ತಮಿಳುನಾಡು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಮಗಳ ಮೃತದೇಹ ಸ್ವೀಕರಿಸಲು ಪೋಷಕರು ಹಿಂದೇಟು

tn notice.
  • ವಿದ್ಯಾರ್ಥಿನಿ ಮೃತದೇಹದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ
  • ಮೃತದೇಹ ಪಡೆದು ವಿಧಿವಿಧಾನ ನೆರವೇರಿಸಿ: ಪೋಷಕರಿಗೆ ನೋಟಿಸ್

ತಮಿಳುನಾಡಿನ ಕಡಲೂರು ಜಿಲ್ಲೆಯ ಪೆರಿಯನಸಲೂರು ಗ್ರಾಮದ ವಿದ್ಯಾರ್ಥಿನಿಯ ಮೃತದೇಹ ಸ್ವೀಕರಿಸಲು ಪೋಷಕರು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ  ಸಿಬಿ-ಸಿಐಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ವಿದ್ಯಾರ್ಥಿನಿ ಮೃತದೇಹದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಶವ ಪಡೆದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವಂತೆ ನೋಟಿಸ್‌ನಲ್ಲಿ ಕುಟುಂಬಸ್ಥರಿಗೆ ಸೂಚಿಸಲಾಗಿದೆ. ‌

ಎರಡು ದಿನಗಳ ಹಿಂದೆ ಮದ್ರಾಸ್‌ ಹೈಕೋರ್ಟ್‌ ಎರಡನೇ ಬಾರಿ ಮೃತದೇಹ ಪರೀಕ್ಷೆ ನಡೆಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ತಂದೆಯು, ಮರು ಮರಣೋತ್ತರ ಪರೀಕ್ಷೆ ನಡೆಸುವ ವೈದ್ಯರ ತಂಡಕ್ಕೆ ತನ್ನ ಆಯ್ಕೆಯ ವೈದ್ಯರನ್ನು ಸೇರಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಅರ್ಜಿಯನ್ನು ಮಂಗಳವಾರ ವಜಾಗೊಳಿಸಿದೆ.

ಕಲ್ಲಕುರಿಚಿಯ ಚಿನ್ನಸೇಲಂನಲ್ಲಿರುವ ಖಾಸಗಿ ವಸತಿ ಶಾಲೆಯೊಂದರ ವಿದ್ಯಾರ್ಥಿನಿ ಜುಲೈ 13ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಆಕೆಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತ್ತು. 

ಈ ಸುದ್ದಿ ಓದಿದ್ದೀರಾ?: ಸುದ್ದಿ ವಿವರ | ತಮಿಳುನಾಡು ಬಾಲಕಿ ಸಾವು; ಸಾಮಾಜಿಕ ತಾಣದಲ್ಲಿ ಸುಳ್ಳು ಸುದ್ದಿ ಪ್ರಚಾರದಿಂದ ಹಿಂಸಾಚಾರ

ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಶಾಲೆಯ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ. ಅಲ್ಲದೆ, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಜುಲೈ 17 ರಂದು ಶಾಲೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಸುಮಾರು 300 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕಲ್ಲಕುರಿಚಿ ಹಿಂಸಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ತಮಿಳುನಾಡಿನ ಡಿಜಿಪಿ ಸಿ ಶೈಲೇಂದ್ರ ಬಾಬು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್