ಬೆಂಗಳೂರು | ಸಂಚಾರ ವಿಭಾಗದ ʻವಿಶೇಷ ಕಮಿಷನರ್‌ʼ ಎಂ ಎ ಸಲೀಂ ಮುಂದಿರುವ ಸವಾಲುಗಳು

  • ಹೊಸ ಹುದ್ದೆ ಸೃಷ್ಟಿಸಿದ್ದರಿಂದ ಮಾತ್ರವೇ ಟ್ರಾಫಿಕ್ ಸಮಸ್ಯೆ ಬಗೆಹರಿಯುವುದೇ?
  • ರಸ್ತೆ ಗುಣಮಟ್ಟ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಸರಿಹೋಗುವುದು ಯಾವಾಗ?

ಬೆಂಗಳೂರಿನಲ್ಲಿ ಮಿತಿ ಮೀರುತ್ತಿರುವ ಸಂಚಾರ ದಟ್ಟಣೆಗೆ ಬ್ರೇಕ್‌ ಹಾಕಲು ರಾಜ್ಯ ಸರ್ಕಾರವು ಟ್ರಾಫಿಕ್‌ ಎಕ್ಸ್‌ಪರ್ಟ್‌, 1993ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಎಂ ಎ ಸಲೀಂ ಅವರನ್ನು ಸಂಚಾರ ವಿಭಾಗಕ್ಕೆ ಪುನಃ ಕರೆತಂದಿದೆ.

ಬೆಂಗಳೂರು ಸಂಚಾರ ದಟ್ಟಣೆ ಕುರಿತಂತೆ ಉದ್ಯಮಿಗಳು, ಹೂಡಿಕೆದಾರರು ನೀಡಿದ ದೂರನ್ನಾಧರಿಸಿ, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವುದು ಸರ್ಕಾರದ ಪ್ರಥಮ ಆದ್ಯತೆ ಎಂದು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು. ಆ ನಿಟ್ಟಿನಲ್ಲಿಯೇ ಸರ್ಕಾರವು ʼವಿಶೇಷ ಕಮಿಷನರ್‌ʼ ಹುದ್ದೆ ಸೃಷ್ಟಿಸಿ ಸಲೀಂ ಅವರನ್ನು ನೇಮಿಸಿದೆ.

Eedina App

ಸುಗಮ ಸಂಚಾರ ಮತ್ತು ಸಂಚಾರ ನಿಯಮಗಳ ಜಾರಿ ಹೊಣೆ ಹೊತ್ತಿರುವ ಬೆಂಗಳೂರು ನಗರದ ಪೊಲೀಸ್ ವಿಭಾಗದಲ್ಲಿ ಹೊಸದಾಗಿ ‘ವಿಶೇಷ ಕಮಿಷನರ್’ ಹುದ್ದೆ ಸೃಷ್ಟಿಸಿ, ಅಲ್ಲಿಗೆ ಎಡಿಜಿಪಿ ಎಂ ಎ ಸಲೀಂ ಅವರನ್ನು ರಾಜ್ಯ ಸರ್ಕಾರ ನಿಯೋಜಿಸಿದೆ. ಈ ಹಿಂದೆ ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕರಾಗಿ (ಆಡಳಿತ) ಸಲೀಂ ಅವರು  ಕಾರ್ಯ ನಿರ್ವಹಿಸಿದ್ದರು. 

ಕಮಿಷನರ್‌ ಪದವಿಗೂ ಮುನ್ನ ಸಲೀಂ ಸಂಚಾರದ ವಿಭಾಗದ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು. ಜತೆಗೆ ಬೆಂಗಳೂರು ನಗರವನ್ನು ಚೆನ್ನಾಗಿ ಅರಿತಿದ್ದರು. ವೈಜ್ಞಾನಿಕವಾಗಿ 122 ಪ್ರಮುಖ ರಸ್ತೆಗಳು ಮತ್ತು ಹಲವಾರು ಜಂಕ್ಷನ್‌ಗಳಲ್ಲಿ ಸುಧಾರಣೆ ತಂದಿದ್ದು, ಏಕಮುಖ ಸಂಚಾರ ವ್ಯವಸ್ಥೆ ಪರಿಚಯಿಸಿದ ಕೀರ್ತಿ ಡಾ ಸಲೀಂ ಅವರಿಗೆ ಸಲ್ಲುತ್ತದೆ. 

AV Eye Hospital ad

ಸಲೀಂ (56) ಅವರು ಬೆಂಗಳೂರಿನ ಉತ್ತರ ಹೊರವಲಯದ ಸೋಲದೇವನಹಳ್ಳಿಯ ನಿವಾಸಿಯಾಗಿದ್ದು, ನಗರದ ಸಂಚಾರಿ ಸಮಸ್ಯೆಗಳ ಕುರಿತು ಚೆನ್ನಾಗಿ ಅರಿತಿದ್ದಾರೆ. ಇವರು ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಸಂಚಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ನಗರದಲ್ಲಿ ಎಲ್ಲೆ ಮೀರುತ್ತಿರುವ ಸಂಚಾರ ದಟ್ಟಣೆಯನ್ನು ಹತೋಟಿಗೆ ತರಲು ಸರ್ಕಾರ ಎಂ ಎ ಸಲೀಂ ಅವರನ್ನೇನೋ ವಿಶೇಷ ಕಮಿಷನರ್‌ ಆಗಿ ನೇಮಿಸಿದೆ. ಆದರೆ, ಸರ್ಕಾರದ ಈ ನಡೆಯಿಂದ ಟ್ರಾಫಿಕ್‌ ಜಾಮ್‌ ಹತೋಟಿಗೆ ಬರುತ್ತದೆಯೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುವುದು ಸಾಮಾನ್ಯ. ಯಾಕೆಂದರೆ, ಸಂಚಾರ ದಟ್ಟಣೆ ಎನ್ನುವುದು ಕೇವಲ ಅಧಿಕಾರಿಯೊಬ್ಬರ ದಕ್ಷತೆಯನ್ನು ಮಾತ್ರವೇ ಆಧರಿಸಿಲ್ಲ. ಬದಲಿಗೆ ಅದು ರಸ್ತೆ ಗುಣಮಟ್ಟ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸೇರಿದಂತೆ ಇತರ ಹಲವು ಅಂಶಗಳನ್ನು ಅವಲಂಬಿಸಿದೆ.         

ಹಾಗಾದರೆ ಎಂ ಎ ಸಲೀಂ ಅವರ ಮುಂದಿರುವ ಸವಾಲುಗಳೇನು ಎಂಬುದನ್ನು ನೋಡುವುದಾದರೆ;

ಸಲೀಂ ಈ ಹಿಂದೆ ಸಂಚಾರಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಇದ್ದ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಹಲವಾರು ವ್ಯತ್ಯಾಸಗಳಿವೆ. ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ ಬಂದಿದ್ದರಿಂದ ರಸ್ತೆಗಳು ತೀರಾ ಹಾಳಾಗಿವೆ.

ಅಲ್ಲದೆ, ಈಗಿನ ಸರ್ಕಾರವು ವಿವಿಧ ಕಾಮಗಾರಿಗಳಲ್ಲಿ 40 ಪರ್ಸೆಂಟ್‌ ಭ್ರಷ್ಟಾಚಾರ ಮಾಡುತ್ತಿದೆ ಎಂದು ಸ್ವತಃ ಗುತ್ತಿಗೆದಾರ ಸಂಘಗಳೇ ಆರೋಪಿಸಿವೆ. ಇಂಥ ಸಂದರ್ಭದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರೀಕ್ಷಿಸುವುದು ಸಾ‍ಧ್ಯವೇ?

ಈ ಹಿಂದೆ ಸಲೀಂ ಅವರು ನಗರದ ಸಂಚಾರಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುವಾಗ ರಸ್ತೆಗಳ ವಿಚಾರವಾಗಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಹಿಂದಿನ ಅವಧಿಗೆ ಹೋಲಿಸಿದರೆ, ಈಗ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಬೆಂಗಳೂರಿನಲ್ಲಿ ವೈಟ್‌ ಟಾಪಿಂಗ್ ಮತ್ತು ರಸ್ತೆ ದುರಸ್ತಿ ಮಾಡುವ ನೆಪದಲ್ಲಿ ಹಲವಾರು ರಸ್ತೆಗಳನ್ನು ಮುಚ್ಚಲಾಗಿದೆ. ಇಂಥ ಸಂದರ್ಭಗಳಲ್ಲಿ ಸಲೀಂ ಅವರು ಹೇಗೆ ಸಂಚಾರ ದಟ್ಟಣೆ ನಿಯಂತ್ರಿಸುತ್ತಾರೆ ಎಂಬುದು ಪ್ರಶ್ನೆ.

"ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬದಲಾಗದೆ ಟ್ರಾಫಿಕ್‌ ನಿಯಂತ್ರಣಕ್ಕೆ ಬರುವುದಿಲ್ಲ" ಎಂದು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಈ ಹಿಂದೆಯೇ ಹೇಳಿತ್ತು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬದಲಾಗುವುದು ಎಂದರೆ, ಸರ್ಕಾರ ಹೆಚ್ಚಿನ ಸಂಖ್ಯೆಯ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಬೇಕು. ಆದರೆ, ಸರ್ಕಾರ ಇದ್ಯಾವುದನ್ನೂ ಮಾಡದೆ ಇದ್ದಾಗ ಜನರು ಆಟೋ, ಓಲಾ, ಉಬರ್‌ ಹಾಗೂ ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಾರೆ. ಆಗ, ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಕೇವಲ ಕಮಿಷನರ್‌ ಬದಲಾಯಿಸಿದರೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app