ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ ಪಲ್ಟಿ; ಆರು ಯೋಧರ ಸಾವು

  • ಭದ್ರತಾ ಸಿಬ್ಬಂದಿ ಚಂದನ್ವಾರಿಯಿಂದ ಪಹಲ್ಗಾಮ್‌ಗೆ ತೆರಳುತ್ತಿದ್ದ ವೇಳೆ ದುರ್ಘಟನೆ
  • ಯೋಧ ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಭದ್ರತಾ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ಬಸ್ ನದಿಗೆ ಉರುಳಿ ಆರು ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪೊಲೀಸರು ಸಾವನ್ನಪ್ಪಿದ್ದಾರೆ.

37 ಐಟಿಬಿಪಿ ಸಿಬ್ಬಂದಿ ಮತ್ತು ಇಬ್ಬರು ಜಮ್ಮು ಕಾಶ್ಮೀರ ಪೊಲೀಸರು ಸೇರಿದಂತೆ 39 ಭದ್ರತಾ ಸಿಬ್ಬಂದಿಯನ್ನು ಹೊತ್ತಿದ್ದ ಬಸ್‌ ಅನಂತನಾಗ್ ಜಿಲ್ಲೆಯ ಚಂದನ್ವಾರಿಯಲ್ಲಿ ನದಿಗೆ ಜಾರಿದೆ. ಬಸ್‌ನ ಬ್ರೇಕ್‌ ವೈಫಲ್ಯವೇ ಈ ಅಪಘಾತಕ್ಕೆ ಕಾರಣ ಎಂದು ವರದಿಯಾಗಿದೆ.

ಅಮರನಾಥ ಯಾತ್ರೆಯ ಕರ್ತವ್ಯ ಮುಗಿಸಿದ ಬಳಿಕ ಸಿಬ್ಬಂದಿಗಳು ಚಂದನ್ವಾರಿಯಿಂದ ಪಹಲ್ಗಾಮ್‌ಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಅಪಘಾತ ಸಂಭವಿದ್ದು, ಆರು ಐಟಿಬಿಪಿ ಸಿಬ್ಬಂದಿಗಳು ಸಾವನಪ್ಪಿದ್ದಾರೆ. 10 ಭದ್ರತಾ ಸಿಬ್ಬಂದಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಐಟಿಬಿಪಿ ಸಿಬ್ಬಂದಿ ಮತ್ತು ಇಬ್ಬರು ಜಮ್ಮು ಕಾಶ್ಮೀರ ಪೊಲೀಸರು ಸೇರಿದಂತೆ 30 ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಅಪಘಾತದ ನಂತರ 19 ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡರು.

ಈ ಸುದ್ದಿ ಓದಿದ್ದೀರಾ? ಕಾಶ್ಮೀರ | ಉಗ್ರರಿಂದ ಎರಡು ಪ್ರತ್ಯೇಕ ಗ್ರೆನೇಡ್ ದಾಳಿ: ಓರ್ವ ಪೊಲೀಸ್ ಸಹಿತ ಇಬ್ಬರಿಗೆ ಗಾಯ

ಅನಂತನಾಗ್‌ ಸರ್ಕಾರಿ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆ ಹಾಗೂ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡಗಳನ್ನು ಹೈ ಅಲರ್ಟ್ ಮಾಡಲಾಗಿದೆ ಎಂದು ಅನಂತನಾಗ್‌ನ ಉಪ ವಿಭಾಗಾಧಿಕಾರಿ ಪಿಯೂಷ್ ಸಿಂಗ್ಲಾ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಅಪಘಾತಕ್ಕೀಡಾದ ಭದ್ರತಾ ಸಿಬ್ಬಂದಿಗಳನ್ನು ಪಹಲ್ಗಾಮ್‌ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.

"ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಪ್ರದೇಶದಲ್ಲಿ 39 ಐಟಿಬಿಪಿ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಕಮರಿಗೆ ಬಿದ್ದ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಗಾಯಗೊಂಡ ಯೋಧರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ ಮತ್ತು ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ" ಎಂದು ಸಂಸದ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್