ಎನ್ನಬಹುದಾದಷ್ಟು ಪ್ರಮಾಣದಲ್ಲಿ ನಿರ್ಬಂಧ ಹೇರಲಾಗಿದೆ. ಶಟ್‌ಡೌನ್ ಟ್ರ್ಯಾಕರ್ ಆಪ್ಟಿಮೈಸೇಶನ್ ಪ್ರಾಜೆಕ್ಟ್ ಡೇಟಾ ಪ್ರಕಾರ, 2018ರಲ್ಲಿ ವಿಶ್ವದ ಇಂಟರ್‌ನೆಟ್‌ ಸ್ಥಗಿತದ ಪೈಕಿ ಭಾರತದ ಪಾಲು ಶೇ. 67ರಷ್ಟಿದೆ.

ಜುಲೈ 2019ರ ಅಂತ್ಯದ ವೇಳೆಗೆ, ವಿಶ್ವದ ಒಟ್ಟು ಇಂಟರ್‌ನೆಟ್‌ ಸ್ಥಗಿತಗೊಳಿಸುವಿಕೆಗಳಲ್ಲಿ (120) ಶೇ. 67ರಷ್ಟು ಪಾಲನ್ನು ಭಾರತ ಹೊಂದಿದೆ.

ಈ ಸುದ್ದಿ ಓದಿದ್ದೀರಾ? ಬರಿ ಬಾಯಿ ಮಾತಿನ ಸುಳ್ಳು, ಉತ್ತರ ಪ್ರದೇಶ ಮಾದರಿ; ಕಣ್ಣು ಬಿಟ್ಟು ನೋಡಬೇಕಿದೆ ಅಂಕಿ ಅಂಶ

ವಿಶ್ವಸಂಸ್ಥೆಗೆ ವರದಿ ಏನು ಹೇಳುತ್ತದೆ?

ಇಂಟರ್‌ನೆಟ್‌ ಫ್ರೀಡಂ ಫೌಂಡೇಶನ್ (ಐಎಫ್‌ಎಫ್‌) ಇದೇ ವರ್ಷದ ಫೆಬ್ರವರಿ 11ರಂದು ಭಾರತದಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸುವಿಕೆಯ ವರದಿಯೊಂದನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್‌ನ ಕಚೇರಿಗೆ ಸಲ್ಲಿಸಿತು.

ಟಾಪ್ 10 ವಿಪಿಎನ್ ಮತ್ತು ಆಕ್ಸೆಸ್ ನೌ ವರದಿಗಳು ಹಾಗೂ ಸಾಫ್ಟ್‌ವೇರ್ ಫ್ರೀಡಂ ಲಾ ಸೆಂಟರ್, ಮೆಟಾದ ಡೇಟಾ ವರದಿ ಉಲ್ಲೇಖಿಸಿರುವ ಐಎಫ್‌ಎಫ್‌ ಭಾರತದಲ್ಲಿ ಇಂಟರ್‌ನೆಟ್‌ ಸ್ಥಗಿತ ಸಾಮಾನ್ಯವಾದ ವಿಷಯ ಎಂದು ಹೇಳಿತ್ತು.

ಟಾಪ್‌ ವಿಪಿಎನ್‌ ವರದಿಯ ಪ್ರಕಾರ, ಭಾರತ ಸರ್ಕಾರವು 2021ರಲ್ಲಿ 1,157 ಗಂಟೆಗಳ ಕಾಲ ನಾಗರಿಕರ ಮೇಲೆ ಪ್ರಮುಖ ಇಂಟರ್‌ನೆಟ್‌ ನಿರ್ಬಂಧಗಳನ್ನು ವಿಧಿಸಿದೆ. ಈ ಸ್ಥಗಿತದ ಸಮಯ 48 ದಿನಗಳಿಗಿಂತ ಹೆಚ್ಚು ಅವಧಿಗೆ ಸಮಾನವಾಗಿದೆ. 

ಸ್ಥಗಿತದಿಂದ ಸಂಭವಿಸಿದ ನಷ್ಟವೆಷ್ಟು?

2021ರ ಇಂಟರ್‌ನೆಟ್‌ ನಿರ್ಬಂಧದಿಂದಾಗಿ ಭಾರತೀಯ ಆರ್ಥಿಕತೆಗೆ ಸುಮಾರು ₹4,348 ಕೋಟಿ ನಷ್ಟ ಎದುರಿಸಿದೆ. ಮ್ಯಾನ್ಮಾರ್‌ನಲ್ಲಿ 2.8 ಶತಕೋಟಿ ಡಾಲರ್‌ ಮತ್ತು ನೈಜೀರಿಯದಲ್ಲಿ 1.5 ಶತಕೋಟಿ ಡಾಲರ್‌ ನಷ್ಟ ಉಂಟಾಗಿದೆ.

ಇಂಟರ್‌ನೆಟ್‌ ಸ್ಥಗಿತದಿಂದ ಹೆಚ್ಚು ನಷ್ಟ ಅನುಭವಿಸಿದ ರಾಷ್ಟ್ರಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. 2021ರಲ್ಲಿ, 21 ದೇಶಗಳಲ್ಲಿ 30,000 ಗಂಟೆಗಳಿಗಿಂತ ಹೆಚ್ಚು ಅವಧಿಗೆ ಇಂಟರ್‌ನೆಟ್‌ ಸ್ಥಗಿತಗೊಂಡಿದ್ದು, 5.45 ಶತಕೋಟಿ ಡಾಲರ್‌ ನಷ್ಟ ಎದುರಿಸಿವೆ. 2020ರಲ್ಲಿ 4.01 ಶತಕೋಟಿ ಡಾಲರ್‌ ವೆಚ್ಚವಾಗಿತ್ತು.

2020ರಲ್ಲಿ ವಿಶ್ವದಲ್ಲಿ ಇಂಟರ್‌ನೆಟ್‌ ಸ್ಥಗಿತದಿಂದ ಆದ ನಷ್ಟ 4.01 ಶತಕೋಟಿ ಡಾಲರ್ ಎಂದು ಅಂದಾಜಿಸಿದರೆ, ಭಾರತದ ಪಾಲು 2.8 ಶತಕೋಟಿ ಡಾಲರ್‌ನಷ್ಟಿದೆ. ಅರ್ಧಕ್ಕಿಂತ ಹೆಚ್ಚು ನಷ್ಟವನ್ನು ಭಾರತ ಅನುಭವಿಸುತ್ತಿದೆ.

ನಿರ್ಬಂಧಕ್ಕೆ ಸರ್ಕಾರಗಳ ಸಮರ್ಥನೆ

ತಪ್ಪು ಮಾಹಿತಿ ಮತ್ತು ವದಂತಿಗಳು ಒಂದು ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣವಾಗಬಹುದು. ಮಾಹಿತಿಯ ಹರಿವನ್ನು ತಡೆಯುವುದು ಬಿಕ್ಕಟ್ಟಿನ ಸಮಯದಲ್ಲಿ ಸಮುದಾಯಗಳ ನಡುವೆ ಶಾಂತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸರ್ಕಾರಗಳು ಹೇಳುತ್ತವೆ.

ಆದರೆ ಸುದ್ದಿ ಮಾಹಿತಿ ಮೂಲಗಳ ಅನುಪಸ್ಥಿತಿಯಲ್ಲಿ, ವದಂತಿಗಳು ಇನ್ನೂ ಹೆಚ್ಚು ಹರಡಬಹುದು ಎಂದು ಅನೇಕ ತಜ್ಞರು ಪ್ರತಿವಾದಿಸುತ್ತಾರೆ. ಅಲ್ಲದೆ, ಪಾವತಿಗಳು, ಬ್ಯಾಂಕಿಂಗ್ ಹಾಗೂ ಶೈಕ್ಷಣಿಕ ಪ್ರವೇಶಕ್ಕೆ ಸಂಬಂಧಿಸಿ ಪ್ರಮುಖ ಸೇವೆಗಳು ತಕ್ಷಣವೇ ಕಡಿತಗೊಳ್ಳುತ್ತವೆ, ಇದರಿಂದಾಗಿ ಬಹು ಹಂತಗಳಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ.

ಇಂಟರ್‌ನೆಟ್‌ ಸ್ಥಗಿತದ ಮಾನದಂಡ

2022ರ ಫೆಬ್ರವರಿಯಲ್ಲಿ ಸಂಸದ ವರುಣ್ ಗಾಂಧಿ ಅವರು, “ಸರ್ಕಾರವು ಇಂಟರ್‌ನೆಟ್‌ ಸ್ಥಗಿತಗೊಳಿಸುವಿಕೆಗಾಗಿ ದಾಖಲೆಗಳನ್ನು ನಿರ್ವಹಿಸುತ್ತದೆಯೇ ಅಥವಾ ಬೇರೆ ಯೋಜನೆ ಹೊಂದಿದೆಯೇ? ಇಲ್ಲದಿದ್ದರೆ, ಯಾವ ಪ್ರೋಟೋಕಾಲ್ ಅನುಸರಿಸಲಾಗುತ್ತದೆ" ಎಂದು ಪ್ರಶ್ನಿಸಿದ್ದರು.

ಅವರಿಗೆ ಉತ್ತರಿಸಿದ್ದ ಸಂವಹನ ರಾಜ್ಯ ಸಚಿವ ದೇವು ಸಿನ್ಹಾ ಚೌಹಾಣ್, “2017ರ ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು (ಸಾರ್ವಜನಿಕ ತುರ್ತುಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆ) ನಿಯಮಗಳ ಮೂಲಕ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ, ಇಂಟರ್‌ನೆಟ್‌ ಸ್ಥಗಿತಗೊಳಿಸಲು ರಾಜ್ಯಗಳಲ್ಲಿ ಪರಿಶೀಲನಾ ಸಮಿತಿಯನ್ನು ಕಡ್ಡಾಯಗೊಳಿಸಲಾಗಿದೆ" ಎಂದು ಹೇಳಿದ್ದರು.

ಸಾರ್ವಜನಿಕ ತುರ್ತುಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆಯ ಕಾರಣದಿಂದಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ನಿರ್ಬಂಧಕ್ಕೆ ಆದೇಶಿಸುವ ಅಧಿಕಾರ ಹೊಂದಿರುತ್ತಾರೆ.

ಈ ಸುದ್ದಿ ಓದಿದ್ದೀರಾ? ರೇವ್ಡಿ ಸಂಸ್ಕೃತಿ ಲೇವಡಿ ಮಾಡಿದ ಮೋದಿ; ಪಂಚರಾಜ್ಯಗಳ ಚುನಾವಣೆ ಪ್ರಣಾಳಿಕೆ ನೆನಪಿಸಿದ ನೆಟ್ಟಿಗರು

ಇಂಟರ್‌ನೆಟ್ ನಿರ್ಬಂಧಕ್ಕೆ ವಿರೋಧ

ಕಾಶ್ಮೀರಿ ಪತ್ರಕರ್ತೆ ಅನುರಾಧಾ ಭಾಸಿನ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸುವಿಕೆಯ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

2020ರ ಜನವರಿಯಲ್ಲಿ ನ್ಯಾಯಾಲಯವು, "ಅಭಿವ್ಯಕ್ತಿ ಸ್ವಾತಂತ್ರ್ಯದ ವಿವರಣೆಯ ಪ್ರಕಾರ, ಇಂಟರ್‌ನೆಟ್‌ ಮಾಧ್ಯಮದಲ್ಲಿ  ವ್ಯವಹಾರ ನಡೆಸಲು ಹಾಗೂ ಉದ್ಯೋಗ ನಡೆಸುವ ಸ್ವಾತಂತ್ರ್ಯವು ಆರ್ಟಿಕಲ್ 19 (1) ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆಯನ್ನು ಪಡೆಯುತ್ತದೆ" ಎಂದು ತೀರ್ಪು ನೀಡಿತ್ತು.

"ಇಂಟರ್ನೆಟ್ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸುವ ಆದೇಶವನ್ನು ಅನುಮತಿಸಲಾಗುವುದಿಲ್ಲ ಎಂಬ ಕಾರಣದಿಂದ ಇಂಟರ್‌ನೆಟ್‌ ಸೇವೆಗಳನ್ನು ಅಮಾನತುಗೊಳಿಸುವ ಎಲ್ಲಾ ಆದೇಶಗಳನ್ನು ತಕ್ಷಣವೇ ಪರಿಶೀಲಿಸುವಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ನಿರ್ದೇಶಿಸಲಾಗಿತ್ತು.

ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧವು, ಸಂವಿಧಾನದ 19 (2) ಮತ್ತು (6) ರ ಅಡಿಯಲ್ಲಿ ಆದೇಶಕ್ಕೆ ಅನುಗುಣವಾಗಿರಬೇಕು ಎಂದು ನ್ಯಾಯಾಲಯ ಹೇಳಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್