ಕಲಬುರಗಿ | ಬಿಡಿಎಸ್‌ ಕೋರ್ಸಿನ ಅಂತಿಮ ವರ್ಷದ ಪರೀಕ್ಷೆ ಮುಂದೂಡುವಂತೆ ಆಗ್ರಹ

  • ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಮನವಿ
  • ಓದಲು ಸಮಯಾವಕಾಶದ ಕೊರತೆ ಇದೆ ಎಂದ ದಂತ ವೈದ್ಯಕೀಯ ವಿದ್ಯಾರ್ಥಿಗಳು

ಕಲಬುರಗಿಯ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಅವಧಿಗೂ ಮುನ್ನ ಎರಡು ತಿಂಗಳ ಮುಂಚಿತವಾಗಿಯೇ ದಂತ ಶಸ್ತ್ರಚಿಕಿತ್ಸೆಯ ಸ್ನಾತಕೋತ್ತರ ಪೂರ್ವ (ಬಿಡಿಎಸ್) ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಕಡಿಮೆ ಅವಧಿಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುವುದು ಮಾನಸಿಕವಾಗಿ ಒತ್ತಡವಾಗುತ್ತಿದೆ. ಹಾಗಾಗಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಬಿಡಿಎಸ್ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. 

ಕಲಬುರಗಿ ಸೇರಿದಂತೆ ರಾಜ್ಯದ ಅನೇಕ ಬಿಡಿಎಸ್ ಕಾಲೇಜುಗಳಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ನಿಗದಿಯಾಗಿರುವ ವಾರ್ಷಿಕ ಪರೀಕ್ಷೆಯನ್ನು ಮುಂದೂಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

“ತಮಗೆ ಓದಲು ಸಮಯಾವಕಾಶದ ಕೊರತೆ ಇದೆ. ಎರಡು ತಿಂಗಳು ಮೊದಲೇ ವಿವಿಯು ಪರೀಕ್ಷೆಯ ದಿನಾಂಕ ಘೋಷಣೆ ಮಾಡಿದೆ. ಈ ನಡೆಯಿಂದ ಕಡಿಮೆ ಅವಧಿಯಲ್ಲಿ ಅಧ್ಯಯನ ಮಾಡುವುದಕ್ಕೆ ಸಮಯದ ಕೊರತೆಯಿದೆ” ಎಂದು ಅನೇಕ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

“ಕಳೆದ ವರ್ಷ ದಂತ ವೈದ್ಯಕೀಯ ಪರೀಕ್ಷೆಗಳನ್ನು ನವೆಂಬರ್ ತಿಂಗಳಿನಲ್ಲಿ ನಡೆಸಲಾಗಿತ್ತು. ಆದರೆ, ಆರ್‌ಜಿಯುಎಚ್ಎಸ್ ಈ ಬಾರಿಯ ಪರೀಕ್ಷೆಗಳನ್ನು ಸೆಪ್ಟೆಂಬರ್ ಒಂದನೇ ತಾರೀಕಿನಿಂದ ನಡೆಸುತ್ತಿದೆ" ಎಂದು ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿನಿಯೊಬ್ಬರು ಈದಿನ.ಕಾಮ್‌ಗೆ ತಿಳಿಸಿದರು.   

ಈ ಸುದ್ದಿ ಓದಿದ್ದೀರಾ? ರಾಜ್ಯದ ಸರ್ಕಾರಿ ಶಾಲೆಗಳ ಆಸ್ತಿ ವಿವರಗಳನ್ನು ಕುರಿತಂತೆ ಶ್ವೇತಪತ್ರ ಹೊರಡಿಸಲು ಸರ್ಕಾರಕ್ಕೆ ಒತ್ತಾಯ

"ನಮ್ಮ ಶೈಕ್ಷಣಿಕ ಅವಧಿ ಇರುವುದು ಹತ್ತು ತಿಂಗಳು. ಆದರೆ, ಇವರು ಎಂಟು ತಿಂಗಳಿಗೆ ಪರೀಕ್ಷೆ ನಡೆಸುತ್ತಿದೆ. ನಾವು ಅಂತಿಮ ವರ್ಷದ ವಿದ್ಯಾರ್ಥಿಗಳು ನಿನ್ನೆಯವರೆಗೂ ತರಗತಿಗಳಿಗೆ ಹಾಜರಾಗಿದ್ದೇವೆ. ಈ ನಡುವೆಯೇ ಇದ್ದಕ್ಕಿಂದಂತೆ ಪರೀಕ್ಷೆಗಳನ್ನು ನಡೆಸುವುದರಿಂದ ನಮಗೆ ಓದುವುದಕ್ಕೆ ಸಮಯವಿಲ್ಲ. ಇಷ್ಟು ಕಡಿಮೆ ಅವಧಿಯಲ್ಲಿ ಓದುವುದಕ್ಕೆ ಕಷ್ಟವಾಗುತ್ತದೆ. ಮಾನಸಿಕವಾಗಿ ಒತ್ತಡವಾಗುತ್ತಿದೆ. ಕೇವಲ ಬಿಡಿಎಸ್ ವಿದ್ಯಾರ್ಥಿಗಳಿಗೆ ಮಾತ್ರ ಈ ಅನ್ಯಾಯವಾಗುತ್ತಿದೆ. ಬೇರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಸಮಸ್ಯೆಯಾಗಿಲ್ಲ. ಎರಡು, ಮೂರು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಡಿಎಸ್ ಪರೀಕ್ಷೆಗಳನ್ನು ಮುಂದೂಡಬೇಕು” ಎಂದು ವಿದ್ಯಾರ್ಥಿನಿ ಆಗ್ರಹಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್