ಲಂಚ ಪ್ರಕರಣದಲ್ಲಿ ಆರೋಪಿಯಾಗಿದ್ದ ಐಎಎಸ್ ಅಧಿಕಾರಿ ಈಗ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ!

  • ಲಂಚ ಪಡೆದಿದ್ದ ಆರೋಪದಡಿ ಬಂಧಿಯಾಗಿದ್ದ ಜೆ ಮಂಜುನಾಥ್‌
  • ಡೀಫಾಲ್ಟ್‌ ಜಾಮೀನಿನ ಮೇಲೆ ಹೊರಗಿರುವ ಐಎಎಸ್‌ ಅಧಿಕಾರಿ

ಲಂಚ ಪ್ರಕರಣದಲ್ಲಿ ಬಂಧಿಯಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಐಎಎಸ್‌ ಅಧಿಕಾರಿ ಜೆ ಮಂಜುನಾಥ್‌ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪದನಿಮಿತ್ತ ಜಂಟಿ ಕಾರ್ಯದರ್ಶಿಯಾಗಿ ಕರ್ನಾಟಕ ಸರ್ಕಾರ ನೇಮಿಸಿದೆ.

ಲಂಚ ಪಡೆದಿದ್ದ ಆರೋಪದಡಿ ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ ಅವರನ್ನು 2022ರ ಜುಲೈನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದರು. ನಿಗದಿತ 60 ದಿನಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರಿಗೆ ಬೆಂಗಳೂರಿನ 23ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ‌ಡೀಫಾಲ್ಟ್‌ ಜಾಮೀನು ಮಂಜೂರು ಮಾಡಿತ್ತು.

Eedina App

ಜಾಮೀನು ಮಂಜೂರು ಮಾಡುವ ವೇಳೆ, "ನ್ಯಾಯಾಲಯಕ್ಕೆ ಮತ್ತು ತನಿಖಾಧಿಕಾರಿಗೆ ಮಾಹಿತಿ ನೀಡದೆ ಮಂಜುನಾಥ್‌ ದೇಶ ತೊರೆಯುವಂತಿಲ್ಲ" ಎಂಬ ಷರತ್ತನ್ನು ವಿಧಿಸಿತ್ತು. ಆದರೆ, ರಾಜ್ಯ ಸರ್ಕಾರ ಎಸಿಬಿಯನ್ನು ರದ್ದು ಮಾಡಿದ್ದರಿಂದ ಸದ್ಯ ಪ್ರಕರಣ ಲೋಕಾಯುಕ್ತದಲ್ಲಿದೆ. 

ಏನಿದು ಪ್ರಕರಣ?

AV Eye Hospital ad

‌ಆನೇಕಲ್‌ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಅವರಿಂದ 5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಸಹಾಯಕ ಉಪ ತಹಶೀಲ್ದಾರ್‌ ಮಹೇಶ್‌ ಮತ್ತು ಮೇಲ್ಮನವಿ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅವರನ್ನು ಮೇ 21ರಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿತ್ತು. ಈ ಪ್ರಕರಣದಲ್ಲಿ ಮಂಜುನಾಥ್‌ ಅವರು ಮೂರನೇ ಆರೋಪಿಯಾಗಿದ್ದರು.

ಭೂ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ ಅವರು ವಿಚಾರಣೆ ನಡೆಸಿ 2022ರ ಮಾರ್ಚ್‌ 30ರಂದು ತೀರ್ಪು ಕಾಯ್ದಿರಿಸಿದ್ದರು. ತಮ್ಮ ಪರವಾಗಿ ಆದೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಹಾಗೂ ಒಂದೂವರೆ ತಿಂಗಳಿಂದ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸದ ಹಿನ್ನೆಲೆಯಲ್ಲಿ ದೂರುದಾರ ಅಜಂ ಪಾಷಾ ಅವರು ಮೇ 18ರಂದು ಜಿಲ್ಲಾಧಿಕಾರಿ ಮಂಜುನಾಥ್‌ ಅವರನ್ನು ಭೇಟಿ ಮಾಡಿದ್ದರು.  

ಇನ್ನೊಮ್ಮೆ, ಉಪ ತಹಶೀಲ್ದಾರ್‌ ಮಹೇಶ್‌ ಅವರ ಜೊತೆ ಮಂಜುನಾಥ್‌ ಅವರನ್ನು ಅಜಂ ಪಾಷಾ ಭೇಟಿ ಮಾಡಿದ್ದರು. ಆಗ ಮಂಜುನಾಥ್‌ ಅವರು ತಮ್ಮ ಸಹಾಯಕರಾದ ಮಹೇಶ್‌ ಅವರನ್ನು ಭೇಟಿ ಮಾಡಿ, ನಾಳೆ ಬಂದು ತನ್ನನ್ನು ಕಾಣುವಂತೆ ಹೇಳಿ ಅಲ್ಲಿಂದ ಹೊರಟಿದ್ದರು. ಇದರ ಬೆನ್ನಿಗೇ ಮೊದಲು 15 ಲಕ್ಷ ರೂ., ಆ ನಂತರ 8 ಲಕ್ಷ ರೂ., ಅಂತಿಮವಾಗಿ 5 ಲಕ್ಷ ರೂ. ಲಂಚ ಪಾವತಿಸಲು ಅಜಂ ಪಾಷಾ ಅವರಿಗೆ ಮಹೇಶ್‌ ಅವರು ಸೂಚಿಸಿದ್ದರು. ಇದನ್ನು ಆಧರಿಸಿ ಅಜಂ ಪಾಷಾ ಎಸಿಬಿಗೆ ದೂರು ನೀಡಿದ್ದರು.

ಈ ಸುದ್ದಿ ಓದಿದ್ದೀರಾ?: ಹಿಂದುಳಿದ ಜಾತಿಗಳಿಗೆ ಪ್ರಾತಿನಿಧ್ಯ | ಬಹಿರಂಗ ಚರ್ಚೆಗೆ ಬರುತ್ತೀರಾ ಮಿಸ್ಟರ್‌ ಬೊಮ್ಮಾಯಿ: ಸಿದ್ದರಾಮಯ್ಯ ಸವಾಲು

ಇದಾದ ಬಳಿಕ ಮಹೇಶ್‌ ಅವರನ್ನು ಅಜಂ ಪಾಷಾ ಭೇಟಿ ಮಾಡಿದ್ದು, ಮಹೇಶ್‌ ಅವರು ಪ್ರಕರಣದ ಎರಡನೇ ಆರೋಪಿ ಚೇತನ್‌ಗೆ ಲಂಚದ ಹಣ ನೀಡುವಂತೆ ಸೂಚಿಸಿದ್ದರು. ಈ ವೇಳೆ ಎಸಿಬಿ ದಾಳಿ ನಡೆಸಿತ್ತು.

ಪ್ರಕರಣವನ್ನು ಸರಿಯಾಗಿ ವಿಚಾರಣೆ ನಡೆಸದ ಎಸಿಬಿಯನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಜುಲೈ 4ರಂದು ಜೆ ಮಂಜುನಾಥ್‌ ಅವರನ್ನು ಬಂಧಿಸಿದ್ದ ಎಸಿಬಿ, ವಿಚಾರಣೆಗೆ ಒಳಪಡಿಸಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app