ಜೋಗಪ್ಪಂದ್ರು ಕತಿ | ನಾನ್‌ ಜೋಗಪ್ಪ ಆಗಿದ್ದೇನ್‌ ಸುಲಭ್‌ ಇರ್ಲಿಲ್ಲ!

ಕುಟುಂಬ, ಸಮಾಜ, ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಜೋಗಪ್ಪ ಸಮುದಾಯವೂ ಒಂದು. ಉತ್ತರ ಕರ್ನಾಟಕದ ಸುಮಾರು ಹದಿನೈದು ಜಿಲ್ಲೆಗಳಲ್ಲಿ ಮುತ್ತುಕಟ್ಟಿಕೊಂಡು, ದೇವರ ಸೇವೆ ಮಾಡುತ್ತಾ ಬದಕುತ್ತಿರುವ ಈ ಸಮುದಾಯದವರಾದ ಸೋಮಕ್ಕ ತಾನು ಜೋಗಪ್ಪ ಆದ ಬಗೆಯನ್ನು ಅವರದೇ ಮಾತುಗಳಲ್ಲಿ ವಿವರಿಸಿದ್ದಾರೆ.

ನಮಸ್ಕಾರ ನಾನು ಸೋಮಕ್ಕ (ಹೆಸರು ಬದಲಿಸಲಾಗಿದೆ). ಜಿಲ್ಲೆ ಬಾಗಲಕೋಟೆ, ತಾಲೂಕು ಹುನುಗುಂದು, ಕಮತಗಿಯಲ್ಲಿ ನಾವಿರೋದು. ನಾ ಜೋಗಪ್ಪ ಆಗಿ ಹನ್ನೆರಡು ವರ್ಷ ಆಯ್ತು. ನಾನು ಹುಟ್ತಾ ಗಂಡಾಗಿದ್ದೆ. ಎಂಟ್ನೆ ಇಯತ್ತೆಗೆ ಹೋಗುವಾಗ, ನಮಗೆ ಹೆಣ್ಮಕ್ಳ ಭಾವ್ನೆಗಳೆಲ್ಲ ಸ್ಟಾರ್ಟಾಯ್ತು. ಸ್ಕೂಲಲ್ಲಿ ನೀನ್‌ ಗಂಡ್ಸಾಗಿದಿಯಾ ಏನಕ್ಕೆ ಹೆಣ್ಣಿಂತರ ಮಾತಾಡ್ತಿಯಾ ಅಂತೇಳಿ ನಮ್ಗೆಲ್ಲ ಹೇಳ್ತಿದ್ರು.

ಮನೆಗೋದ್ರೆ ಮಮ್ಮಿ ಪಪ್ಪ, ನೀನ್‌ ಗಂಡಾಗಿದಿಯಾ ಏನಕ್‌ ಹೆಣ್ಣಿನ್‌ ತರ ಆಡ್ತಿಯಾ, ನೀನ್‌ ಹಂಗೆಲ್ಲ ಆಡ್ಬಾರ್ದು ಅಂತೇಳೊರು. ಅಕ್ಕ ಪಕ್ಕದಲ್ಲಿದ್ದೋರು ಹಂಗೆ ಹೇಳ್ತಿದ್ರು. ನೀನ್ಯಾಕ್‌ ಹಿಂಗಿದಿಯಾ? ಜೋಗಪ್ಪಂತರ ಆಡ್ತಿಯಾ, ಚಕ್ಕ ಅಂತೆಲ್ಲ ಅನ್ನೋರು. ಸ್ಕೂಲಲ್ಲಿ ನಂಗೆ ಹೆಣ್ಮಕ್ಳು ಕೂರೋ ಕಡೆಗೂ ಬಿಡ್ತಿರ್ಲಿಲ್ಲ, ಗಣ್ಮಕ್ಳು ಕೂರೋ ಕಡೆಗೂ ಅಷ್ಟೆನೆ. ಯಾಕಿಂಗ್‌ ಮಾಡ್ತಿರಾ ಅಂತ ಕೇಳಿದ್ರೆ, ಹೋಗೊ ನೀನು ಹೆಣ್ಣಿನ್‌ ತರ ಇದಿಯಾ ಅಲ್ಲೋಗ್‌ ಕೂರು ಅನ್ನೋರು. ಸರ್ರ ಅನ್ನೋರು ನೀನ್‌ ನೋಡಾಕ್‌ ಗಂಡಿನ್‌ ತರ ಇದಿಯಾ ಹೆಣ್ಣಿನ್‌ ತರ ಯಾಕ್‌ ನಡಿತಿಯಾ ಅಂತ್‌ ಅನ್ನೋರು.

ಅವ್ರೆಲ್ಲ ಹಿಂಗೆ ಮಾತಾಡಿದ್ರೆ ಮನ್ಸಿಗ್‌ ಒಂತರಾ ನೋವಾಗೋದು. ಏನಪ್ಪ ನಂಗೀತರ ಜೀವ್ನ ಬಂತಲ್ಲ. ಈ ತರ ಯಾಕಾಯ್ತು? ಅನಿಸ್ತಿಸ್ತು. ಆದ್ರೆ ಬೆಳಿತ ಬೆಳಿತ ಹೆಣ್ಣಿನ್‌ ಭಾವ್ನೆಗಳೆಲ್ಲ ಸ್ಟಾರ್ಟಾಗ್ಬಿಟಿತ್ತು ನಂಗೆ. ನಮ್ಮಪ್ಪ, ಅಮ್ಮ, ಅಣ್ತಮ್ರು ಯಾರು ನನ್ನ ಸೇರಿಸ್ಕೊಳತಿರ್ಲಿಲ್ಲ. ನೀನ್‌ ಜೋಗಪ್ಪ ಆಗೋದು ಇಷ್ಟ ಇಲ್ಲ, ಜೋಗಪ್ಪ ಆಗ್ಬೇಡ ನೀನು ಅಂತ ತುಂಬಾ ಬೈಯ್ಯೋರು. ಗಂಡ್ಸ್‌ ನೀನು ಗಂಡಸ್ರು ತರನೇ ಇರ್ಬೇಕು ಅಂತೇಳಿ ಹೊಡುದ್ರು, ಬಡುದ್ರು. ಮದ್ವೆ ಆಗು ಅಂತ ಜುಲ್ಮೆ ಮಾಡಿದ್ರು.

ಹಿಂಗೆ ಆಗುವಾಗ ನನ್‌ ಮೈಮೇಲೆ ಯಲ್ಲವ್ವ ದೇವ್ರ್‌ ಬಂದು ಕಾಡೋಕ್‌ ಶುರು ಮಾಡಿದ್ಲು. ಅಂದ್ರೆ ಮೈಮೇಲೆಲ್ಲಾ ಹುರುಕು ಹುಣ್ಣಾಗೋದು. ಬೇರೆ ಎರಡ್ಮೂರ್‌ ಕಡೆ ಕೇಳ್ದಾಗ, ಇದು ಯಲ್ಲವ್ವಂದು, ಯಲ್ಲವ್ವನ್ನ ಕಟ್ಕೊಂಡ್ರೆ ಸರಿ ಹೋಗತ್ತೆ ಅಂತೇಳಿದ್ರು. ಜೋಗಪ್ಪೋರೆಲ್ಲ ಹಂಗೆ ಹೇಳಿದ್ರು. ಆ ಟೈಮಿಗೆ ಮನೆಲಿ ಅಪ್ಪ ತೀರೋದ್ರು. ಆಮೇಲೆ ಮನೆಲಿ ಎಲ್ರನ್ನು ಒಪ್ಸಿ ಜೋಗಪ್ಪ ಆದೆ. 

ಜೋಗಪ್ಪ ಆಗಿದ್ದೇನ್‌ ಸುಲಭ್‌ ಇರ್ಲಿಲ್ಲ. ಅಪ್ಪ ಸತ್ಮೇಲೆ ಇನ್ನು ನಮಗೆ ಕಷ್ಟ ಬಂತು. ಆದ್ರೆ ಮೈತುಂಬಾ ಹುರುಕ್‌ ಹುಣ್ಣು ಆಗಿತ್ತಲ್ಲ, ಎಷ್ಟು ದವಾಖಾನೆಗೆ ತೋರ್ಸಿದ್ರು ಕಮ್ಮಿ ಆಗ್ಲಿಲ್ಲ. ಅದಿಕ್ಕೆ ಕೊನಿಗೆ ದೇವ್ರ್‌ ಕಟ್ಕೊಂಡ್ರೆ ಸರಿ ಹೋಗತ್ತೆ ಅಂತೇಳಿ, ಸೌದತ್ತಿಗೋಗಿ ಮುತ್ತು ಕಟ್ಟಿಸ್ಕೊಂಡು ಬಂದೆ. ಆಮೇಲೆ ಆರೋಗ್ಯನು ಸರಿ ಹೋಯ್ತು.

ಈ ಸುದ್ದಿ ಓದಿದ್ದೀರಾ?: ಆಗಸ್ಟ್ 15ರಂದು ಎಲೆಕ್ಟ್ರಿಕ್ ಕಾರು ಅನಾವರಣ| ಓಲಾ ಸಂಸ್ಥೆ ತಯಾರಿ

ಸಮಾಜ ನಮ್ಗೇನು ಗೌರವಾನೇ ಕೊಡಲ್ಲ. ಇವ್ರದು ಒಂದು ಜೀವ್ನ ನಾ? ದುಡ್ಕೊಂಡು ತಿನ್ನೋಕಾಗಲ್ವ? ಭಿಕ್ಷೆ ಬೇಡ್ಕೊಂಡು ತಿನ್ನೋಕೆ ಇವ್ರಿಗೇನ್‌ ನಾಚಿಕೆ ಆಗಲ್ವ? ಗಂಡ್ಸಿದ್ದೋನು ಗಂಡ್ಸಾಗೇ ಇರ್ಬೇಕು, ಹಿಂಗ್ಯಾಕಾಗಿದಿಯೋ ಯಪ್ಪ ಅಂತೆಲ್ಲಾ ಮಾತಾಡ್ತಾರೆ. ಜೋಗಪ್ಪ, ಚಕ್ಕ, ಹಿಜಡಾ ನೀನು ಅಂತೆಲ್ಲ ಮಾತಾಡ್ತಾರೆ.

ಒಪ್ಪೊತ್ತಿನ್‌ ಊಟಕ್ಕೂ ಕಷ್ಟ ಪಡ್ಬೇಕು. ಸ್ವಂತ ಮನೆ ಇಲ್ಲ. ಅಣ್ತಮ್ಮರು ಸೇರೋದಿಲ್ಲ. ಹೆಂಗೊ ಜೀವ್ನ ಮುಂದುಕೋಗ್ತೈತಿ. ಅಣ್ತಮ್ಮರ್‌ ಮಾತ್‌ ಕೇಳೋಕಾಗಲ್ಲ. ಹೆಂಗೆಲ್ಲ ಮಾತಾಡ್ತಾರೆ ಅವ್ರು. ಯಾವಾಗ್‌ ಮನಿಯಿಂದ ಹೊರಗಾಗ್ತಾರೊ ಗೊತ್ತಿಲ್ಲ ಅನ್ನಂಗೈತಿ ನಮ್‌ ಕತಿ.

ಇವಾಗ ಜೋಗಪ್ಪ ಆಗಿ ಭಂಡಾರ ತಂಗೊಂಡು ಊರೂರ್‌ ಸುತ್ತಾಡ್ತಿನಿ, ಭಂಡಾರ ಹಚ್ಚಿದ್ರೆ ಒಂದು ಎರಡ್‌ ರೂಪಾಯ್‌ ಕೊಡ್ತಾರೆ. ಹಂಗೆ ಭಿಕ್ಷೆ ಬೇಡ್ಕೊಂಡು ಹೆಂಗೊ ಜೀವ್ನ ನಡೆಸ್ತಿದಿನಿ. ಜಾತ್ರೆಗಳಿದ್ರೆ ಹರಕೆ ಕೊಡ ತಗೊಂಡೋಗ್ತಿವಿ, ಇದ್ರಲ್ಲೆ ನಮ್‌ ಜೀವ್ನ ನಡಿತಿರೋದು. ಯಲ್ಲವ್ವನ ಪದ ಹಾಡೋಕೆ ನಾವು ಮೂರ್ನಾಲ್ಕು ಜನ ಗುಂಪ್‌ಗುಂಪಾಗಿ ಹೋಗ್ತಿವಿ. ಇಬ್ರು ಹಾಡ್ತಾರೆ, ಇಬ್ರು ಕುಣಿತಾರೆ. ಅಲ್ಲಿ ಸಿಗೊ ದುಡ್ಡಲ್ಲಿ ಎಲ್ರು ಹಂಚ್ಕೊತಿವಿ.

ಸರ್ಕಾರ್ದಿಂದ ಮೈತ್ರಿ ಯೋಜ್ನೆ ಅಂತ ಮಾಡಿದಾರೆ. ಈ ಮೊದ್ಲು 600 ರುಪಾಯಿ ಕೊಡ್ತಿದ್ರು. ಈಗ 800 ರುಪಾಯಿ ಕೊಡ್ತಾರೆ. ಆದ್ರೆ ಅಷ್ಟ್ರಲ್ಲಿ ಜೀವ್ನ ಸಾಗ್ಸೋಕೆ ಹೆಂಗ್‌ ಸಾಧ್ಯ? ನಮ್ಮಂತೋರಿಗೆಲ್ಲ ಸ್ವಂತ ಮನೆ ಇರ್ಬೇಕು, ಕೆಲ್ಸ ಇರ್ಬೇಕು. ಆಗ ನಾವು ಸ್ವತಂತ್ರವಾಗಿ ಬದುಕ್ಬೋದಲ್ಲ ಸಮಾಜ್‌ದಲ್ಲಿ. ಸರ್ಕಾರ ನಮ್‌ ಕಡಿಗೂ ಗಮ್ನ ಕೊಡ್ಬೇಕು.

ನಮ್ಗೆ ಚಿಕ್ಕ ವಯಸ್ಸಿಗೆ ಯಾಕಿಂಗ್‌ ಆಗ್ತಿದೆ ಅನ್ನೋದನ್ನ ಹೇಳೋರಿರ್ಬೇಕು. ದಾರಿ ತೋರ್ಸೋರು ಇರ್ಬೇಕು. ನಂಗೂ ಚಿಕ್ಕೋಳಿದ್ದಾಗ್ಲೆ ಗೊತ್ತಾಗಿದ್ದಿದ್ರೆ. ನಾನು ತಿಳ್ಕೊಂಡು, ಇರ್ಲಿ ಅಂತ ಮುಂದುಕೋದ್ತಿದ್ದೆ. ಆದ್ರೆ ನಮ್ಮಲ್ಲಿ ಎಲ್ರು ಸ್ಕೂಲ್‌ಗೆ ಓದೋದ್‌ ನಿಲ್ಸಿರ್ತಾರೆ. ಆದ್ರೆ ನಮ್ಗು ಓದೋಕೆ ಅವ್ಕಾಶ ಸಿಕ್ರೆ ಚೆನ್ನಾಗಿರತ್ತೆ. ಜಾಬ್‌ ಬೇಕು. ನಮ್‌ ಸಮಾಜ್‌ದಲ್ಲಿ ಹೆಣ್ಣು, ಗಂಡಿಗೆ ಏನೆಲ್ಲ ಹಕ್ಕುಗಳಿವೆ. ಅದು ನಮ್‌ ಸಮುದಾಯದವ್ರಿಗೂ ಸಿಗ್ಬೇಕು. ಆಗ ಎಲ್ರು ಖುಷಿಯಾಗಿ ಇರೋಕಾಗತ್ತೆ.

ನಿರೂಪಣೆ: ಮಲ್ಲು ಕುಂಬಾರ್‌

ನಿಮಗೆ ಏನು ಅನ್ನಿಸ್ತು?
0 ವೋಟ್