
- ʼಪಂಜಾಬ್-ಹರಿಯಾಣ ಸರ್ಕಾರಗಳು ರೈತರ ಮೇಲೆ ಅತಿಕ್ರಮಣ ಮಾಡುತ್ತಿವೆʼ
- ಸರ್ಕಾರಿ, ಕೃಷಿ ಭೂಮಿ ಕಾರ್ಪೊರೇಟ್ ಕಂಪನಿಗಳಿಗಾಗಿ ಸ್ವಾಧೀನ ಆರೋಪ
ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಮತ್ತೊಮ್ಮೆ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ನ.24ರಂದು ಅಂಬಾಲಾ ದಂಡು ಪ್ರದೇಶದ ಬಳಿ ರೈಲು ಹಳಿಯನ್ನು ಬಂದ್ ಮಾಡಲು ಮುಂದಾಗಿದ್ದಾರೆ.
ಈ ಸಂಬಂಧ ಜಲಂಧರ್ನಲ್ಲಿ ಸೋಮವಾರ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಹರಿಯಾಣ ಘಟಕದ ಅಧ್ಯಕ್ಷ ಗುರ್ನಾಮ್ ಸಿಂಗ್ ಚದುನಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
"ಪಂಜಾಬ್ ಮತ್ತು ಹರಿಯಾಣ ಸರ್ಕಾರ ರೈತರ ಮೇಲೆ ಅತಿಕ್ರಮಣ ಮಾಡುತ್ತಿದೆ. ಸಾಗುವಳಿ ಉದ್ದೇಶಕ್ಕಾಗಿ ಜನರ ಸ್ವಾಧೀನದಲ್ಲಿದ್ದ ಸರ್ಕಾರಿ ಭೂಮಿ ಮತ್ತು ಪಂಜಾಬ್ನ ಶಾಮಲತ್ ಬಳಿಯ ರೈತರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಮುಂದಾಗುತ್ತಿದೆ. ಅದನ್ನು ವಿರೋಧಿಸಿ ಅಂಬಾಲಾ ಕಂಟೋನ್ಮೆಂಟ್ ಬಳಿಯ ಮೌಡಾ ಮಂಡಿಯಲ್ಲಿ ರೈಲು ಹಳಿಯನ್ನು ಬಂದ್ ಮಾಡಲಿದ್ದೇವೆ" ಎಂದು ತಿಳಿಸಿದ್ದಾರೆ.
“ಹಲವು ಲಕ್ಷ ಎಕರೆಗಳಷ್ಟಿರುವ ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಷಡ್ಯಂತ್ರ ನಡೆದಿದೆ. ಅಲ್ಲದೆ, ಈ ಭೂಮಿಯನ್ನು ದೊಡ್ಡ ಕಂಪನಿಗಳಿಗೆ ಹಸ್ತಾಂತರಿಸಿದರೆ ಎರಡು ವರ್ಷದ ಹಿಂದಿನಂತೆ ಮತ್ತೆ ರೈತ ವಿರೋಧಿ ಕೃಷಿ ಕಾನೂನು ಜಾರಿಯಾಗುವ ಸಾಧ್ಯತೆಯಿದೆ. ಈಗಾಗಲೇ ದೇಶದ ರೈತರ ಮೇಲೆ ₹ 8 ಲಕ್ಷ ಕೋಟಿ ಸಾಲವಿದ್ದು, ಪ್ರತಿ ಅರ್ಧ ಗಂಟೆಗೊಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ" ಎಂದು ಚದುನಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕುಲಾಂತರಿ ಸಾಸಿವೆಗೆ ಅನುಮತಿ | ಆರ್ಎಸ್ಎಸ್ ಸೇರಿದಂತೆ ಹಲವು ಬಿಜೆಪಿ ಅಂಗಸಂಸ್ಥೆಗಳ ವಿರೋಧ; ಪ್ರಧಾನಿಗೆ ಪತ್ರ
"ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾನೂನುಗಳನ್ನು ತಂದಾಗ ಅವುಗಳ ರದ್ದತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲು ದೆಹಲಿ ಹೋರಾಟಕ್ಕೆ ಇಲ್ಲಿಂದಲೇ ಪ್ರಯಾಣ ಆರಂಭಿಸಲಾಗಿತ್ತು. ಆಗ ರೈಲು ಪ್ರಯಾಣಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ರೈತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ರೈಲ್ವೆ ಇಲಾಖೆಗೆ ಯಾವುದೇ ನಿರ್ದೇಶನ ನೀಡಿಲ್ಲ" ಎಂದು ಅವರು ಆರೋಪಿಸಿದರು.