ಪಿಎಫ್‌ಐ ನಿಷೇಧ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌

  • ನಾಸಿರ್‌ ಅಲಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌
  • ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠದಿಂದ ಆದೇಶ

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ನಿಷೇಧವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ.

2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ʻಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾʼ (ಪಿಎಫ್‌ಐ) ಸಂಘಟನೆ ನಿಷೇಧಿಸಿದ್ದನ್ನು ಪ್ರಶ್ನಿಸಿ ಕರ್ನಾಟಕದ ಪಿಎಫ್ಐ ಅಧ್ಯಕ್ಷ ನಾಸೀರ್ ಅಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ವಜಾಗೊಳಿಸಿದೆ.  

Eedina App

ನ.28ರಂದು ಅರ್ಜಿದಾರ ನಾಸೀರ್‌ ಅಲಿ ಪರ ವಾದ ಮಂಡಿಸಿದ್ದ ವಕೀಲ ಜಯಕುಮಾರ್‌ ಎಸ್‌ ಪಾಟೀಲ್‌, "ಪಿಎಫ್‌ಐ ಅನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ಆದರೆ, ಪಿಎಫ್‌ಐ ಕಾನೂನುಬಾಹಿರ ಸಂಘಟನೆ ಎನ್ನಲು ಕಾರಣವಿಲ್ಲ. ಪಿಎಫ್‌ಐ ಸಂಘಟನೆ ಮೇಲೆ ಏಕಾಏಕಿ ನಿರ್ಬಂಧ ಹೇರಿದ್ದಕ್ಕೆ ಕಾರಣ ನೀಡಬೇಕಿತ್ತು. ಆದರೆ, ಚರ್ಚಿಸಲೂ ಅವಕಾಶ ನೀಡದೆ ನಿಷೇಧ ಹೇರಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಯುಎಪಿಎ (ದೇಶದ್ರೋಹ) ಕಾಯಿದೆಗೆ ವಿರುದ್ಧವಾಗಿದೆ" ಎಂದು ವಾದಿಸಿದ್ದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಪಿಎಫ್ಐ ಸಂಘಟನೆಯಿಂದ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದವು. ಜತೆಗೆ, ಇದರಿಂದ ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳು ಹೆಚ್ಚುತ್ತಿದ್ದವು. ಸಂಘಟನೆಯ ಸದಸ್ಯರಿಂದ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಈ ಕಾರಣಗಳಿಂದಲೇ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ" ಎಂದಿದ್ದರು.

AV Eye Hospital ad

ಸೆ.27ರಂದು ಪಿಎಫ್‌ಐ ಮತ್ತು ಅದರ ಸಹ ಸಂಘಟನೆಗಳಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ), ರಿಹಾಬ್ ಇಂಡಿಯಾ ಫೌಂಡೇಶನ್ (ಆರ್‌ಐಎಫ್), ನ್ಯಾಷನಲ್‌ ವುಮೆನ್ಸ್‌ ಫ್ರಂಟ್‌ (ಎನ್‌ಡಬ್ಲ್ಯೂಎಫ್‌), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಸಂಘಟನೆಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. 

ಈ ಸುದ್ದಿ ಓದಿದ್ದೀರಾ?: ಹನ್ನೊಂದು ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋದ ಬಿಲ್ಕಿಸ್‌ ಬಾನು

ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಪ್ರಕಟಣೆಯಲ್ಲಿ, "ಪಿಎಫ್‌ಐನ ಕೆಲ ಸಂಸ್ಥಾಪಕರು ನಿಷೇಧಿತ ಸಂಘಟನೆಗಳಾದ ʼಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾʼ (ಸಿಮಿ) ಮತ್ತು ʼಜಮಾತ್‌-ಉಲ್‌-ಮುಜಾಹಿದ್ದೀನ್‌ ಬಾಂಗ್ಲಾದೇಶʼ (ಜೆಎಂಬಿ)ದ ಜತೆ ಸಂಪರ್ಕ ಹೊಂದಿದೆ" ಎಂದು ಕೇಂದ್ರ ಸರ್ಕಾರ ಆರೋಪಿಸಿತ್ತು. 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app