ಕೇರಳ | ಒಂದೇ ಸಮಯಕ್ಕೆ ಸರ್ಕಾರಿ ಕೆಲಸ ಗಳಿಸಿದ ತಾಯಿ- ಮಗ

  • ಒಟ್ಟಿಗೆ ಸರ್ಕಾರಿ ಉದ್ಯೋಗ ಗಳಿಸಿದ ಕೇರಳದ ತಾಯಿ-ಮಗ
  • ಎಲ್‌ಜಿಎಸ್‌ ಪರೀಕ್ಷೆಯಲ್ಲಿ ಶೇ. 92ರಷ್ಟು ಅಂಕ ಗಳಿಸಿದ 42 ವರ್ಷದ ಬಿಂದು

ಕೇರಳದ ತಾಯಿ ಮತ್ತು ಮಗ ಇಬ್ಬರು ಒಟ್ಟಿಗೆ ಸರ್ಕಾರಿ ಹುದ್ದೆಗಳಿಸಿ, ಸುದ್ದಿಯಲ್ಲಿದ್ದಾರೆ. 42 ವರ್ಷದ ಬಿಂದು ಲಾಸ್ಟ್‌ ಗ್ರೇಡ್‌ ಪರೀಕ್ಷೆಯಲ್ಲಿ (ಎಲ್‌ಜಿಎಸ್‌) ಶೇ. 92ರಷ್ಟು ಅಂಕ ಗಳಿಸಿದ್ದರೆ, ಅವರ 24 ವರ್ಷದ ಮಗ ಲೋವರ್‌ ಡಿವಿಷನಲ್‌ ಕ್ಲರ್ಕ್‌ (ಎಲ್‌ಡಿಸಿ) ಪರೀಕ್ಷೆಯಲ್ಲಿ 38ನೇ ರ‍್ಯಾಂಕ್ ಪಡೆದಿದ್ದಾರೆ.

ಮಗ 10ನೇ ತರಗತಿಯಲ್ಲಿದ್ದಾಗ, ಅವನನ್ನು ಓದುವಂತೆ ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕಗಳನ್ನು ಓದಲು ಆರಂಭಿಸಿದ ಬಿಂದು ಅವರು, ಕೇರಳ ಪಬ್ಲಿಷ್‌ ಸರ್ವೀಸ್‌ ಕಮಿಷನ್‌ (ಪಿಎಸ್‌ಸಿ) ಪರೀಕ್ಷೆ ಬರೆಯಲು ಮುಂದಾದರು. ಒಂಬತ್ತು ವರ್ಷಗಳ ಕಠಿಣ ಪರಿಶ್ರಮದ ನಂತರ, ಅವರು ಮತ್ತು ಅವರ ಮಗ ಇಬ್ಬರೂ ಒಟ್ಟಿಗೆ ಸರ್ಕಾರಿ ಸೇವೆಗಳಲ್ಲಿ ತಮ್ಮ ವೃತ್ತಿಜೀವನ ಆರಂಭಿಸುತ್ತಿದ್ದಾರೆ.

ತನ್ನ ಮಗನಿಗೆ ಓದಿನಲ್ಲಿ ಆಸಕ್ತಿ ಹುಟ್ಟಿಸುವ ಸಲುವಾಗಿ ಆಗಷ್ಟೇ ಪ್ರಾರಂಭವಾಗಿದ್ದ ಕೋಚಿಂಗ್‌ ಸೆಂಟರ್‌ಗೆ ತಾನು ದಾಖಲಾಗುವಂತಾಯಿತು ಎಂದು ಬಿಂದು ಹೇಳಿಕೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೋಚಿಂಗ್‌ ಪಡೆಯುತ್ತಿದ್ದ ಸೆಂಟರ್‌ಗೆ ತನ್ನ ಮಗನನ್ನು ಸೇರಿಸಿದರು.

ಎಲ್‌ಜಿಎಸ್‌ ಪರೀಕ್ಷೆಗೆ ಎರಡು ಬಾರಿ ಹಾಗೂ ಎಲ್‌ಡಿಎಸ್‌ ಪರೀಕ್ಷೆಗೆ ಒಂದು ಬಾರಿ ಪ್ರಯತ್ನಿಸಿದ್ದ ಅವರು, ನಾಲ್ಕನೇ ಪ್ರಯತ್ನದಲ್ಲಿ ಎಲ್‌ಜಿಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಉದ್ಯೋಗ ಗಳಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಬಿಂದು, ಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹಲವಾರು ಬಾರಿ ಪರೀಕ್ಷೆ ಬರೆದಿದ್ದಾರೆ. ಅವರ ಈ ಪ್ರಯತ್ನಕ್ಕೆ ಮಗ, ಸ್ನೇಹಿತರು ಮತ್ತು ಕೋಚಿಂಗ್ ಸೆಂಟರ್‌ನ ಶಿಕ್ಷಕರು ಎಲ್ಲರೂ ಪ್ರೋತ್ಸಾಹ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ʻʻನಾವು ಒಟ್ಟಿಗೆ ಅಧ್ಯಯನ ಮಾಡದಿದ್ದರೂ, ಕೆಲವು ವಿಷಯಗಳನ್ನು ಪರಸ್ಪರ ಚರ್ಚಿಸುತ್ತಿದ್ದೆವುʼʼ ಎಂದು ಅವರ ಮಗ ಹೇಳಿರುವುದಾಗಿ 'ಎನ್‌ಡಿಟಿವಿ' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

“ನಾನು ಏಕಾಂಗಿಯಾಗಿ ಅಧ್ಯಯನ ಮಾಡಲು ಇಷ್ಟಪಡುತ್ತೇನೆ. ಇದಲ್ಲದೆ, ಅಮ್ಮ ಯಾವಾಗಲೂ ಅಧ್ಯಯನ ಮಾಡುವುದಿಲ್ಲ. ಸಮಯ ಸಿಕ್ಕಾಗ ಮತ್ತು ಅಂಗನವಾಡಿ ಕರ್ತವ್ಯದ ನಂತರ ಅವಳು ಓದುತ್ತಿದ್ದಳುʼʼ ಎಂದು ಅವರು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ಉತ್ತರ- ದಕ್ಷಿಣ ಚರ್ಚೆ ಶುರು ಮಾಡಿದ್ದು ಚಿತ್ರರಂಗದವರಲ್ಲ; ಮಾಧ್ಯಮಗಳಿಗೆ ಆಲಿಯಾ ತಿರುಗೇಟು

ʻʻನಾನು ಮೊದಲು ಪೊಲೀಸ್ ಪರೀಕ್ಷೆಯನ್ನು ನೀಡಿದ್ದೆ, ಆದರೆ ಪೂರಕ ಪಟ್ಟಿಯಲ್ಲಿ ನನ್ನ ಹೆಸರು ಬಂದಿದೆ. ಈ ಬಾರಿ, ನಾನು ಎಲ್‌ಡಿಸಿ ಪರೀಕ್ಷೆಗಾಗಿ ಹೆಚ್ಚು ಅಧ್ಯಯನ ಮಾಡಿದ್ದೇನೆʼʼ ಎಂದು ಅವರು ವಿವರಿಸಿದರು.

“ನಾನು ನಿರಂತರವಾಗಿ ಓದುವುದಿಲ್ಲ. ಪರೀಕ್ಷೆಯ ದಿನಕ್ಕಿಂತ ಆರು ತಿಂಗಳ ಮೊದಲೇ ನಾನು ಪರೀಕ್ಷೆಗೆ ತಯಾರಿ ಪ್ರಾರಂಭಿಸುತ್ತೇನೆ. ಮೂರು ವರ್ಷಗಳ ನಂತರ ಮುಂದಿನ ಸುತ್ತಿನ ಪರೀಕ್ಷೆಗಳು ಪ್ರಕಟವಾಗುವವರೆಗೆ ನಾನು ವಿರಾಮ ತೆಗೆದುಕೊಳ್ಳುತ್ತಿದ್ದೆ” ಎಂದು ಬಿಂದು ಹೇಳಿದರು.

“ಬಹುಶಃ, ತಯಾರಿಯಲ್ಲಿನ ಈ ವಿರಾಮಗಳಿಂದಾಗಿ ನಾನು ಈ ಮೊದಲು ಪರೀಕ್ಷೆಗಳಲ್ಲಿ ಉತ್ತೀರ್ಣಳಾಗಲು  ಸಾಧ್ಯವಾಗಲಿಲ್ಲ. ಮೂರು ಬಾರಿ ಸತತ ಪ್ರಯತ್ನಗಳ ವೈಫಲ್ಯಗಳ ನಡುವೆಯೂ ಅಂತಿಮವಾಗಿ ಯಶಸ್ಸನ್ನು ಪಡೆದಿದ್ದೇನೆ. ಸತತ ಪ್ರಯತ್ನವೇ ಗೆಲುವಿಗೆ ದಾರಿ” ಎಂದು ಅವರು ವಿವರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್