ಲೋಕ ಅದಾಲತ್‌ | ರಾಜ್ಯದಲ್ಲಿ ಒಂದೇ ದಿನ 8,34,620 ಪ್ರಕರಣಗಳು ಇತ್ಯರ್ಥ; ಬಿ ವೀರಪ್ಪ

Lok adalath
  • ದಾವೆ ಪೂರ್ವದ 6,81,596 ಪ್ರಕರಣಗಳು ಇತ್ಯರ್ಥ
  • 1,53,024 ಬಾಕಿ ಪ್ರಕರಣಗಳು ಸಂಧಾನದಿಂದ ಫಲಪ್ರದ

ಆಗಸ್ಟ್ 13 ರಂದು ನಡೆದ ಪ್ರಸಕ್ತ ಸಾಲಿನ ಮೂರನೇ ರಾಜ್ಯ ಲೋಕ ಅದಾಲತ್‌ನಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಒಟ್ಟು 8,34,620 ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯಕಾರಿ ಅಧ್ಯಕ್ಷ ಬಿ ವೀರಪ್ಪ ತಿಳಿಸಿದ್ದರು.  

ದಾವೆ ಪೂರ್ವದ 6,81,596 ಪ್ರಕರಣಗಳು ಮತ್ತು 1,53,024 ಬಾಕಿ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಿ ವೀರಪ್ಪ ಅವರು ವಿವರಿಸಿದರು. 

ಪ್ರಕರಣಗಳ ಇತ್ಯರ್ಥಕ್ಕಾಗಿ ಜಿಲ್ಲಾ ಮಟ್ಟದಲ್ಲಿ 1,009 ಪೀಠಗಳು ಮತ್ತು ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ 10 ಪೀಠಗಳನ್ನು ರಚಿಸಲಾಗಿತ್ತು. ಜಿಲ್ಲಾ ನ್ಯಾಯಾಂಗದಲ್ಲಿ 1,51,273 ಬಾಕಿ ಪ್ರಕರಣಗಳು ಮತ್ತು ಹೈಕೋರ್ಟ್‌ನಲ್ಲಿನ 751 ಬಾಕಿ ಪ್ರಕರಣಗಳು ಪ್ರಸಕ್ತ ಅದಾಲತ್‌ನಲ್ಲಿ ಇತ್ಯರ್ಥವಾಗಿವೆ ಎಂದು ಅವರು ಹೇಳಿದರು. 

ದಾವೆಪೂರ್ವ ಪ್ರಕರಣಗಳ ಪೈಕಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ 2,46,890 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 14 ಕೋಟಿ 35 ಲಕ್ಷ ರೂ.ಗೂ ಅಧಿಕ ಮೊತ್ತ ಸಂಗ್ರಹಿಸಲಾಗಿದೆ. ಖಾತೆ ಬದಲಾವಣೆ, ಗುರುತಿನ ಚೀಟಿ ನೀಡುವುದು, ಪಿಂಚಣಿ ಇತ್ಯಾದಿಯಂಥ 94,446 ದಾವೆಪೂರ್ವ ಪ್ರಕರಣಗಳನ್ನು ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳ ನೆರವಿನಿಂದ ವಿಲೇವಾರಿ ಮಾಡಲಾಗಿದೆ. ಬ್ಯಾಂಕ್‌ಗಳಿಂದ ಪಡೆದಿದ್ದ ಸಾಲಕ್ಕೆ ಸಂಬಂಧಿಸಿದ 8,571 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 25,08,33,360 ವಸೂಲಿ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು. 

95,756 ವಿದ್ಯುತ್‌ ಬಿಲ್‌ ಬಾಕಿ ಪ್ರಕರಣದಿಂದ 13,58,15,559 ರೂಪಾಯಿ ಮತ್ತು 78,716 ನೀರಿನ ಬಿಲ್‌ ಬಾಕಿ ಪ್ರಕರಣಗಳಿಂದ 13,86,19,435 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. 1,380 ವೈವಾಹಿಕ ವಿವಾದ ಪ್ರಕರಣಗಳನ್ನು ಇತ್ಯರ್ಥಪಡಿಸಿ, 120 ಜೋಡಿಗಳನ್ನು ಒಂದು ಮಾಡಲಾಗಿದೆ. ಮೈಸೂರಿನಲ್ಲಿ ವಿಚ್ಛೇದನ ಕೋರಿ ದಾವೆ ಹೂಡಿದ್ದ 27 ದಂಪತಿ ಮತ್ತು ಬೆಂಗಳೂರಿನ 12 ದಂಪತಿಯನ್ನು ಒಂದುಗೂಡಿಸಲಾಗಿದೆ ಎಂದು ಹೇಳಿದರು.

ರಾಜ್ಯದಾದ್ಯಂತ ಇರುವ ಸಿವಿಲ್‌ ನ್ಯಾಯಾಲಯಗಳು ಒಟ್ಟು 7,670 ಪ್ರಕರಣಗಳನ್ನು ರಾಜಿಯಲ್ಲಿ ಅಂತ್ಯಗೊಳಿಸಿವೆ ಎಂದರು.

ದೇಶಾದ್ಯಂತ ಒಂದು ಕೋಟಿಗೂ ಅಧಿಕ ಪ್ರಕರಣಗಳು ಇತ್ಯರ್ಥ 

ಇನ್ನು ದೇಶಾದ್ಯಂತ ನಡೆದ ಮೂರನೇ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ದೆಹಲಿ ಹೊರತುಪಡಿಸಿದಂತೆ ಒಟ್ಟು ಒಂದು ಕೋಟಿಗೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ 25 ಲಕ್ಷ ಬಾಕಿ ಪ್ರಕರಣಗಳು ಮತ್ತು 75 ಲಕ್ಷ ದಾವೆಪೂರ್ವ ಪ್ರಕರಣಗಳು ಸೇರಿವೆ. 

ದೇಶದ ಅಧೀನ ನ್ಯಾಯಾಲಯಗಳಲ್ಲಿ 4.2 ಕೋಟಿ ಪ್ರಕರಣಗಳು ಬಾಕಿ ಇದ್ದು, 2022ರ ಈವರೆಗೆ ನಿಯೋಜಿತ ಸಿಜೆಐ ಯು ಲಲಿತ್ ಅಧ್ಯಕ್ಷತೆಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ನಡೆದ ಮೂರು ರಾಷ್ಟ್ರೀಯ ಲೋಕ ಅದಾಲತ್‍ಗಳ ಮೂಲಕ 2.2 ಕೋಟಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್