ಕಾಶ್ಮೀರಿ ಪಂಡಿತರೇ, ಕಾಶ್ಮೀರ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಿ: ಕೆಪಿಎಸ್‌ಎಸ್‌ ಮುಖ್ಯಸ್ಥರಿಂದ ಸೂಚನೆ

Kashmiri-Pandit-Leader-Sanjay-Tikoo
  • ಕಣಿವೆಯಲ್ಲಿ ಮತ್ತೆ ಕಾಶ್ಮೀರಿ ಪಂಡಿತರನ್ನು ಗುರಿಪಡಿಸಿ ಹತ್ಯೆಗೈದ ಉಗ್ರರು
  • ಕಾಶ್ಮೀರಿ ಪಂಡಿತರಿಗೆ ಭದ್ರತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದ ಸಂಜಯ್ ಟೀಕೂ

ತಮ್ಮ ಮೇಲಿನ ಭಯೋತ್ಪಾದಕರ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರ ತೊರೆಯುವಂತೆ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯು(ಕೆಪಿಎಸ್‌ಎಸ್‌), ಕಾಶ್ಮೀರಿ ಪಂಡಿತರಿಗೆ ಸೂಚನೆ ನೀಡಿದೆ.

‘ಕಾಶ್ಮೀರಿ ಪಂಡಿತರ ಮೇಲೆ ಇಂದು ಮತ್ತೊಂದು ಮಾರಣಾಂತಿಕ ದಾಳಿ ನಡೆಸುವ ಮೂಲಕ ಕಾಶ್ಮೀರಿ ಕಣಿವೆಯ ಎಲ್ಲ ಕಾಶ್ಮೀರಿ ಪಂಡಿತರನ್ನು ಕೊಲ್ಲುವುದಾಗಿ ಭಯೋತ್ಪಾದಕರು ಸ್ಪಷ್ಟ ಸಂದೇಶ ನೀಡಿದ್ದಾರೆ’ಎಂದು ಕೆಪಿಎಸ್ಎಸ್‌ ಮುಖ್ಯಸ್ಥ ಸಂಜಯ್ ಟೀಕೂ ಹೇಳಿದ್ದಾರೆ.

ಕಾಶ್ಮೀರಿ ಕಣಿವೆಯನ್ನು ಬಿಟ್ಟು ಜಮ್ಮು ಮತ್ತು ದೆಹಲಿಯಂತಹ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಟಿಕೂ ಅವರು ಎಲ್ಲ ಕಾಶ್ಮೀರಿ ಪಂಡಿತರಿಗೆ ಒತ್ತಾಯಿಸಿದ್ದಾರೆ.

‘ನಾವು ಇದನ್ನು ಕಳೆದ 32 ವರ್ಷಗಳಿಂದ ನೋಡುತ್ತಿದ್ದೇವೆ. ಅಲ್ಪಸಂಖ್ಯಾತರಿಗೆ, ಅದರಲ್ಲೂ ಕಾಶ್ಮೀರಿ ಪಂಡಿತರಿಗೆ ಭದ್ರತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ನಾವು ಎಷ್ಟು ದಿನ ಹೀಗೇ ಸಾಯಬೇಕು? ಸಾಕು ಸಾಕು’ ಎಂದು ಅವರು ಸುದ್ದಿ ಸಂಸ್ಥೆ 'ಪಿಟಿಐ'ಗೆ ತಿಳಿಸಿದ್ದಾರೆ.

ಸಂಜಯ್ ಟೀಕೂ ಅವರ ಹೇಳಿಕೆಯನ್ನು ಕೆಪಿಎಸ್ಎಸ್‌ ತನ್ನ ಟ್ವಿಟರ್‌ ಖಾತೆಯಲ್ಲೂ ಪ್ರಕಟಿಸಿದೆ.

ಭಯೋತ್ಪಾದಕರು ಅಲ್ಪಸಂಖ್ಯಾತ ಸಮುದಾಯದ ಇನ್ನಷ್ಟು ಸದಸ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಮಂಗಳವಾರ ದಾಳಿಗೀಡಾದ ಸಂತ್ರಸ್ತರು ಈ ಮೊದಲೇ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು ಎಂದು ಕೆಪಿಎಸ್ಎಸ್ ಮುಖ್ಯಸ್ಥರು ತಿಳಿಸಿದ್ದಾರೆ.

‘ಆದರೆ, ಅಧಿಕಾರಿಗಳು ತಮ್ಮ ಹಳ್ಳಿಗಳಲ್ಲೇ ವಾಸಿಸುವಂತೆ ಅವರಿಗೆ ಹೇಳಿರುವುದು ವಿಪರ್ಯಾಸ. ಇಲ್ಲಿ ಏನು ಆಗುತ್ತಿದೆ? ಅಧಿಕಾರಿಗಳು ಸಂಭವನೀಯ ದಾಳಿಗಳ ಬಗ್ಗೆ ಮಾಹಿತಿ ಹೊಂದಿದ್ದಾರೆ. ಆದರೆ, ನಮಗೆ ಭದ್ರತೆ ನೀಡುತ್ತಿಲ್ಲ’ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರಿ ಪಂಡಿತರನ್ನೇ ಉಗ್ರರು ಗುರಿಯಾಗಿಸಿಕೊಂಡಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಸಂಜಯ್ ಟೀಕೂ, 'ಸ್ವಾತಂತ್ರ್ಯ ದಿನಾಚರಣೆಯ ಪರೇಡ್ ಸಂದರ್ಭದಲ್ಲಿ ಅವರು ಏಕೆ ದಾಳಿ ಮಾಡಲಿಲ್ಲ? ಅಮರನಾಥ ಯಾತ್ರೆಯ ಮೇಲೆ ಏಕೆ ದಾಳಿ ನಡೆಯಲಿಲ್ಲ? ಕಾಶ್ಮೀರದಲ್ಲಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಆದರೆ, ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿರುವುದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ.

ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಚೋಟಿಪೊರಾ ಬಳಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಸಹೋದರಿಬ್ಬರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಸುನಿಲ್ ಕುಮಾರ್ ಎಂಬುವವರು ಮೃತಪಟ್ಟಿದ್ದಾರೆ. ಅವರ ತಮ್ಮ ಪಿಂಟು ಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸೋಫಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್ದಾರ್ ಕಚೇರಿಯೊಳಗೆ ನುಗ್ಗಿ ಉಗ್ರನೊಬ್ಬ ರಾಹುಲ್‌ ಭಟ್‌ ಎಂಬ ಕಾಶ್ಮೀರಿ ಪಂಡಿತರೊಬ್ಬರನ್ನು ಹತ್ಯೆಗೈದಿದ್ದ.

ನಿಮಗೆ ಏನು ಅನ್ನಿಸ್ತು?
0 ವೋಟ್