ಸ್ವಂತ ಇಂಟರ್‌ನೆಟ್‌ ಸೇವೆ ಹೊಂದಿರುವ ಭಾರತದ ಮೊದಲ ರಾಜ್ಯ ಕೇರಳ

  • ಸ್ವಂತ ಇಂಟರ್‌ನೆಟ್‌ ಸೇವೆ ಹೊಂದಿರುವ ಏಕೈಕ ರಾಜ್ಯ ಕೇರಳ
  • 30 ಸಾವಿರ ಸರ್ಕಾರಿ ಕಚೇರಿಗಳಿಗೆ ಉಚಿತ ಇಂಟರ್‌ನೆಟ್ ಸೇವೆ

ಭಾರತದಲ್ಲಿಯೇ ಸ್ವಂತ ಇಂಟರ್‌ನೆಟ್‌ ಸೇವೆ ಹೊಂದಿರುವ ಮೊದಲ ರಾಜ್ಯ ನಮ್ಮದು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗುರುವಾರ ತಿಳಿಸಿದ್ದಾರೆ.

ರಾಜ್ಯದ ಪ್ರತಿಯೊಬ್ಬರಿಗೂ ಇಂಟರ್‌ನೆಟ್ ಒದಗಿಸಲು ಸರ್ಕಾರವು ಅತಿ ಮಹತ್ವಾಕಾಂಕ್ಷೆಯ ʻಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ (ಕೆಎಫ್ಒಎನ್)ʼ ಐಟಿ ಮೂಲಸೌಕರ್ಯ ಯೋಜನೆ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ದೂರಸಂಪರ್ಕ ಇಲಾಖೆಯಿಂದ ರಾಜ್ಯ ಸರ್ಕಾರವು ಇಂಟರ್‌ನೆಟ್ ಸೇವಾ ಪೂರೈಕೆದಾರ (ಐಎಸ್‌ಪಿ) ಪರವಾನಗಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಈ ಪ್ರಕಟಣೆ ಹೊರಬಿದ್ದಿದೆ.

ʻʻಸಮಾಜದ ಡಿಜಿಟಲ್ ವಿಭಜನೆ ನೀಗಿಸುವ ಉದ್ದೇಶ ಹೊಂದಿರುವ ಈ ಯೋಜನೆಯು ತನ್ನ ಕಾರ್ಯಾಚರಣೆ ಪ್ರಾರಂಭಿಸಲಿದೆʼʼ ಎಂದು ಮುಖ್ಯಮಂತ್ರಿ ಹೇಳಿದರು.

ʻʻಕೇರಳವು ತನ್ನದೇ ಆದ ಇಂಟರ್‌ನೆಟ್‌ ಸೇವೆ ಹೊಂದಿರುವ ದೇಶದ ಏಕೈಕ ರಾಜ್ಯ. ಇದಕ್ಕಾಗಿ ಕೆಎಫ್ಒಎನ್ ದೂರಸಂಪರ್ಕ ಇಲಾಖೆಯಿಂದ ಐಎಸ್‌ಪಿ ಪರವಾನಗಿ ಪಡೆದಿದೆ. ನಮ್ಮ ರಾಜ್ಯದ ಪ್ರತಿಷ್ಠಿತ ಕೆಎಫ್‌ಒಎನ್‌ ಯೋಜನೆಯು ರಾಜ್ಯದ ಜನತೆಗೆ ಇಂಟರ್‌ನೆಟ್‌ ಅನ್ನು ಮೂಲಭೂತ ಹಕ್ಕಾಗಿ ಒದಗಿಸಲು ಕಾರ್ಯಾಚರಣೆ ಆರಂಭಿಸಲಿದೆʼʼ ಎಂದು ಪಿಣರಾಯಿ ಅವರು ಟ್ವೀಟ್‌ ಮಾಡಿದ್ದಾರೆ.

ಈ ಯೋಜನೆಯ ಮೂಲಕ ರಾಜ್ಯದಲ್ಲಿರುವ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಮತ್ತು 30 ಸಾವಿರ ಸರ್ಕಾರಿ ಕಚೇರಿಗಳಿಗೆ ಉಚಿತ ಇಂಟರ್‌ನೆಟ್ ಒದಗಿಸಲು ಯೋಜಿಸಲಾಗಿದೆ.

ಇಂಟರ್‌ನೆಟ್ ಸಂಪರ್ಕವನ್ನು ಮೂಲಭೂತ ಹಕ್ಕು ಎಂದು 2019ರಲ್ಲಿ ಕೇರಳ ಸರ್ಕಾರ ಘೋಷಿಸಿದೆ. ರಾಜ್ಯದ ಎಲ್ಲರಿಗೂ ಇಂಟರ್ನೆಟ್ ಸೇವೆ ಒದಗಿಸುವ ನಿಟ್ಟಿನಲ್ಲಿ ₹1,548 ಕೋಟಿಗಳ ಕೆಎಫ್ಒಎನ್ ಯೋಜನೆ ಪ್ರಾರಂಭಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್