ಎಲ್ಲ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

  • ವಿದ್ಯಾರ್ಥಿಗಳಿಗೆ ರಾಷ್ಟ್ರಾಭಿಮಾನ ರಾಷ್ಟ್ರದ ಬಗ್ಗೆ ಗೌರವ ಮೂಡಿಸುವ ಯೋಜನೆ
  • ಪ್ರತಿದಿನ ಮುಂಜಾನೆ ರಾಷ್ಟ್ರಗೀತೆ ಹೇಳಿಸಬೇಕೆಂದು ಎಲ್ಲ ಶಾಲೆಗಳಿಗೆ ಆದೇಶ

ರಾಜ್ಯದ ಎಲ್ಲ ಶಾಲೆಗಳಲ್ಲಿ ನಡೆಸುವ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯನ್ನು ಹಾಡಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. 

ರಾಷ್ಟ್ರಗೀತೆಯನ್ನು ಹಾಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಮತ್ತು ರಾಷ್ಟ್ರದ ಬಗ್ಗೆ ಗೌರವಭಿಮಾನ ಬೆಳೆಸಬೇಕು ಎಂದು ರಾಜ್ಯದ ಎಲ್ಲ ಶಾಲೆಗಳಿಗೆ ಸರ್ಕಾರ ಆದೇಶಿಸಿದೆ. 

ಪ್ರತಿದಿನ ಮುಂಜಾನೆಯ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಿಸುವ ಸಂಪ್ರದಾಯವು ರಾಜ್ಯದ ಎಲ್ಲ ಶಾಲೆಗಳಲ್ಲಿ ಅನುಸರಿಸುವ ಆಚರಣೆ ಇದೆ. ಆದರೆ, ಬೆಂಗಳೂರಿನ ಕೆಲವು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರತಿದಿನ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಿಸುತ್ತಿಲ್ಲ ಎಂಬ ದೂರುಗಳು ಬಂದಮೇಲೆ ಈ ಆದೇಶ ಹೊರಡಿಸಿ, ಎಲ್ಲ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಮಾಡಲಾಗಿದೆ. 

ಈ ಬಗ್ಗೆ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ದಕ್ಷಿಣ ಬೆಂಗಳೂರಿಗೆ ಸಂಬಂಧಿಸಿದ, ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಬಂದ ದೂರುಗಳನ್ನು ಖಾತ್ರಿಪಡಿಸಿಕೊಂಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ 75| ಮಹಾಡ್‌ ಸತ್ಯಾಗ್ರಹದಿಂದ ಮೇಘವಾಲ್‌ ಸಾವಿನವರೆಗೆ ದಲಿತರ ದಾಹ ನೀಗಿಸದ ಸ್ವಾತಂತ್ರ್ಯ ಜೀವಜಲ!

ಈ ಹಿನ್ನೆಲೆಯಲ್ಲಿ, ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಅನ್ವಯ ಸಂವಿಧಾನದಲ್ಲಿ ಹೇಳಲಾಗಿರುವ ನಾಗರಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು, ಸಂವಿಧಾನವನ್ನು ಅನುಸರಿಸುವುದು ಹಾಗೂ ಸಂವಿಧಾನದ ಆದರ್ಶಗಳನ್ನು ಪಾಲಿಸಬೇಕು. ರಾಷ್ಟ್ರಗೀತೆಯನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸುವ ದೃಷ್ಟಿಯಿಂದ ರಾಜ್ಯದ ಎಲ್ಲ ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಅನುದಾನಿತ, ಅನುದಾನರಹಿತ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತಿದಿನ ಮುಂಜಾನೆಯ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ರಾಷ್ಟ್ರಗಿತೆ ಹಾಡುವುದು ಕಡ್ಡಾಯಗೊಳಿಸಲಾಗಿದೆ. 

ಒಂದು ವೇಳೆ ಶಾಲೆ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಒಟ್ಟಿಗೆ ಒಂದೆಡೆ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡುವುದಕ್ಕೆ ಸ್ಥಳಾವಕಾಶದ ಕೊರತೆ ಇದ್ದಲ್ಲಿ, ತರಗತಿ ಕೋಣೆಯೊಳಗೆ ಪ್ರತಿದಿನ ರಾಷ್ಟ್ರಗೀತೆ ಹಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180