
- ವಿದ್ಯಾರ್ಥಿನಿಯ ಆಕ್ಷೇಪಾರ್ಹ ವಿಡಿಯೋ ಮಾಡಿ, ಹಣಕ್ಕೆ ಬೇಡಿಕೆ ಇಟ್ಟ ಸಹಪಾಠಿಗಳು
- ಮಧ್ಯಪ್ರದೇಶದ ಐಟಿಐ ಕಾಲೇಜಿನ ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು
ವಿದ್ಯಾರ್ಥಿನಿಯೊಬ್ಬಳು ಬಟ್ಟೆ ಬದಲಿಸುತ್ತಿರುವುದನ್ನು ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಮೇಲೆ ಮಧ್ಯಪ್ರದೇಶದ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ) ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ʻʻವಿಶ್ವಕರ್ಮ ಜಯಂತಿ ನಿಮಿತ್ತ ಸೆಪ್ಟೆಂಬರ್ 17ರಂದು ಭೋಪಾಲ್ನ ಐಟಿಐ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಆ ಸಂದರ್ಭದಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆʼʼ ಎಂದು ಪಿಪ್ಲಾನಿ ಪೊಲೀಸ್ ಠಾಣೆಯ ಉಸ್ತುವಾರಿ ಅಜಯ್ ನಾಯರ್ ತಿಳಿಸಿರುವುದಾಗಿ ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.
ಯುವತಿಯೊಬ್ಬಳು ಬಟ್ಟೆ ಬದಲಾಯಿಸುತ್ತಿರುವುದನ್ನು ವಿಡಿಯೋ ಮಾಡಿರುವ ಮೂವರು ವಿದ್ಯಾರ್ಥಿಗಳು, ಆ ವಿಡಿಯೋವನ್ನು ಆಕೆಯ ಸ್ನೇಹಿತರೊಬ್ಬರಿಗೆ ತೋರಿಸಿದ್ದಾರೆ. ವಿಡಿಯೋ ತೋರಿಸಿ 7,000 ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪಿಗಳು, ಹಣ ನೀಡದೇ ಇದ್ದಲ್ಲಿ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಸ್ನೇಹಿತನು ವಿಡಿಯೋ ಮಾಡಿರುವ ಬಗ್ಗೆ ಯುವತಿಗೆ ತಿಳಿಸಿದ್ದು, ನಂತರ ಇಬ್ಬರೂ ಪಿಪ್ಲಾನಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆರೋಪಿಗಳಾದ ರಾಹುಲ್ ಯಾದವ್, ಖುಷ್ಬು ಠಾಕೂರ್ ಹಾಗೂ ಅಯಾನ್ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 384 ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಈವರೆಗೆ ಯಾರನ್ನು ಬಂಧಿಸಿಲ್ಲ ಎಂದು ಶಿ ದ ಪೀಪಲ್ ವರದಿ ಮಾಡಿದೆ.
ಐಟಿಐ ಕಾಲೇಜು ಅಶೋಕ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವುದರಿಂದ ಹೆಚ್ಚಿನ ತನಿಖೆಗಾಗಿ ಅಶೋಕ ಗಾರ್ಡನ್ ಪೊಲೀಸರಿಗೆ ಪ್ರಕರಣವನ್ನು ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಸುಮನಹಳ್ಳಿ ಫ್ಲೈಓವರ್ ದುರಸ್ತಿಯ ಫಲ; ರಿಂಗ್ ರಸ್ತೆ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಳ
ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ಗೃಹ ಇಣುಕಿ ಸಿಕ್ಕಿಬಿದ್ದ ಆರೋಪಿ
ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಹಾಸ್ಟೆಲ್ ಕ್ಯಾಂಟಿನ್ನ ಉದ್ಯೋಗಿಯೊಬ್ಬ ಸ್ನಾನಗೃಹ ಇಣುಕಿ ನೋಡುವಾಗ ಸಿಕ್ಕಿಬಿದ್ದಿದ್ದು, ಆತನನ್ನು ಭಾನುವಾರ (ಸೆಪ್ಟೆಂಬರ್ 18) ರಾತ್ರಿ ಬಂಧಿಸಿದ್ದಾರೆ. ಆರೋಪಿಯು ಆಕ್ಷೇಪಾರ್ಹ ವಿಡಿಯೋಗಳನ್ನು ಸಹ ಚಿತ್ರೀಕರಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೊಬೈಲ್ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಂಡೀಗಢದಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿನಿಯರು
ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಚಿತ್ರೀಕರಿಸಿ, ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿನಿಯರು ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹಾಸ್ಟೆಲ್ ವಿದ್ಯಾರ್ಥಿನಿ, ಆಕೆಯ ಸ್ನೇಹಿತ ಹಾಗೂ ಶಿಮ್ಲಾದ ವ್ಯಕ್ತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಕ್ಯಾಂಪಸ್ನಲ್ಲಿ ಪ್ರತಿಭಟನೆ ಮುಂದುವರೆದಿದ್ದರಿಂದ ಇಂದಿನವರೆಗೆ (ಸೆಪ್ಟೆಂಬರ್ 24), ವಿಶ್ವವಿದ್ಯಾಲಯವನ್ನು ಮುಚ್ಚಿರುವುದಾಗಿ ವಿಶ್ವವಿದ್ಯಾಲಯ ಆಡಳಿತವು ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ತನಿಖೆ ನಡೆಸಲು ಮೂವರು ಮಹಿಳಾ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಮದ್ರಾಸ್ ಐಐಟಿಯ ಹಾಸ್ಟೆಲ್ನಲ್ಲಿ ಕ್ಯಾಂಟಿನ್ ಉದ್ಯೋಗಿಯೊಬ್ಬರು ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಬಂಧಿಸಿದ್ದ ಘಟನೆ ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆದಿತ್ತು.