Technical Issue

ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಡಬಲ್‌ ಎಂಜಿನ್‌ ಸರ್ಕಾರವನ್ನು ಕಿತ್ತೊಗೆಯಬೇಕು: ಡಿ ಕೆ ಶಿವಕುಮಾರ್

DKS KEMPANNA
  • ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ದನಿಯೆತ್ತುತ್ತಿಲ್ಲ ಯಾಕೆ?
  • ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದ ಡಿ ಕೆ ಶಿವಕುಮಾರ್‌

"ಕರ್ನಾಟಕ ಎಂದರೆ ಮೋದಿ ಸರ್ಕಾರಕ್ಕೆ ಗೌರವವಿಲ್ಲ" ಎಂದು‌ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಕಳೆದ ವರ್ಷ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರು ಅವರ ಸ್ತಬ್ಧ ಚಿತ್ರ ತೆಗೆದುಹಾಕಿರುವ ನೋವೇ ಇನ್ನೂ ಕಡಿಮೆಯಾಗಿಲ್ಲ. ಈ ವರ್ಷ ಸ್ತಬ್ಧಚಿತ್ರವನ್ನೇ ಕೇಂದ್ರ ಸರ್ಕಾರ ನಿರಾಕರಿಸಿದೆ. ಇದು ರಾಜ್ಯಕ್ಕೆ ಮಾಡಿರುವ ಅನ್ಯಾಯ ಅಲ್ಲವೇ? ರಾಜ್ಯ ಬಿಜೆಪಿ ಸಂಸದರು ಈ ಕುರಿತು ಯಾಕೆ ದನಿಯೆತ್ತಿಲ್ಲ" ಎಂದು ಡಿಕೆಶಿ ಪ್ರಶ್ನಿಸಿದರು. 

"ಮಹದಾಯಿ ವಿಚಾರದಲ್ಲಿ, ರಾಜ್ಯದ ಸಮಸ್ಯೆಗಳ ವಿಚಾರದಲ್ಲಿ ನಿಯೋಗವನ್ನು ಕರೆದುಕೊಂಡು ಹೋಗಿ ಬಿಜೆಪಿ ಸಂಸದರು ಕೇಂದ್ರದ ಬಳಿ ಮಾತಾಡಬಹುದಲ್ಲವೇ? ಅವರಿಗೆ ಮಾತನಾಡುವ ಶಕ್ತಿಯೂ ಇಲ್ಲ" ಎಂದು ಅವರು ಕುಟುಕಿದರು. 

ಈ ಸುದ್ದಿ ಓದಿದ್ದೀರಾ?: ವೈಎಸ್‌ವಿ ದತ್ತ ಪಕ್ಷಾಂತರ | ದೇವೇಗೌಡರ ಮಾನಸ ಪುತ್ರನ ನಡೆಗೆ ಜೆಡಿಎಸ್ ಆಕ್ರೋಶ

"ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿಯನ್ನು ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸುವುದಕ್ಕೆ ಆಗುತ್ತಿಲ್ಲ. ದಲಿತರಿಗೆ ಯಾವ ರೀತಿ ಮೋಸ ಮಾಡುತ್ತಿದ್ದಾರೆ ಎಂಬುದು ಇದರಿಂದ ಅರ್ಥವಾಗುತ್ತದೆ. ರಾಜ್ಯಕ್ಕೆ ದೊಡ್ಡ ಅನ್ಯಾಯವಾಗುತ್ತಿದೆ. ಈ ಅನ್ಯಾಯವನ್ನು ತಪ್ಪಿಸಲು ಡಬಲ್‌ ಎಂಜಿನ್‌ ಸರ್ಕಾರವನ್ನು ಕಿತ್ತೊಗೆಯಬೇಕು" ಎಂದರು.  

ಗುತ್ತಿಗೆದಾರರಿಗೆ ಎಚ್ಚರಿಕೆ

"ತರಾತುರಿಯಲ್ಲಿ ಟೆಂಡರ್‌ಗಳನ್ನು ಕರೆಯೋದಕ್ಕೆ ಸರ್ಕಾರ ಹೊರಟಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ನಾವು ಅದನ್ನೆಲ್ಲ ಪರಿಶೀಲನೆ ಮಾಡುತ್ತೇವೆ. ಎಲ್ಲ ಟೆಂಡರ್‌ಗಳ ಎಸ್ಟಿಮೇಷನ್‌ ವೆರಿಫೈ ಮಾಡುತ್ತೇವೆ. ಯಾರದ್ದೋ ಏಜೆಂಟ್‌ಗಳಾಗಿ, ಸುಖಾಸುಮ್ಮನೆ ತೊಂದರೆಗೆ ಸಿಲುಕಬೇಡಿ" ಎಂದು ಡಿ ಕೆ ಶಿವಕುಮಾರ್‌ ಅವರು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.  

ನಿಮಗೆ ಏನು ಅನ್ನಿಸ್ತು?
0 ವೋಟ್