ಮಧ್ಯಪ್ರದೇಶ | ಶಾಲೆಗೆ ಹೋಗದಂತೆ ದಲಿತ ಬಾಲಕಿಯ ಬ್ಯಾಗ್ ಕಿತ್ತುಕೊಂಡು ದೌರ್ಜನ್ಯ

  • ದಲಿತ ಕುಟುಂಬ–ರಜಪೂತರ ನಡುವೆ ಮಾರಾಮಾರಿ ವಿಡಿಯೋ ವೈರಲ್
  • ಏಳು ಮಂದಿಯ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲು

ಶಾಲೆಗೆ ಹೋಗಬೇಡ ಎಂದು ದಲಿತ ಬಾಲಕಿಯ ಬ್ಯಾಗ್ ಕಿತ್ತುಕೊಂಡು ತಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ದಲಿತ ಕುಟುಂಬದವರ ಮೇಲೆ ಮೇಲ್ಜಾತಿಯ ರಜಪೂತರು ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ  ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಬವಲಿಯಖೇಡಿ ಗ್ರಾಮದಲ್ಲಿ ನಡೆದಿದೆ.

ಘಟನೆ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ರಜಪೂತ ಸಮುದಾಯದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಏನಿದು ಪ್ರಕರಣ? 

ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಬಾಲಕಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಆಕೆಯನ್ನು ತಡೆದು “ಹಳ್ಳಿಯ ಇತರ ಬಾಲಕಿಯರು ಶಾಲೆಗೆ ಹೋಗುತ್ತಿಲ್ಲ. ಹಾಗಾಗಿ, ನೀನೂ ಶಾಲೆಗೆ ಹೋಗಬೇಡ” ಎಂದು ಗ್ರಾಮದ ಮೇಲ್ಜಾತಿಯ ಗುಂಪು ಬಾಲಕಿಯ ಶಾಲಾ ಬ್ಯಾಗ್ ಕಿತ್ತುಕೊಂಡಿದ್ದರು. ಬಳಿಕ ಬಾಲಕಿಯ ಸಂಬಂಧಿಕರು ಮತ್ತು ಬಂಧಿತ ಆರೋಪಿಗಳ ಸಂಬಂಧಿಕರ ನಡುವೆ ಘರ್ಷಣೆ ಉಂಟಾಗಿತ್ತು. ದೊಣ್ಣೆಯಲ್ಲಿ ಹಲ್ಲೆ ಮಾಡುವ ವಿಡಿಯೋ ವೈರಲ್ ಆಗಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್‌ ಎ ಕೆ ಶೇಷ ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಒಬ್ಬ ತನ್ನ ಶಾಲಾ ಬ್ಯಾಗನ್ನು ಕಿತ್ತುಕೊಂಡಿದ್ದಾನೆ ಮತ್ತು ತರಗತಿಗಳಿಗೆ ಹಾಜರಾಗುವುದಕ್ಕೆ ಆಕ್ಷೇಪಿಸಿದ್ದಾನೆ ಎಂದು ಆರೋಪಿಸಿ ಬಾಲಕಿ ವಿಡಿಯೊ ಬಿಡುಗಡೆ ಮಾಡಿದ್ದಾಳೆ. ಇದಕ್ಕೆ ವಿರೋಧಿಸಿದಾಗ ಆರೋಪಿಯು ತನ್ನ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಇತರ ಕುಟುಂಬ ಸದಸ್ಯರನ್ನು ಸಹ ಥಳಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಉದ್ಯೋಗ ಆದೇಶ ಪತ್ರಕ್ಕೆ ಆಗ್ರಹಿಸಿ ಅಭ್ಯರ್ಥಿಗಳಿಂದ 1068 ಕಿ.ಮೀ ಕಾಲ್ನಡಿಗೆ

ಆರೋಪಿಗಳ ಕಡೆಯಿಂದ ಪ್ರತಿ ದೂರು ದಾಖಲಾಗಿದ್ದು, ಬಾಲಕಿಯ ಸಹೋದರ ಮತ್ತು ಇತರ ಮೂವರ ವಿರುದ್ಧವೂ ಹಲ್ಲೆ ಆರೋಪ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು 'ಇಂಡಿಯನ್ ಎಕ್ಸ್‌ಪ್ರೆಸ್‌' ವರಿದಿ ಪ್ರಕಟಿಸಿದೆ. 

''ತಹಶೀಲ್ದಾರ್ ನಡೆಸಿದ ತನಿಖೆಯಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. ಯಾವುದೇ ಸಮುದಾಯದಿಂದ ಜಾತಿ ಅಥವಾ ಪ್ರಾಬಲ್ಯದ ಸಮಸ್ಯೆ ಇಲ್ಲ. ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ತಡೆಯುತ್ತಿಲ್ಲ” ಎಂದು ಜಿಲ್ಲಾಧಿಕಾರಿ ದಿನೇಶ್ ಜೈನ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್