ಮಧ್ಯಪ್ರದೇಶ | ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 6 ದುಷ್ಕರ್ಮಿಗಳು: ಐವರ ಬಂಧನ

  • 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
  • ಅತ್ಯಾಚಾರವನ್ನು ನೋಡುವಂತೆ ಭಾವಿ ಪತಿಯನ್ನು ಒತ್ತಾಯಿಸಿದ್ದ ಆರೋಪಿಗಳು

ಭಾವಿ ಪತಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಲು ಹೋಗುತ್ತಿದ್ದ 17 ವರ್ಷದ ಅಪ್ರಾಪ್ತ ಯುವತಿಯ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಸೆಪ್ಟೆಂಬರ್‌ 17ರಂದು ನಡೆದಿದೆ. ಯುವಕನನ್ನು ಥಳಿಸಿರುವ ದುಷ್ಕರ್ಮಿಗಳು ಅತ್ಯಾಚಾರವನ್ನು ನೋಡುವಂತೆ ಒತ್ತಾಯಿಸಿ ವಿಕೃತಿ ಮೆರೆದಿದ್ದಾರೆ.

ʻʻಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾದ 24 ಗಂಟೆಗಳಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಶಂಕಿತರನ್ನು ಬಂಧಿಸಲಾಗಿದೆ. ಸೆಪ್ಟೆಂಬರ್‌ 17ರ ತಡರಾತ್ರಿ ರೇವಾದಲ್ಲಿ ಮೂವರು ಮತ್ತು ಭಾನುವಾರ ಸಂಜೆ ಮುಂಬೈನಲ್ಲಿ ಇಬ್ಬರನ್ನು ಬಂಧಿಸಲಾಗಿದೆʼʼ ಎಂದು ಪೊಲೀಸ್‌ ಅಧಿಕಾರಿ ನವನೀತ್‌ ಭಾಸಿನ್‌ ತಿಳಿಸಿದರು.

ʻʻರೇವಾದ ಪೊಲೀಸ್ ತಂಡವೊಂದು ಈಗಾಗಲೇ ಬೇರೊಂದು ಪ್ರಕರಣ ಸಂಬಂಧ ಮುಂಬೈನಲ್ಲಿ ಕಾರ್ಯಾಚರಣೆ ಮಾಡುತ್ತಿತ್ತು. ಇಬ್ಬರು ಸಾಮೂಹಿಕ ಅತ್ಯಾಚಾರ ಆರೋಪಿಗಳು ಮುಂಬೈನಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ ನಂತರ, ನಮ್ಮ ತಂಡವನ್ನು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದರು” ಎಂದು ಅವರು ಹೇಳಿದರು.

ಅಪ್ರಾಪ್ತ ಯುವತಿ ಮತ್ತು ಆಕೆಯ ಕುಟುಂಬವು ಆರಂಭದಲ್ಲಿ ದೂರು ದಾಖಲಿಸಲು ಹಿಂದೇಟು ಹಾಕಿದ್ದರು. ಆದರೆ, ಮಹಿಳಾ ಪೊಲೀಸ್ ಅಧಿಕಾರಿಗಳ ತಂಡವು ಅವರೊಂದಿಗೆ ಆಪ್ತಸಮಾಲೋಚನೆ ನಡೆಸಿ ದೂರು ದಾಖಲಿಸಲು ಪ್ರೇರೇಪಿಸಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಈ ಸುದ್ದಿ ಓದಿದ್ದೀರಾ?: ನಮ್ಮ ಮೆಟ್ರೋ | ಅಕ್ಟೋಬರ್‌ನಿಂದ ಮೊಬೈಲ್‌ನಲ್ಲೇ ಬುಕ್ ಮಾಡಬಹುದು ಮೆಟ್ರೋ ಟಿಕೆಟ್

ಯುವತಿಗೆ 18 ವರ್ಷ ತುಂಬಿದ ನಂತರ ವಿವಾಹವಾಗುವ ನಿರ್ಧಾರ ಮಾಡಿದ್ದ ಜೋಡಿಯು ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿತ್ತು. ದೇವಾಲಯಕ್ಕೆ ಭೇಟಿ ನೀಡಲು ಹೋಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಶನಿವಾರ ಬೆಳಿಗ್ಗೆ, ನಿಶ್ಚಿತ ವರ ಯುವತಿಯ ಮನೆಗೆ ಹೋಗಿ, ಕುಟುಂಬವನ್ನು ಭೇಟಿಯಾಗಿ ನಂತರ ಇಬ್ಬರೂ ದೇವಸ್ಥಾನಕ್ಕೆ ತೆರಳಿದ್ದಾರೆ. ದೇವಾಲಯದಲ್ಲಿ ಪೂಜೆ ಮಾಡಿಸಿ, ಹಿಂಭಾಗದಲ್ಲಿದ್ದ ಕಾಡಿನಲ್ಲಿ ಅಡ್ಡಾಡುತ್ತಿದ್ದಾಗ ಆರು ಜನರು ಅವರನ್ನು ಅಡ್ಡಗಟ್ಟಿದ್ದಾರೆ. ಯುವಕನನ್ನು ಹಿಡಿದು ಥಳಿಸಿದ ಅವರು ಇಬ್ಬರನ್ನು ಎಳೆದೊಯ್ದು ನಿರ್ಜನ ಪ್ರದೇಶದಲ್ಲಿ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ.

ಸಹಾಯಕ್ಕಾಗಿ ಯಾರನ್ನಾದರೂ ಕೂಗಿದರೆ ಕೊಲ್ಲುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಸಂತ್ರಸ್ತರಿಗೆ ಚಿತ್ರಹಿಂಸೆ ನೀಡಿದ ಅತ್ಯಾಚಾರಿಗಳು ಈ ಘಟನೆ ಬಗ್ಗೆ ಯಾರಿಗೂ ಹೇಳದಂತೆ ಹೆದರಿಸಿ ಓಡಿಹೋಗಿದ್ದಾರೆ.

ಘಟನೆ ಬಗ್ಗೆ ಸಂತ್ರಸ್ತೆಯು ಕುಟುಂಬದವರಿಗೆ ತಿಳಿಸಿದ್ದಾಳೆ. ಆದರೆ, ಈ ಘಟನೆ ತಮ್ಮ ಕುಟುಂಬಕ್ಕೆ ಕಳಂಕ ತರಬಹುದೆಂಬ ಭಯದಿಂದ ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ. ಆದರೆ, ʼಈ ಸಾಮೂಹಿಕ ಅತ್ಯಾಚಾರದ ಸುದ್ದಿ ನಮಗೆ ತಿಳಿಯಿತುʼ ಎಂದು ಪೊಲೀಸರು ವಿವರಿಸಿದರು.

"ಈ ಘಟನೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಆದರೆ, ಆರಂಭದಲ್ಲಿ ಸಂತ್ರಸ್ತೆ ಮತ್ತವರ ಕುಟುಂಬವು ದೂರು ನೀಡಲು ಹಿಂದೇಟು ಹಾಕಿದರು. ನಮ್ಮ ಮಹಿಳಾ ಅಧಿಕಾರಿಗಳು ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ ನಂತರ ಅಂತಿಮವಾಗಿ ದೂರು ದಾಖಲಿಸಲು ಅವರು ಒಪ್ಪಿದರು. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆʼʼ ಎಂದು ತಿಳಿಸಿದರು.

ʻʻಘಟನೆಯಿಂದ ಅಪ್ರಾಪ್ತ ಯುವತಿಯು ಆಘಾತಕ್ಕೊಳಗಾಗಿದ್ದಾಳೆ. ಆದರೆ, ಅಪಾಯದಿಂದ ಪಾರಾಗಿದ್ದಾಳೆʼʼ ಎಂದು ಅವರು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್