ದಲಿತ ಸಹೋದರಿಯರ ಹತ್ಯೆ | ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿದ ಎನ್‌ಸಿಎಸ್‌ಸಿ ತನಿಖಾ ತಂಡ

  • ದಲಿತ ಸಹೋದರಿಯರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ
  • ಸ್ವತಂತ್ರ ತನಿಖೆ ಆರಂಭಿಸಿದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ

ಉತ್ತರ ಪ್ರದೇಶ ಲಖಿಂಪುರ್‌ ಖೇರಿಯಲ್ಲಿ ನಡೆದ ಇಬ್ಬರು ದಲಿತ ಅಪ್ರಾಪ್ತ ಸಹೋದರಿಯರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಕುರಿತು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್‌ ನೀಡಿದ ಕೆಲವೇ ದಿನಗಳಲ್ಲಿ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ (ಎನ್‌ಸಿಎಸ್‌ಸಿ) ತಂಡವು ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ಆರಂಭಿಸಲು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದೆ.

ಆಯೋಗದ ಸದಸ್ಯ ಅಂಜು ಬಾಲಾ, ಇತರ ಅಧಿಕಾರಿಗಳೊಂದಿಗೆ ಅಪರಾಧ ನಡೆದ ಸ್ಥಳಕ್ಕೆ ಮತ್ತು ಸಂತ್ರಸ್ತರು ವಾಸಿಸುತ್ತಿದ್ದ ಗ್ರಾಮಕ್ಕೆ ಭೇಟಿ ನೀಡಿದರು. ಪ್ರಕರಣದ ತನಿಖೆಯ ಕುರಿತು ಪೊಲೀಸರು ಮತ್ತು ಆಡಳಿತದಿಂದ ಮಾಹಿತಿ ಪಡೆಯುವ ಮೊದಲು ಬಾಲಾ ಬಾಲಕಿಯರ ಕುಟುಂಬವನ್ನು ಭೇಟಿ ಮಾಡಿದರು ಹಾಗೂ ಸ್ಥಳೀಯರೊಂದಿಗೆ ಸಂವಾದ ನಡೆಸಿದರು ಎಂದು ದಿ ಹಿಂದೂ ವರದಿ ಮಾಡಿದೆ.

ಸ್ಥಳೀಯ ಆಡಳಿತ, ಪೊಲೀಸ್ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದ ಎನ್‌ಸಿಎಸ್‌ಸಿ, ಘಟನೆಯ ಬಗ್ಗೆ ತಾನು ಸ್ವತಂತ್ರ ತನಿಖೆ ನಡೆಸುವುದಾಗಿ ಘೋಷಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೆಗೆದುಕೊಂಡ ಕ್ರಮಗಳ ಬಗ್ಗೆ ತಕ್ಷಣ ವರದಿಯನ್ನು ಕೇಳಲಾಗಿದೆ.

ಈ ಸುದ್ದಿ ಓದಿದ್ದೀರಾ?: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ತನಿಖಾ ಸಂಸ್ಥೆಗಳ ದುರ್ಬಳಕೆ ವಿರುದ್ಧ ನಿಲುವಳಿ ಮಂಡನೆ

15 ಮತ್ತು 17ವರ್ಷ ವಯಸ್ಸಿನ ಇಬ್ಬರು ದಲಿತ ಬಾಲಕಿಯರ ಶವಗಳು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೆಪ್ಟೆಂಬರ್‌ 14ರಂದು ಪತ್ತೆಯಾಗಿದ್ದವು. ತಮ್ಮ ಮಕ್ಕಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಮಕ್ಕಳ ಕುಟುಂಬಸ್ಥರು ಆರೋಪಿಸಿದ್ದು, ಮಕ್ಕಳ ಸಾವಿಗೆ ನ್ಯಾಯ ಒದಗಿಸುವವರೆಗೆ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಮರಣೋತ್ತರ ಪರೀಕ್ಷೆಯ ವರದಿಯೂ ಸಹ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಿತ್ತು.

ಗ್ರಾಮಸ್ಥರ ಸಹಾಯದೊಂದಿಗೆ ಸ್ಥಳೀಯ ಪೊಲೀಸರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಆರು ಜನರನ್ನು ಬಂಧಿಸಿದರು. ಚೋಟು ಗೌತಮ್, ಸುಹೇಲ್, ಹಫೀಜುಲ್ ರೆಹಮಾನ್, ಜುನೈದ್, ಕರಿಮುದ್ದೀನ್ ಹಾಗೂ ಆರಿಫ್ ಆರೋಪಿಗಳು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರಾಜ್ಯ ಸರ್ಕಾರವು ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ಒಳಪಡಿಸುವ ಹಾಗೂ ಸಂತ್ರಸ್ತ ಕುಟುಂಬಕ್ಕೆ ಹಣಕಾಸಿನ ನೆರವು ಒದಗಿಸುವುದಾಗಿ ಭರವಸೆ ನೀಡಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್