ಮಂಗಳೂರು ಸ್ಫೋಟದ ಹೊಣೆ ಹೊತ್ತ ಐಆರ್‌ಸಿ; ಎಡಿಜಿಪಿ ಅಲೋಕ್‌ ಕುಮಾರ್‌ಗೆ ಬೆದರಿಕೆ

  • ದಕ್ಷಿಣ ಕನ್ನಡದ ಮೂರು ದೇಗುಲಗಳ ಮೇಲೆ ದಾಳಿ ನಡೆಸಲು ಸಂಚು?
  • ʻಐಆರ್‌ಸಿ ಪೋಸ್ಟ್‌ನ ವಿಷಯಗಳ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದೇವೆʼ

ಮಂಗಳೂರಿನ ಕುಕ್ಕರ್‌ ಸ್ಫೋಟ ಕೃತ್ಯದ ಹೊಣೆ ಹೊತ್ತು ಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌ (ಐಆರ್‌ಸಿ) ಎಂಬ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಕುರಿತಂತೆ ತನಿಖೆ ನಡೆಸಲು ರಾಜ್ಯ ಪೊಲೀಸರು ಮುಂದಾಗಿದ್ದಾರೆ. 

ಆ ಬಗ್ಗೆ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್‌ ಕುಮಾರ್‌, "ಐಆರ್‌ಸಿ ಈ ರೀತಿಯ ಹೇಳಿಕೆ ಹೊರಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಅದರಲ್ಲಿರುವ ಮಾಹಿತಿಯ ಸತ್ಯಾಸತ್ಯತೆ ನಮಗೆ ತಿಳಿದಿಲ್ಲ" ಎಂದರು.

ಅಲ್ಲದೆ, ಬಂಧಿತ ಮೊಹಮ್ಮದ್‌ ಶಾರಿಕ್‌ ಎಂಬಾತ ಕದ್ರಿಯಲ್ಲಿರುವ ದೇಗುಲ ಸೇರಿ ಇನ್ನಿತರ ಮೂರು ದೇವಸ್ಥಾನಗಳ ಮೇಲೂ ದಾಳಿ ನಡೆಸಲು ಪ್ರಯತ್ನಿಸಿದ್ದ ಎನ್ನಲಾಗಿದೆ.

ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೂ ಬೆದರಿಕೆ

ಹೇಳಿಕೆಯಲ್ಲಿ, "ನನ್ನ ಸಹೋದರನ ಬಂಧನದಿಂದ ಹಲವಾರು ಮಂದಿ ಖುಷಿಪಡುತ್ತಿದ್ದಾರೆ. ವಿಶೇಷವಾಗಿ ಎಡಿಜಿಪಿ ಅಲೋಕ್‌ ಕುಮಾರ್‌ ತುಂಬಾ ಖುಷಿಪಡುತ್ತಿದ್ದಾರೆ. ಅವರ ಸಂತೋಷ ದೀರ್ಘಕಾಲ ಉಳಿಯುವುದಿಲ್ಲ. ಶೀಘ್ರದಲ್ಲೇ ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಅನುಭವಿಸುತ್ತೀರಿ. ನಮ್ಮ ಸಮುದಾಯದವರ ಗುಂಪುಹತ್ಯೆಗಳು ಹೆಚ್ಚುತ್ತಿವೆ. ದಬ್ಬಾಳಿಕೆಯ ಕಾನೂನುಗಳು ನಮ್ಮನ್ನು ನಿಯಂತ್ರಣದಲ್ಲಿ ಇರಿಸಲು ಯತ್ನಿಸುತ್ತಿವೆ. ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡಲು ಆ ಕಾನೂನುಗಳು ಅಂಗೀಕರಿಸಲ್ಪಟ್ಟಿವೆ. ನಮ್ಮ ಧರ್ಮದ ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ನರಮೇಧಕ್ಕೆ ಕರೆಕೊಡುವ ಶಕ್ತಿಗಳು ಹೆಚ್ಚುತ್ತಿವೆ" ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಈ ವೈರಲ್‌ ಪೋಸ್ಟ್‌ ಬಗ್ಗೆ ಪ್ರತಿಕ್ರಿಯಿಸಿರುವ ಅಲೋಕ್‌ ಕುಮಾರ್‌, "ಐಆರ್‌ಸಿಯ ನೈಜತೆ ಮತ್ತು ಪೋಸ್ಟ್‌ನಲ್ಲಿನ ವಿಷಯಗಳ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದೇವೆ" ಎಂದರು.  

ನವೆಂಬರ್ 19 ರಂದು ಮಂಗಳೂರಿನಲ್ಲಿ ಆಟೋವೊಂದರಲ್ಲಿ ಕುಕ್ಕರ್‌ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಪ್ರಯಾಣಿಕ ಮತ್ತು ಚಾಲಕ ಗಾಯಗೊಂಡಿದ್ದರು. ಪೊಲೀಸರು ಸ್ಫೋಟವನ್ನು ಭಯೋತ್ಪಾದಕ ಕೃತ್ಯ ಎಂದು ಕರೆದಿದ್ದರು. ಪೊಲೀಸರು ಪ್ರಯಾಣಿಕ ಶಾರಿಕ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180