ತಮಿಳುನಾಡು | 3.38 ಲಕ್ಷ ಎಕರೆ ಕುರುವಾಯಿ ಕೃಷಿಗೆ ಕಲ್ಲನೈ ನೀರು ಬಿಡುಗಡೆ

  • ವಾಡಿಕೆಗಿಂತ ಮುಂಚಿತವಾಗಿ ಅಣೆಕಟ್ಟಿನ ನೀರು ಬಿಡುಗಡೆ
  • ಕಾವೇರಿ ಡೆಲ್ಟಾ ಪ್ರದೇಶದಲ್ಲಿ ಉತ್ತಮ ಕುರುವಾಯಿ ಕೃಷಿ ನಿರೀಕ್ಷೆ

ಶುಕ್ರವಾರದಂದು ಕಲ್ಲನೈ ಅಣೆಕಟ್ಟು ಬಾಗಿಲುಗಳನ್ನು ತೆರೆಯಲಾಗಿರುವುದರಿಂದ ಈ ವರ್ಷ ಕಾವೇರಿ ಡೆಲ್ಟಾ ಪ್ರದೇಶದಲ್ಲಿನ 3.38 ಲಕ್ಷ ಎಕರೆಗೂ ಹೆಚ್ಚು ಕುರುವಾಯಿ ಭತ್ತದ ಕೃಷಿಯನ್ನು ನಿರೀಕ್ಷಿಸಲಾಗಿದೆ.

ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಮೇಯಲ್ಲಿ ಮೆಟ್ಟೂರು ಕಲ್ಲನೈ ಅಣೆಕಟ್ಟು ಬಾಗಿಲು ತೆರೆಯಲಾಗಿದೆ. ಪ್ರತಿವರ್ಷ ಜೂನ್ 12ರಂದು ತೆರೆಯುವ ಬಾಗಿಲುಗಳನ್ನು ಈ ವರ್ಷ ವಾಡಿಕೆಗಿಂತ ಮುಂಚಿತವಾಗಿ ಮೇ 24ರಂದು ತೆರೆದು, ಕಾವೇರಿ ನೀರನ್ನು ಬಿಡುಗಡೆ ಮಾಡಲಾಯಿತು.

ಪುರಸಭೆ ಆಡಳಿತ ಸಚಿವರಾದ ಕೆ ಎನ್ ನೆಹರು ಮತ್ತು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ, ತಂಜಾವೂರು ಸಂಸದ ಎಸ್ ಎಸ್ ಪಳನಿಮಾಣಿಕ್ಕಂ, ತಿರುವಯ್ಯರು ಶಾಸಕರಾದ ಡಿ ಚಂದ್ರಶೇಖರನ್, ಪಾಪನಾಸಂನ ಎಂ ಎಚ್ ಜವಾಹಿರುಲ್ಲಾ, ಕಿಲ್ವೇಲೂರಿನ ನಾಗೈ ಮಾಲಿ ಹಾಗೂ ತಮಿಳುನಾಡು ಆದಿ ದ್ರಾವಿಡರ್ ವಸತಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಯು ಮತಿವನನ್ ಅವರು ಆಣೆಕಟ್ಟಿನ ಗೇಟ್‌ಗಳನ್ನು ತೆಗೆಯುವ ಮೂಲಕ ಕಾವೇರಿಗೆ ನೀರು ಹೊರಬಿಟ್ಟರು. ಹೊರಸೂಸುವ ನೀರಿನ ಮೇಲೆ ಹೂ ದಳಗಳು ಮತ್ತು ಭತ್ತದ ಬೀಜಗಳನ್ನು ಸುರಿಸಿದರು. 

ಜಲಾಶಯದ ಬಾಗಿಲುಗಳನ್ನು ತೆರೆಯುವ ಮೊದಲು ಕೊಳ್ಳಿಡಾಂ ನದಿ ಪಕ್ಕದ ಆಂಜನೇಯ ದೇವಸ್ಥಾನ, ಆದಿ ವಿನಾಯಕ ದೇವಸ್ಥಾನ ಹಾಗೂ ಕಾವೇರಿ ತೀರದಲ್ಲಿರುವ ಕರುಪ್ಪನಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಮೊದಲು ಕಾವೇರಿ, ವೆನ್ನಾರು ಮತ್ತು ಕೊಲ್ಲಿಡಂ ನದಿಗಳಿಗೆ ತಲಾ 500 ಕ್ಯೂಸೆಕ್‌ಗಳನ್ನು ಬಿಡಲಾಗುತ್ತಿತ್ತು. ಸದ್ಯ 100 ಕ್ಯೂಸೆಕ್ ಮಾತ್ರ ಬಿಡಲಾಗಿದೆ. 

ಈ ಸುದ್ದಿ ಓದಿದ್ದೀರಾ ? ಗೋಧಿ ಖರೀದಿ ಒಪ್ಪಂದ ರದ್ದು | 'ಎಂಎನ್‌ಸಿ'ಗಳ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ ವ್ಯಾಪಾರಿಗಳು

ಮತ್ತೊಂದು ತುದಿಯಲ್ಲಿರುವ ಪ್ರದೇಶಗಳಿಗೆ ನೀರು ತಲುಪಲು ಒಂದು ವಾರ ಬೇಕು ಎಂದು ಸಚಿವ ಕೆ ಎನ್ ನೆಹರು ಹೇಳಿದ್ದಾರೆ.

“ಶುಕ್ರವಾರದ ಹೊತ್ತಿಗೆ ಮೆಟ್ಟೂರು ಅಣೆಕಟ್ಟಿನ ಒಳಹರಿವು 6,000 ಕ್ಯುಸೆಕ್ ಇತ್ತು. ಕಾವೇರಿ ಡೆಲ್ಟಾ ನೀರಾವರಿಗೆ ಒಟ್ಟು 10,000 ಕ್ಯೂಸೆಕ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ ಕಲ್ಲನೈ ಕೆಳಭಾಗದ ಒಟ್ಟು 3.38 ಲಕ್ಷ ಎಕರೆ ಪ್ರದೇಶದಲ್ಲಿ ಈ ವರ್ಷ ಕುರುವಾಯಿ ಭತ್ತ ಬೆಳೆಯುವ ನಿರೀಕ್ಷೆಯಿದೆ. ನೀರಾವರಿಯ ಜೊತೆಗೆ ಬಿಡುಗಡೆಯಾದ ನೀರನ್ನು 924 ಕೆರೆಗಳನ್ನು ತುಂಬಿಸಲು ಬಳಸಲಾಗುವುದು” ಎಂದು ಸಚಿವರು ಹೇಳಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, “ಮೆಟ್ಟೂರು ಅಣೆಕಟ್ಟಿನ ಸಂಗ್ರಹ ಮತ್ತು ಒಳಹರಿವು, ನಿರೀಕ್ಷಿತ ಮಳೆಯ ಪ್ರಮಾಣ ಮತ್ತು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕರ್ನಾಟಕದಿಂದ ಪಡೆದ ನೀರಿನ ಆಧಾರದ ಮೇಲೆ ರೈತರ ನೀರಾವರಿ ಅಗತ್ಯಕ್ಕೆ ಅನುಗುಣವಾಗಿ ನೀರು ವಿತರಿಸಲಾಗುವುದು” ಎಂದು ತಿಳಿಸಿದರು. 

ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳಾದ ತಂಜಾವೂರಿನ ದಿನೇಶ್ ಪೊನ್‌ರಾಜ್ ಆಲಿವರ್, ತಿರುಚಿಯ ಎಸ್ ಶಿವರಾಸು, ಹಾಗೂ ಮಾಯಿಲಾಡುತುರೈನ ಆರ್ ಲಲಿತಾ ಅವರಿದ್ದರು. ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಎಸ್ ರಾಮಮೂರ್ತಿ, ರೈತ ಸಂಘದ ಪ್ರತಿನಿಧಿಗಳಾದ ಪಿ ಆರ್ ಪಾಂಡಿಯನ್, ವಿ ಸತ್ಯನಾರಾಯಣನ್ ಮತ್ತು ಎನ್ ವಿ ಕಣ್ಣನ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್