ಕೆಸಿಇಟಿ ವಿವಾದ| ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆಸಿಇಟಿ) ಶ್ರೇಯಾಂಕ ಪಟ್ಟಿಯಲ್ಲಿ ದ್ವಿತೀಯ ಪಿಯುಸಿಯ ಅಂಕಗಳನ್ನು ಪರಿಗಣಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಎಸ್ ಆರ್ ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ಕಳೆದ ಆಗಸ್ಟ್ 8ರಂದು ವಿಚಾರಣೆ ನಡೆಸಿದೆ.

2020-21ನೇ ಸಾಲಿನಲ್ಲಿ ಉತ್ತೀರ್ಣರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು 2022ರಲ್ಲಿ ಸಿಇಟಿ ಬರೆದಿದ್ದರು. ಆದರೆ, ಸಿಇಟಿ ಶ್ರೇಯಾಂಕ ಪಟ್ಟಿಯಲ್ಲಿ 2021ನೇ ಸಾಲಿನ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಿಇಟಿ ರ‍್ಯಾಂಕ್ ಪಟ್ಟಿ ಬಿಡುಗಡೆ ಮಾಡಿದೆ.

ಪಿಯುಸಿ ಅಂಕಗಳನ್ನು ಸಿಇಟಿಯಲ್ಲಿ ಪರಿಗಣಿಸದ ಕಾರಣ ಈ ವಿದ್ಯಾರ್ಥಿಗಳಿಗೆ ಕಡಿಮೆ ರ‍್ಯಾಂಕ್ ದೊರೆತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಸಮಸ್ಯೆಯಾಗಿದ್ದು, ಉನ್ನತ ವ್ಯಾಸಂಗ ಮಾಡುವ ಕಾಲೇಜುಗಳಲ್ಲಿ ಸೀಟು ಸಿಗದಂತಾಗಿದೆ. ಇದರಿಂದಾಗಿ ಅಸಮಾಧಾನಗೊಂಡಿರುವ ವಿದ್ಯಾರ್ಥಿಗಳು ಕೆಇಎ ವಿರುದ್ದ ಹೈಕೋರ್ಟ್‌ ಮೆಟ್ಟಿಲೇರಿದ್ದು, ಮುಂದಿನ ವಿಚಾರಣೆ ಆಗಸ್ಟ್‌ 18ಕ್ಕೆ ಮುಂದೂಡಲಾಗಿದೆ.

2021ನೇ ಸಾಲಿನ ವಿದ್ಯಾರ್ಥಿಗಳು 2022ನೇ ಸಾಲಿನಲ್ಲಿ ಪುನಃ ಸಿಇಟಿ ಬರೆದದ್ದು ಯಾಕೆ?

ಸಿಇಟಿ ಫಲಿತಾಂಶದಿಂದ ನೊಂದಿರುವ ಸದಾಶಿವ್ ಎಂಬ ವಿದ್ಯಾರ್ಥಿ ಈ ದಿನ.ಕಾಮ್ ಜೊತೆ ಮಾತನಾಡಿ, “ನಾನು ಸೇರಿ 18 ವಿದ್ಯಾರ್ಥಿಗಳು ಜೊತೆಗೂಡಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ನನ್ನಂತೆಯೇ ಸಿಇಟಿ ಫಲಿತಾಂಶದಿಂದ ಇತರ ವಿದ್ಯಾರ್ಥಿಗಳು ಸೇರಿ ಕೆಇಎ ವಿರುದ್ಧ ಆರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ಬಗ್ಗೆ ಆಗಸ್ಟ್ 18ರಂದು ನ್ಯಾಯಾಲಯ ವಿಚಾರಣೆ ನಡೆಸಲಿದೆ" ಎಂದು ತಿಳಿಸಿದರು.

ಕಳೆದ ವರ್ಷ ಕೋವಿಡ್ ಕಾರಣ ಸರ್ಕಾರ 2021ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸದೆ ನೇರವಾಗಿ ವಿದ್ಯಾರ್ಥಿಗಳನ್ನು ಉತ್ತೀರ್ಣರನ್ನಾಗಿ ಮಾಡಿತ್ತು. ಹಾಗಾಗಿ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ. ಕೆಸಿಇಟಿ ಆಧಾರದ ಮೇಲೆ ಮಾತ್ರ ರ‍್ಯಾಂಕ್ ನೀಡಲಾಗುವುದು ಎಂದು ಕೆಇಎ ಆದೇಶದಲ್ಲಿ ಹೇಳಿತ್ತು. ಆದರೆ, ಪುನರಾವರ್ತಿತ ವಿದ್ಯಾರ್ಥಿಗಳಿಗೂ ಸಿಇಟಿ ರ‍್ಯಾಂಕಿಂಗ್‌ನಲ್ಲಿ ಕೆಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ಕೆಸಿಇಟಿ ಬರೆಯಬಹುದು. ಆ ಪರೀಕ್ಷೆಯಲ್ಲಿ ಪಿಯುಸಿ ಬೋರ್ಡ್ ಅಂಕಗಳನ್ನು ಈ ಹಿಂದಿನಂತೆ ಪರೀಗಣಿಸುತ್ತೇವೆ ಎಂದು ಕೆಇಎ ಹೇಳಿತ್ತು. ಆ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ವೈಯಕ್ತಿಕವಾಗಿ ಕೆಇಎ ನಿರ್ದೇಶಕರಿಗೆ ಕರೆ ಮಾಡಿದ್ದಾರೆ.

ಕೆಇಎ ಮಾಡಿದ ತಪ್ಪೇನು?

2021ನೇ ಸಾಲಿನ ಸಿಇಟಿ ಫಲಿತಾಂಶದಿಂದ ತೃಪ್ತಿ ಆಗದ ವಿದ್ಯಾರ್ಥಿಗಳು, ನಿರ್ದೇಶಕರು ಕೊಟ್ಟ ಮೌಖಿಕ ಭರವಸೆಯ ಮೇಲೆ ಒಂದು ವರ್ಷ ಕಾದು ಮತ್ತೊಮ್ಮೆ  2022ನೇ ಸಾಲಿನಲ್ಲಿ ಸಿಇಟಿ ಬರೆದಿದ್ದಾರೆ.

"ನಿರ್ದೇಶಕರಿಗೆ ಕರೆ ಮಾಡಿದ್ದ ಸಂದರ್ಭದಲ್ಲಿ, ಯಾಕೆ ಗಾಬರಿಯಾಗುತ್ತೀರಾ? ಈ ವರ್ಷ ಕೊರೋನಾ ಇದ್ದ ಕಾರಣ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿರಲಿಲ್ಲ. ಮುಂದಿನ ವರ್ಷದಿಂದ ಈ ಹಿಂದಿನಂತೆ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುತ್ತೀವಿ" ಎಂದು ಕೆಇಎ ಹೇಳಿದ್ದರ ಬಗ್ಗೆ ಸದಾಶಿವ್ ಮಾಹಿತಿ ನೀಡಿದರು.  

2021ನೇ ಸಾಲಿನ ವಿದ್ಯಾರ್ಥಿಗಳಿಗೆ ಶೇ.30ರಷ್ಟು ಸಿದ್ದ ಪಠ್ಯಕ್ರಮ ಇತ್ತು. ಆದರೆ, ಈ ವರ್ಷ ಸಿಇಟಿ ಬರೆದಾಗ ಶೇ.100ರಷ್ಟು ಪಠ್ಯಕ್ರಮವಿತ್ತು. ಹಾಗಾಗಿ ಈ ವರ್ಷ ಸಿಇಟಿ ಬರೆದ ಪುನರಾವರ್ತಿತ ವಿದ್ಯಾರ್ಥಿಗಳು ಹೊಸದಾಗಿ ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದಾರೆ.

"ನಮ್ಮ ಸ್ವಂತ ಶ್ರಮದಿಂದ ಓದಿ ಪರೀಕ್ಷೆ ಬರೆದಿದ್ದೇವೆ. ದ್ವಿತೀಯ ಪಿಯುಸಿ ಅಂಕಗಳನ್ನು ಯಾವ ಆಧಾರವಿಲ್ಲದೇ ಹಾಗೇ ನೀಡಿಲ್ಲ. ಬದಲಾಗಿ ನಮ್ಮ ಎಸ್ಎಸ್ಎಲ್‌ಸಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಅಂಕಗಳನ್ನು ನೀಡಿದ್ದಾರೆ. 2022ನೇ ಸಾಲಿನಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳು ಸಿಇಟಿ ಬರೆದರೆ, ಆ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ನಮಗೆ ಮುಂಚಿತವಾಗಿಯೇ ತಿಳಿಸಿದ್ದರೆ ನಾವು ಒಂದು ವರ್ಷ ಬಿಟ್ಟು ಪುನಃ ಪರೀಕ್ಷೆ ಬರೆಯುತ್ತಿರಲಿಲ್ಲ. ಕಳೆದ ವರ್ಷ ಸಿಇಟಿ ಬರೆದ ಒಟ್ಟು 25,000 ವಿದ್ಯಾರ್ಥಿಗಳು ಪುನಃ 2022ರಲ್ಲಿ ಸಿಇಟಿ ಬರೆದಿದ್ದಾರೆ. 25 ಸಾವಿರ ವಿದ್ಯಾರ್ಥಿಗಳ ರ‍್ಯಾಂಕ್ ಉತ್ತಮವಾಗಿಲ್ಲ. 2022ನೇ ಸಾಲಿನ ವಿದ್ಯಾರ್ಥಿಗಳ ಕೇವಲ ಸಿಇಟಿ ಫಲಿತಾಂಶವನ್ನು ಮಾತ್ರ ನೋಡಿದರೆ, 2021ನೇ ಸಾಲಿನ ವಿದ್ಯಾರ್ಥಿಗಳ ಸಿಇಟಿ ಫಲಿತಾಂಶ ಉತ್ತಮವಾಗಿದೆ. ಆದರೆ, ಪಿಯುಸಿ ಅಂಕಗಳನ್ನು ಸೇರಿಸದ ಕಾರಣ ರ‍್ಯಾಂಕಿಂಗ್‌ ಬಂದಿಲ್ಲ" ಎಂದು ಸದಾಶಿವ್ ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಕೆಸಿಇಟಿ ವಿವಾದ| ಹೈಕೋರ್ಟ್ ಮೆಟ್ಟಿಲೇರಿದ ಅಸಮಾಧಾನಿತ ವಿದ್ಯಾರ್ಥಿಗಳು

"ನಮಗೆ 1.6 ಲಕ್ಷದಲ್ಲಿ ರ‍್ಯಾಂಕ್‌ ಬಂದಿದೆ. ನಮಗಿಂತ ಸಿಇಟಿ ಅಂಕ ಕಡಿಮೆ ಇರುವವರ ರ‍್ಯಾಂಕಿಂಗ್ ಒಂದು ಲಕ್ಷದ ಒಳಗಡೆ ಇದೆ. ಈ ಬಗ್ಗೆ ಕೆಇಎ ಅವರನ್ನು ಕೇಳಿದಾಗ ಸರ್ಕಾರ ಆದೇಶ ಮಾಡಿದೆ. ಹಾಗಾಗಿ ನಾವು ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು. ನೀವೇ ಮೊದಲೆ ತಿಳಿದುಕೊಳ್ಳಬಹುದಿತ್ತಲ್ಲ ಎಂಬ ಬೇಜವಾಬ್ದಾರಿ ಉತ್ತರಗಳನ್ನು ನೀಡಿದರು. ಕಡಿಮೆ ರ‍್ಯಾಂಕ್‌ ಬಂದಿರುವುದರಿಂದ ಯಾವ ಕಾಲೇಜಿನಲ್ಲೂ ಪ್ರವೇಶ ಸಿಗುವುದಿಲ್ಲ" ಎಂದು ಕೆಇಎಯ ವಿರುದ್ಧ ಸದಾಶಿವ್ ಆರೋಪಿಸಿದರು.

ಸರ್ಕಾರದ ಸುತ್ತೋಲೆಯ ಪ್ರಕಾರ 2021 ಸಾಲಿನ ಸಿಇಟಿಯಲ್ಲಿ ಮಾತ್ರ ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ಆ ಪ್ರಕಾರ 2022-23ನೇ ಸಾಲಿನ ಸಿಇಟಿಯಲ್ಲಿ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಬೇಕು. 

ಆರೋಪದ ಬಗ್ಗೆ ಕೆಇಎ ಹೇಳಿದ್ದೇನು?

"ಕೆಇಎಯ ಅಧಿಕಾರಿಗಳಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ರಾಜ್ಯ ಮಂಡಳಿಯ ವಿದ್ಯಾರ್ಥಿಗಳು ನಾಲಾಯಕರು ಎಂದು ನಿಂದಿಸಿದ್ದರು. ಪಿಯುಸಿ ಮಂಡಳಿಯ ಮೌಲ್ಯಮಾಪನ ಪ್ರಕ್ರಿಯೆ ಕಳಪೆಯಾಗಿದೆ. ಆ ಕಾರಣಕ್ಕೆ ನಾವು ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ ಕೆಇಎ ಹೇಳಿದೆ. ಪಿಯುಸಿ ಮಂಡಳಿ ಪ್ರಕ್ರಿಯೆ ಸರಿಯಿಲ್ಲ ಎಂದಾದ ಮೇಲೆ ಪಿಯುಸಿ ಅಂಕಗಳು ವ್ಯರ್ಥ. ಜೊತೆಗೆ ನಮ್ಮನ್ನು ಯಾಕೆ ಉತ್ತೀರ್ಣ ಮಾಡಬೇಕಿತ್ತು" ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ. 

ಜೊತೆಗೆ 2021ನೇ ಸಾಲಿನ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ವಿದ್ಯಾರ್ಥಿಗಳಿಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿರಲಿಲ್ಲ. ಆದರೆ, ಆ ವಿದ್ಯಾರ್ಥಿಗಳ ಸಿಇಟಿ ರ‍್ಯಾಂಕಿಂಗ್‌ನಲ್ಲಿ ಪಿಯುಸಿ ಅಂಕಗಳನ್ನು ಪರಿಗಣಿಸಿದ್ದರು. ರಾಜ್ಯ ಪಿಯುಸಿ ಮಂಡಳಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದಾಗ, ಅವರ ರ‍್ಯಾಂಕಿಂಗ್‌ನಿಂದ ಪಿಯುಸಿ ಅಂಕಗಳನ್ನು ತೆಗೆದು ಪರಿಷ್ಕೃತ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಿದರು. ಒಟ್ಟು 664 ವಿದ್ಯಾರ್ಥಿಗಳ ಸಿಇಟಿ ರ‍್ಯಾಂಕಿಂಗ್‌ ಬದಲಾವಣೆ ಮಾಡಿದ್ದಾರೆ. 

ಆದರೆ, "ನಾವು ಮುಂಚಿತವಾಗಿಯೇ ಮಾಹಿತಿ ನೀಡಿರುವುದಾಗಿ ಕೆಇಎ ಹೇಳಿದೆ" ಎಂದು ಸರ್ಕಾರ ಪರ ವಕೀಲರು ಹೈಕೋರ್ಟಿನಲ್ಲಿ ವಾದ ಮಾಡಿದ್ದಾರೆ.

ವಿದ್ಯಾರ್ಥಿಗಳ ಪರ ವಾದ ಮಂಡಿಸಿರುವ ರಾಜೇಂದ್ರ ಬಿ ಕುಲಕರ್ಣಿ ಅವರು ಹೇಳಿದ್ದು ಹೀಗೆ...

ವಿದ್ಯಾರ್ಥಿಗಳ ಪರ ವಾದ ಮಂಡಿಸಿರುವ ವಕೀಲರಾದ ರಾಜೇಂದ್ರ ಬಿ ಕುಲಕರ್ಣಿ ಅವರು ಈದಿನ. ಕಾಮ್‌ ಜೊತೆ ಮಾತನಾಡಿ, "2006ರ ಗೆಜೆಟ್ ಪ್ರಕಾರ ಸಿಇಟಿಯಲ್ಲಿ ಶೇ.50ರಷ್ಟು ಅಂಕ ಮತ್ತು ಪಿಯುಸಿಯ ಶೇ.50ರಷ್ಟು ಅಂಕಗಳ ಆಧಾರದ ಮೇಲೆ ಸಿಇಟಿ ರ‍್ಯಾಂಕಿಂಗ್‌ ನೀಡುತ್ತಿದ್ದರು. ಕೊರೋನಾ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿರಲಿಲ್ಲ. 2021ನೇ ಸಾಲಿನಲ್ಲಿ ಪಿಯುಸಿ ಪರೀಕ್ಷೆ ಬರೆಯದ ಕಾರಣ ಪಿಯುಸಿ ಅಂಕಗಳನ್ನು ಸಿಇಟಿಯಲ್ಲಿ ಪರಿಗಣಿಸುವುದಿಲ್ಲ ಎಂದು 2021 ಸೆಪ್ಟೆಂಬರ್‌ನಲ್ಲಿ ಸರ್ಕಾರ ಒಂದು ಸುತ್ತೋಲೆಯನ್ನು ಹೊರಡಿಸಿತ್ತು. ಆದರೆ, ಮುಂದಿನ ವರ್ಷ ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಮೊದಲೆ ಹೇಳಿದ್ದರೆ ವಿದ್ಯಾರ್ಥಿಗಳು ಒಂದು ವರ್ಷ ಕಾದು ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಶ್ಯಕತೆ ಇರಲಿಲ್ಲ" ಎಂದು ತಿಳಿಸಿದರು.

2021ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಬೇಕಾದರೆ, ಎಸ್ಎಸ್ಎಲ್‌ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಪರಿಗಣಿಸಲಾಗಿದೆ. ಹಾಗೆಯೇ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿದ್ದೀರಾ ಎಂದು ಕೆಇಎಯನ್ನು ನ್ಯಾಯಾಲಯವು ಪ್ರಶ್ನೆ ಮಾಡಿದೆ.

"ಮಕ್ಕಳು ಪರೀಕ್ಷೆ ಬರೆಯಲು ಆಗುವುದಿಲ್ಲ ಎಂದು ಹೇಳಿರಲಿಲ್ಲ. ಸರ್ಕಾರವೆ ಕೊರೊನಾ ಇದ್ದ ಕಾರಣ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಿದ್ದರು. ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಆಧಾರದ ಮೇಲೆ ಒಂದು ನಿರ್ದಿಷ್ಟ ಶೇಕಡವಾರು ಫಲಿತಾಂಶ ನೀಡಿರುವಾಗ, ಯಾಕೆ ಅವರ ಅಂಕಗಳನ್ನು ಪರಿಗಣಿಸಿಲ್ಲ ಎಂಬ ಪ್ರಶ್ನೆಯನ್ನು ನ್ಯಾಯಾಲಯದ ಮುಂದಿಟ್ಟಿದ್ದೇವೆ" ಎಂದು ವಕೀಲರು ತಿಳಿಸಿದರು.

ಮೊದಲ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ, ಪುನಾರವರ್ತಿತ ವಿದ್ಯಾರ್ಥಿಗಳಿಗೂ ಒಂದೇ ಪರೀಕ್ಷೆ ನಡೆಸಿ, ತಾರತಮ್ಯ ಮಾಡುತ್ತಿದ್ದಾರೆ ಎಂಬ ವಾದವನ್ನು ಮಂಡಿಸಿರುವುದಾಗಿ ವಕೀಲರು ತಿಳಿಸಿದರು.

"2021ನೇ ಸಾಲಿನ ಒಬ್ಬರು ಅಥವಾ ಇಬ್ಬರು ಮಾತ್ರ ಈ ಬಾರಿ ಸಿಇಟಿ ಬರೆದಿರೋದಲ್ಲ. 25,000 ವಿದ್ಯಾರ್ಥಿಗಳು ಒಂದು ವರ್ಷದ ನಂತರ ಪುನಃ ಪರೀಕ್ಷೆ ಬರೆದಿದ್ದಾರೆ. ಮುಂದಿನ ವರ್ಷ ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದಾದರೆ, ಮೊದಲ ಬಾರಿಗಿಂತ ಈ ವರ್ಷ ಮತ್ತಷ್ಟು ಕಡಿಮೆ ರ‍್ಯಾಂಕಿಂಗ್‌ ಸಿಗುತ್ತದೆ ಎಂಬುದು ಎಲ್ಲ ಮಕ್ಕಳಿಗೂ ತಿಳಿದ ವಿಚಾರ. ಹೀಗಿರುವಾಗ ವಿದ್ಯಾರ್ಥಿಗಳು ಮತ್ತೆ ಯಾಕೆ ಪರೀಕ್ಷೆ ಬರೆಯುತ್ತಾರೆ. ಕೆಇಎ ಅಧಿಕಾರಿಗಳು ಹೇಳಿದ್ದರಿಂದ ಪುನಃ ಪರೀಕ್ಷೆ ಬರೆದಿದ್ದಾರೆ" ಎಂದು ವಕೀಲರು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್