ಸುಪ್ರೀಂಕೋರ್ಟ್‌ ವಿರುದ್ಧ ಟೀಕೆ| ಸಿಬಲ್‌ ವಿರುದ್ಧ ನ್ಯಾಯಾಂಗ ನಿಂದನೆ: ಒಪ್ಪಿಗೆ ಕೋರಿ ಅಟಾರ್ನಿ ಜನರಲ್‌ಗೆ ವಕೀಲರ ಪತ್ರ

  • ಸಿಬಲ್‌ ಮಾತುಗಳು ನ್ಯಾಯಾಲಯಕ್ಕೆ ಧಕ್ಕೆ ತರುವ ರೀತಿಯಲ್ಲಿವೆ
  • ಸಾಂವಿಧಾನಿಕ ಸಂಸ್ಥೆ ಮೇಲೆ ದಾಳಿ ನಡೆಸಿರುವುದು ಆಘಾತಕಾರಿ

ಸುಪ್ರೀಂಕೋರ್ಟ್‌ ವಿರುದ್ಧ ರಾಜ್ಯಸಭಾ ಸಂಸದ ಮತ್ತು ಹಿರಿಯ ವಕೀಲ ಕಪಿಲ್‌ ಸಿಬಲ್‌ ನೀಡಿರುವ ಹೇಳಿಕೆ ಖಂಡಿಸಿ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಒಪ್ಪಿಗೆ ಕೋರಿ ಇಬ್ಬರು ವಕೀಲರು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ. 

ವಕೀಲರಾದ ವಿನೀತ್ ಜಿಂದಾಲ್ ಮತ್ತು ಶಶಾಂಕ್ ಶೇಖರ್ ಝಾ ಅವರು ಕಪಿಲ್‌ ಸಿಬಲ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ನೀಡುವಂತೆ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಗೆ ಮನವಿ ಮಾಡಿದ್ದಾರೆ. 

ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್‌ 15ರ ಪ್ರಕಾರ, ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್‌ ಅಥವಾ ಸಾಲಿಸಿಟರ್‌ ಜನರಲ್‌ ಅವರ ಒಪ್ಪಿಗೆ ಬೇಕಿದೆ. 

ಕಪಿಲ್‌ ಸಿಬಲ್‌ ಅವರ ಮಾತುಗಳು ಸುಪ್ರೀಂಕೋರ್ಟ್‌ ಮತ್ತು ನ್ಯಾಯಾಧೀಶರ ಘನತೆಯನ್ನು ದುರ್ಬಲಗೊಳಿಸುವ ರೀತಿಯಲ್ಲಿವೆ. ಸಿಬಲ್‌ ಅವರು ಸುಪ್ರೀಂಕೋರ್ಟ್‌ನ ಸ್ವಾತಂತ್ರ್ಯದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಗಳು ನ್ಯಾಯಾಲಯದ ಘನತೆಗೆ ಧಕ್ಕೆ ತರುವ ರೀತಿಯಲ್ಲಿವೆ ಎಂದು ಝಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?:‌ ಸುಪ್ರೀಂ ಕೋರ್ಟ್‌ನಿಂದ ಪರಿಹಾರ ದೊರೆಯಲಿದೆ ಎಂದು ಭಾವಿಸಿ‌ದ್ದರೆ ಅದು ತಪ್ಪು: ಕಪಿಲ್‌ ಸಿಬಲ್‌ ವಿಷಾದ

ಅಂತೆಯೇ, ಸಿಬಲ್‌ ಅವರ ಹೇಳಿಕೆಗಳು ಸುಪ್ರೀಂಕೋರ್ಟ್‌ ನ್ಯಾಯಾಧೀಶರು ನೀಡಿರುವ ತೀರ್ಪುಗಳನ್ನು ಅಲ್ಲಗಳೆದಿವೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಇಂಥ ಹೇಳಿಕೆಗಳು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯಕ್ಕೆ ಕಾರಣವಾಗುತ್ತವೆ ಎಂದು ಜಿಂದಾಲ್‌ ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ. 

ಆಗಸ್ಟ್‌ 6ರಂದು ಕಪಿಲ್‌ ಸಿಬಲ್‌ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ "ಸುಪ್ರೀಂಕೋರ್ಟ್ ಮೇಲೆ ನನಗೆ ಯಾವುದೇ ಭರವಸೆ ಉಳಿದಿಲ್ಲ. ಕೆಲ ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಕೆಲವು ನಿರ್ದಿಷ್ಟ ನ್ಯಾಯಮೂರ್ತಿಗಳಿಗೆ ಮಾತ್ರ ವಹಿಸಲಾಗುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಸಿಬಲ್‌ ಅವರ ಹೇಳಿಕೆಗೆ ಅಖಿಲ ಭಾರತ ವಕೀಲರ ಸಂಘ ಖಂಡನೆ ವ್ಯಕ್ತಪಡಿಸಿತ್ತು. 

"ವಿಪಕ್ಷ ನಾಯಕರು ಸಾಂವಿಧಾನಿಕ ಸಂಸ್ಥೆಯ ಮೇಲೆ ದಾಳಿ ನಡೆಸಿರುವುದು ಇಡೀ ದೇಶಕ್ಕೆ ಆಘಾತಕಾರಿ ಸಂಗತಿ" ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

"ಕಾಂಗ್ರೆಸ್‌ ನಾಯಕರ ಹೇಳಿಕೆಗಳು ಹೇಗಿವೆ ಎಂದರೆ, ನ್ಯಾಯಾಲಯಗಳು ಅಥವಾ ಯಾವುದೇ ಸಾಂವಿಧಾನಿಕ ಪ್ರಾಧಿಕಾರದ ತೀರ್ಪು ಅವರ ಹಿತಾಸಕ್ತಿಗೆ ಅನುಗುಣವಾಗಿರಬೇಕು. ಇಲ್ಲವಾದಲ್ಲಿ, ಆ ಸಂಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದರ್ಥ ಎಂಬುದು ಅವರ ಮನಸ್ಥಿತಿ" ಎಂದು ರಿಜಿಜು ಕಿಡಿಕಾರಿದ್ದಾರೆ.  

"ಸಾಂವಿಧಾನಿಕ ಸಂಸ್ಥೆಗಳು ಕಾನೂನಿನ ನಿಯಮದ ಪ್ರಕಾರ ಕಾರ್ಯ ನಿರ್ವಹಿಸುತ್ತವೆ. ಸಾಂವಿಧಾನಾತ್ಮಕ ಹಕ್ಕುಗಳು ಮತ್ತು ಕಾನೂನು ನಿಯಮದ ಪ್ರಕಾರ ದೇಶದಲ್ಲಿ ಆಳ್ವಿಕೆ ನಡೆಸಬೇಕು ಎಂಬುದು ನಮ್ಮ ಮನಸಲ್ಲಿ ಇರುವುದು. ಆದರೆ, ನ್ಯಾಯಾಲಯದ ಮೇಲೆ ಈ ರೀತಿಯ ದಾಳಿ ನಡೆಯುತ್ತಿರುವುದು ದುರಾದೃಷ್ಟಕರ" ಎಂದು ಅವರು ಹೇಳಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180