ಸ್ವತಂತ್ರ ಭಾರತಕ್ಕೆ ಬರುವ ಭಾಗ್ಯ ನೇತಾಜಿ ಅವಶೇ‍ಷಗಳಿಗಾದರೂ ಸಿಗಲಿ; ಅನಿತಾ ಬೋಸ್ ಒತ್ತಾಯ

  • ಡಿಎನ್‌ಎ ಪರೀಕ್ಷೆಗೆ ಒಪ್ಪಿದ ಜಪಾನ್ ಸರ್ಕಾರ
  • ನಿಗೂಢವಾಗೇ ಉಳಿದಿರುವ ನೇತಾಜಿ ಸಾವು

ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು ಭಾರತಕ್ಕೆ ತರುವಂತೆ ನೇತಾಜಿ ಅವರ ಮಗಳು ಅನಿತಾ ಬೋಸ್ ಅವರು ಸ್ವಾತಂತ್ರ್ಯ ದಿನದಂದು ಒತ್ತಾಯಿಸಿದ್ದಾರೆ.

ಜರ್ಮನಿಯಲ್ಲಿ ವಾಸಿಸುತ್ತಿರುವ ಅರ್ಥಶಾಸ್ತ್ರಜ್ಞೆ ಅನಿತಾ ಬೋಸ್, ಟೋಕಿಯಾದ ರೆಂಕೋಜಿ ದೇವಸ್ಥಾನದಲ್ಲಿ ಇರಿಸಿರುವ ಅಸ್ಥಿ ನೇತಾಜಿ ಅವರದ್ದೇ ಎನ್ನುವುದನ್ನು ಖಾತ್ರಿ ಪಡಿಸಲು ಡಿಎನ್‌ಎ ಪರೀಕ್ಷೆ ಸಹಕಾರಿಯಾಗಲಿದೆ. ಅಂತಹ ಪ್ರಕ್ರಿಯೆಗೆ ಜಪಾನ್ ಸರ್ಕಾರ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ. 

"ಡಿಎನ್‌ಎ ಪರೀಕ್ಷೆಗೆ ಸಾಧನಗಳನ್ನು ಒದಗಿಸುವಷ್ಟು ಆಧುನಿಕ ತಂತ್ರಜ್ಞಾನವು ಬೆಳೆದಿದೆ. ಹಾಗಾಗಿ ಅವಶೇಷಗಳಿಂದ ಡಿಎನ್‌ಎ ಹೊರತೆಗೆಯಬಹುದು. ನೇತಾಜಿಯವರು 1945ರ ಆಗಸ್ಟ್‌ 18ರಂದು ನಿಧನರಾಗಿರುವ ಬಗೆಗೆ ಅನೇಕರು ಅನುಮಾನಿಸುತ್ತಾರೆ, ಟೋಕಿಯೊದ ರೆಂಕೋಜಿ ದೇವಾಲಯದಲ್ಲಿ ಇರಿಸಲಾಗಿರುವ ಅವಶೇಷಗಳು ಅವರಿಗೆ ಉತ್ತರ ನೀಡಬಲ್ಲವು" ಎಂದು ಹೇಳಿದ್ದಾರೆ.

"ನಾವು ಅಂತಿಮವಾಗಿ ನೇತಾಜಿ ಅವರನ್ನು ಮನೆಗೆ ಕರೆತರಲು ಸಿದ್ಧರಾಗೋಣ! ನೇತಾಜಿ ಅವರ ಜೀವನದಲ್ಲಿ ಅವರ ದೇಶದ ಸ್ವಾತಂತ್ರ್ಯಕ್ಕಿಂತ ಮುಖ್ಯವಾದುದು ಯಾವುದೂ ಇರಲಿಲ್ಲ. ಪರಕೀಯರ ಆಳ್ವಿಕೆಯಿಂದ ಮುಕ್ತವಾದ ಭಾರತದಲ್ಲಿ ಬದುಕುವುದಕ್ಕಿಂತ ಹೆಚ್ಚೇನು ಅವರು ಹಂಬಲಿಸಲಿಲ್ಲ! ಏಕೆಂದರೆ ಅವರು ಸ್ವಾತಂತ್ರ್ಯ ಅನುಭವಿಸಲು ಬದುಕಲಿಲ್ಲ. ಆ ಸ್ವಾತಂತ್ರ್ಯದ ಸಂತೋಷವನ್ನು ಅವರ ಅವಶೇಷಗಳಾದರೂ ಪಡೆಯಲಿ ”ಎಂದು ಭಾವುಕರಾಗಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಮಿತ್ರತ್ವ ಪ್ರೇಮದಿಂದ ದೇಶದ ಆರ್ಥಿಕತೆ ಹಾಳು| ಮನೀಶ್ ಸಿಸೋಡಿಯಾ

"ರೆಂಕೋಜಿ ದೇವಾಲಯದ ಅರ್ಚಕರು ಮತ್ತು ಜಪಾನ್ ಸರ್ಕಾರ ಡಿಎನ್‌ಎ ಪರೀಕ್ಷೆಗೆ ಒಪ್ಪಿಕೊಂಡಿದೆ. ನೇತಾಜಿ ಸಾವಿನ ಬಗ್ಗೆ ಕಳೆದ ಭಾರತ ಸರ್ಕಾರದ ಸಮಯದಲ್ಲಿ ತನಿಖೆ ನಡೆಸಿದ ನ್ಯಾ. ಮುಖರ್ಜಿ ಆಯೋಗದ ದಾಖಲೆಗಳಲ್ಲಿ ಇದನ್ನು ತಿಳಿಸಲಾಗಿದೆ. ಹೀಗಾಗಿ ಅವರನ್ನು ಮನೆಗೆ ಕರೆತರಲು ಅವಕಾಶ ನೀಡಿ. ನೇತಾಜಿ ಅವರಿಗೆ ತಮ್ಮ ದೇಶದ ಸ್ವಾತಂತ್ರ್ಯದ ಹೊರತಾಗಿ ಬೇರಾವುದೂ ಮುಖ್ಯವಾಗಿರಲಿಲ್ಲ" ಎಂದು ಹೇಳಿದ್ದಾರೆ.

ತಮ್ಮ ಸ್ವತಂತ್ರ ದೇಶಕ್ಕೆ ಮರಳುವುದು ನೇತಾಜಿ ಅವರ ಮಹದಾಸೆಯಾಗಿತ್ತು. ತಾವು ನೇತಾಜಿ ಅವರ ಒಬ್ಬಳೇ ಮಗಳಾಗಿ ಅದನ್ನಾದರು ಪೂರೈಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

"ನೇತಾಜಿ ಅವರು 1945ರಲ್ಲಿ ನಿಧನರಾದರು. ಆ ಬಳಿಕ ಜಪಾನ್ ಟೋಕಿಯೊದ ರೆಂಕೋಜಿ ದೇವಸ್ಥಾನ ಅವರ ಅವಶೇಷಗಳಿಗೆ ತಾತ್ಕಾಲಿಕ ಮನೆಯನ್ನು ಕಲ್ಪಿಸಿಕೊಟ್ಟಿದೆ. ಹಾಗೆ ಅವರ ಅವಶೇಷವನ್ನು ಭಕ್ತಿಯಿಂದ ನೋಡಿಕೊಂಡು, ಮೂರು ತಲೆಮಾರುಗಳ ಪುರೋಹಿತರಿಂದ ಮತ್ತು ಜಪಾನಿನ ಜನರಿಂದ ಗೌರವಿಸಲ್ಪಟ್ಟಿದೆ" ಎಂದು ಹೇಳಿದ್ದಾರೆ.

ನೇತಾಜಿಯವರ ಸಾವು ನಿಗೂಢವಾಗಿಯೇ ಉಳಿದಿದೆ, ಆದರೂ ಅವರು 1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ವ್ಯಾಪಕವಾಗಿ ನಂಬಲಾಗಿದೆ.

1945 ಆಗಸ್ಟ್ 18ರಂದು ತೈಪೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಸಾವನ್ನಪ್ಪಿದ್ದಾರೆ ಎಂದು ಎರಡು ತನಿಖಾ ಆಯೋಗಗಳು ತೀರ್ಮಾನಿಸಿವೆ. ನ್ಯಾಯಮೂರ್ತಿ ಎಂ ಕೆ ಮುಖರ್ಜಿ ನೇತೃತ್ವದ ಮೂರನೇ ತನಿಖಾ ಸಮಿತಿಯು ಅದನ್ನು ವಿರೋಧಿಸಿ ಬೋಸ್, ವಿಮಾನ ದುರ್ಘಟನೆಯ ನಂತರವೂ ಜೀವಂತವಾಗಿದ್ದರು ಎಂದು ಹೇಳಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್