ಜಾರ್ಖಂಡ್ | ಮಹುವಾ ಸಂಗ್ರಹಿಸಲು ಕೃಷಿ ಬಲೆ; ಕಾಳ್ಗಿಚ್ಚು ತಪ್ಪಿಸಲು ಅರಣ್ಯಾಧಿಕಾರಿಗಳ ಯೋಜನೆ

MOHUA
  • ಪಲಾಮು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮುಂದಿನ ವರ್ಷದಿಂದ ಜಾರಿ
  • ಅರಣ್ಯ ವ್ಯಾಪ್ತಿಯ ಹಲವೆಡೆ ಯೋಜನೆಯ ಪ್ರಾಯೋಗಿಕ ಅನುಷ್ಠಾನ 

ಜಾರ್ಖಂಡ್‌ನ ಪಲಾಮು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು  (ಪಿಟಿಆರ್) ಕಾಡ್ಗಿಚ್ಚಿನಿಂದ ರಕ್ಷಿಸಲು ಅರಣ್ಯ ಅಧಿಕಾರಿಗಳು ಕೃಷಿ ಬಲೆ (ಪರದೆ) ಪರಿಚಯಿಸಲು ಯೋಜಿಸಿದೆ.

ಕೃಷಿ ಬಲೆ (ಪರದೆ) ಪ್ರಾಯೋಗಿಕ ಬಳಕೆ ಯಶಸ್ವಿಯಾಗಿದ್ದು, ಮುಂದಿನ ವರ್ಷದಿಂದ ಇದನ್ನು ಜಾರಿಗೆ ತರಲು ಪ್ರಯತ್ನಿಸುವುದಾಗಿ ಪಿಟಿಆರ್‌ನ ಅಧಿಕಾರಿಗಳು ತಿಳಿಸಿದ್ದಾರೆ. 

'ಮಹುವಾ' ಹಣ್ಣು ಆರಿಸಲು ಮತ್ತು ಪ್ರಾಣಿಗಳ ಬೇಟೆಗಾಗಿ ಹೋಗುವ ಸ್ಥಳೀಯ ಗ್ರಾಮಸ್ಥರು ಉದ್ದೇಶಪೂರ್ವಕವಾಗಿ ಕಾಡ್ಗಿಚ್ಚಿಗೆ ಕಾರಣರಾಗುತ್ತಿದ್ದು, ಇದನ್ನು ತಪ್ಪಿಸಲು ಅರಣ್ಯಾಧಿಕಾರಿಗಳು ಹರಸಾಹಸಪಡುತ್ತಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಾಗಿದೆ. ಮರಗಳಿಂದ ಬಿದ್ದಿರುವ ‘ಮಹುವಾ’ ಹಣ್ಣುಗಳನ್ನು ಸುಲಭವಾಗಿ ಪತ್ತೆ ಮಾಡಲು ಒಣ ಎಲೆಗಳಿಗೆ ಸ್ಥಳೀಯರು ಬೆಂಕಿ ಹಚ್ಚುತ್ತಿರುವುದು ಅರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚಿಗೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದ್ದರಿಂದ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪಿಟಿಆರ್ ಅರಣ್ಯ ಅಧಿಕಾರಿಗಳು ಹೊಸ ಮಾರ್ಗ ಕಂಡುಕೊಂಡಿದ್ದಾರೆ. "ಅರಣ್ಯ ವ್ಯಾಪ್ತಿಯ ಮರಗಳ ಕೆಳಗೆ ಕೃಷಿ- ಬಲೆಗಳನ್ನು ಹರಡಲಾಗುತ್ತದೆ. ಮರಗಳಿಂದ ಬೀಳುವ 'ಮಹುವಾ' ಹಣ್ಣುಗಳು ಕೃಷಿ ಬಲೆಗಳ ಮೇಲೆ ಸಂಗ್ರಹಿಸಲ್ಪಡುತ್ತವೆ. ನಂತರ ಅರಣ್ಯವಾಸಿಗಳು ಇವನ್ನು ಆಯ್ದುಕೊಳ್ಳಬಹುದಾಗಿದೆ. ಗ್ರಾಮಸ್ಥರು ಒಣಗಿದ ಎಲೆಗಳಿಗೆ ಬೆಂಕಿಗೆ ಹಾಕುವ ಅಗತ್ಯವಿಲ್ಲ” ಎಂದು ಪಿಟಿಆರ್ ನಿರ್ದೇಶಕ ಕುಮಾರ್ ಅಶುತೋಷ್ ಹೇಳಿದ್ದಾರೆ.

ಈ ವಿಧಾನವನ್ನು ಈಗಾಗಲೇ ಪ್ರಯೋಗ ಮಾಡಲಾಗಿದೆಯಾದರೂ ಇದು ಆರಂಭಿಕ ಹಂತದಲ್ಲಿದೆ. ಮುಂದಿನ ವರ್ಷ 'ಮಹುವಾ' ಋತುವಿನ ಪ್ರಾರಂಭದಲ್ಲೇ ಈ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಅವರು ಹೇಳಿದರು.

Image
MOHUA 1

ಜಾರ್ಖಂಡ್‌ನಾದ್ಯಂತ ಬಹುತೇಕ ಬುಡಕಟ್ಟು ಕುಟುಂಬಗಳಿಗೆ 'ಮಹುವಾ' ಹಣ್ಣು ಮಾರಾಟವು ಆದಾಯದ ಪ್ರಮುಖ ಮೂಲ. ಅಲ್ಲಿ ಅವರು ಹೂವುಗಳನ್ನು ತಿಂದು, ಹಣ್ಣುಗಳನ್ನು ಧಾನ್ಯಗಳಿಗೆ ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ಹಣಕ್ಕೂ ಮಾರುತ್ತಾರೆ. ದೈನಂದಿನ ಸಂಗ್ರಹಣೆಯಿಂದ ಬರುವ ಆದಾಯ ಸಾಮಾನ್ಯವಾಗಿ ಕನಿಷ್ಠ ವೇತನಕ್ಕಿಂತ ಕಡಿಮೆಯಿದ್ದರೂ, ಮಾರ್ಚ್-ಏಪ್ರಿಲ್‌ನಲ್ಲಿ 'ಮಹುವಾ' ಕೀಳುವ ಸುಗ್ಗಿಯಾಗಿದ್ದು, ಹಿಂಗಾರು ಕೃಷಿಯ ಭಾಗವೆಂಬಂತೆ ನಿರ್ಣಾಯಕ ದುಡಿಮೆಯಾಗಿದೆ. 

ಪ್ರತಿ ವರ್ಷ ಪಲಾಮು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ (ಪಿಟಿಆರ್) ಕನಿಷ್ಠ 35- 40 ಅಗ್ನಿ ಅವಘಡಗಳು ಸಂಭವಿಸಿದ ವರದಿಯಾಗುತ್ತವೆ. ಇದರಿಂದ ಕಾಡಿನ ಸಸ್ಯ ಮತ್ತು ಪ್ರಾಣಿಗಳಿಗೆ ಸಾಕಷ್ಟು  ಹಾನಿ ಸಂಭವಿಸುತ್ತದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. 

ಒಮ್ಮೆ ಕಾಡಿಗೆ ಬೆಂಕಿ ಬಿದ್ದರೆ ಕನಿಷ್ಠ 1.5-2 ಎಕರೆ ಭೂಮಿಯನ್ನು ಆವರಿಸುತ್ತದೆ. ಹಗಲಿನಲ್ಲಿ ವ್ಯಾಪಿಸಿದರೆ ಅದರ ಭೀಕರತೆ ಕಡಿಮೆ ಇರುತ್ತದೆ. ರಾತ್ರಿ ಬೆಂಕಿ ಬಿದ್ದರೆ ವಿಶಾಲವಾದ ಪ್ರದೇಶದ ಹಾನಿಗೆ ಕಾರಣವಾಗುತ್ತದೆ. 

ಈ ಸುದ್ದಿ ಓದಿದ್ದೀರಾ:? ಜಮೀನು ಒತ್ತುವರಿಗೆ ಮೊದಲು ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟಿಸಿದ ಗ್ರಾಮಸ್ಥರ ಮೇಲೆ ಲಾಠಿ ಬಳಸಿದ ಪೊಲೀಸರು 

“ಕೃಷಿ ಬಲೆಯ ಕಲ್ಪನೆ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕಿದೆ. ಇದರಿಂದ ಹೆಚ್ಚು ಮಂದಿ ಈ ವಿಧಾನ ಅಳವಡಿಸಿಕೊಳ್ಳುತ್ತಾರೆ. ಪಿಟಿಆರ್‌ನ ಪೂರ್ವ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ  ಮಾಡಲಾದ ಈ ಪ್ರಯೋಗ ಸಾಕಷ್ಟು ಯಶಸ್ವಿಯಾಗಿದೆ. ಇದನ್ನು ಇತರ ಪ್ರದೇಶಗಳಿಗೂ ವಿಸ್ತರಿಸಬೇಕಾಗಿದೆ” ಎಂದು ಪಿಟಿಆರ್ ಉಪ ನಿರ್ದೇಶಕ ಮುಖೇಶ್ ಕುಮಾರ್ ಹೇಳಿದರು.

ಪಿಟಿಆರ್ ಅರಣ್ಯ 1129 ಕಿಲೋ ಮೀಟರ್ ವಿಸ್ತೀರ್ಣ ಹೊಂದಿದ್ದು, 206 ಹಳ್ಳಿಗಳಲ್ಲಿ ಒಂದು ಲಕ್ಷಕ್ಕೂ ಅಧಿಕ 'ಮಹುವಾ' ಮರಗಳಿವೆ. ಬೆಂಕಿ ಅವಘಡಗಳಿಂದ ಹಲವು ಪ್ರಾಣಿ- ಸಸ್ಯ ಸಂಕುಲಕ್ಕೆ ಇವುಗಳ ವಾಸಸ್ಥಾನ, ಆಹಾರ ಮೂಲವಾದ ಪೊದೆಗಳು ಮತ್ತು ಕೀಟಗಳು ಸುಟ್ಟು ಹೋಗುತ್ತವೆ. ಇದರಿಂದ ಪ್ರಾಣಿ, ಪಕ್ಷಿ ಸಂತತಿ ಕುಸಿಯುತ್ತದೆ. ಕಾಡು ನಾಶವಾಗಿ ತಾಪಮಾನ ಬದಲಾವಣೆಯಿಂದ ನಾನಾ ಪ್ರಾಣಿ- ಪಕ್ಷಿ ಪ್ರಭೇದ ವಲಸೆ ಹೋಗುವ ಅನಿವಾರ್ಯತೆ ಎದುರಾಗುತ್ತದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು. 

ನಿಮಗೆ ಏನು ಅನ್ನಿಸ್ತು?
1 ವೋಟ್