ಮಧ್ಯಪ್ರದೇಶ | ಚುನಾಯಿತ ಗ್ರಾಪಂ ಮಹಿಳೆಯರ ಬದಲಿಗೆ ಪತಿಯಂದಿರಿಂದ ಪ್ರಮಾಣವಚನ

  • ಮಹಿಳಾ ಸದಸ್ಯರ ಬದಲಿಗೆ ಪುರುಷರಿಂದ ಪ್ರಮಾಣ ವಚನ
  • ಮಧ್ಯಪ್ರದೇಶದ ಮೂರು ಜಿಲ್ಲೆಗಳಲ್ಲಿ ವರದಿಯಾದ ಅವಾಂತರ

ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿದ್ದ ಮಹಿಳೆಯರ ಬದಲು ಅವರ ಗಂಡಂದಿರು ಪ್ರಮಾಣವಚನ ಸ್ವೀಕರಿಸಿರುವುದು ಮಧ್ಯಪ್ರದೇಶದ ಧಾರ್‌, ದಾಮೋಹ್‌ ಹಾಗೂ ಸಾಗರ್‌ ಜಿಲ್ಲೆಗಳಿಂದ ವರದಿಯಾಗಿದೆ. 

ಗ್ರಾಮ ಪಂಚಾಯತಿಗಳ ಸರಪಂಚ್‌ ಮತ್ತು ಸದಸ್ಯರಾಗಿ ಚುನಾಯಿತರಾದ ಕನಿಷ್ಠ 15 ಮಹಿಳೆಯರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಭಿಕರಾಗಿ ಅಥವಾ ಮನೆಯಲ್ಲಿದ್ದರೆ ಅವರ ಬದಲಿಗೆ ʼಪಂಚ್‌ ಪತಿಗಳುʼ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಪ್ರತಿಜ್ಞಾವಿಧಿ ಓದಿದ್ದಾರೆ.

ಧಾರ್‌ನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಿಯೋಜಿತ ಸರ್ಕಾರಿ ಅಧಿಕಾರಿ ಬದಲಿಗೆ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಪ್ರಮಾಣವಚನ ಬೋಧಿಸಿದ್ದಾರೆ. ಹಾಗೆಯೇ ದಾಮೋಹ್‌ನಲ್ಲಿ ಮಹಿಳಾ ಸದಸ್ಯರ ಬದಲಿಗೆ ಅವರ ಕುಟುಂಬದ ಪುರುಷರಿಗೆ ಪ್ರಮಾಣವಚನ ಬೋಧಿಸಿದ್ದಕ್ಕಾಗಿ ದಾಮೋಹ್‌ ಜಿಲ್ಲೆಯ ಗೈಸಾಬಾದ್‌ ಪಂಚಾಯತಿ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗಿದೆ.

ಧಾರ್‌ ಜಿಲ್ಲೆಯ ಸುಂದ್ರೇಲ್‌ನಲ್ಲಿ ಗುರುವಾರ ನಡೆದ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡ ರಾಧೇಶ್ಯಾಮ್ ಕಾಸರವಾಡಿಯ ಅವರು ವೇದಿಕೆಯಲ್ಲಿ ಚುನಾಯಿತ ಮಹಿಳೆಯರ ಪತಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಆಯ್ಕೆಯಾಗಿದ್ದ ಮಹಿಳಾ ಸದಸ್ಯರಾದ ರಾಧಾಬಾಯಿ, ಲಕ್ಷ್ಮೀಬಾಯಿ ಹಾಗೂ ಕಿರಣ್ ಬಾಯಿ ಪ್ರೇಕ್ಷಕರಾಗಿ ಕುಳಿತುಕೊಂಡರು. ಅವರ ಪತಿಯರಾದ ಲಖನ್, ದಿಲೀಪ್ ಮತ್ತು ಜೀವನ್ ಪ್ರಮಾಣವಚನ ಸ್ವೀಕರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಉಳಿದ ಐವರು ಮಹಿಳೆಯರು ವೇದಿಕೆ ಮೂಲೆಯಲ್ಲಿ ನಿಂತು ಪ್ರಮಾಣ ವಚನ ಸ್ವೀಕರಿಸಿದರು.

"ಸುಂದ್ರೇಲ್‌ನಲ್ಲಿ ನಡೆದ ಘಟನೆ ನಮ್ಮ ಗಮನಕ್ಕೂ ಬಂದಿದೆ. ಇದು ಅಧಿಕಾರಿಗಳ ಕರ್ತವ್ಯಲೋಪದಿಂದಾದ ಕೃತ್ಯ. ಪ್ರಸ್ತುತ ಆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಬದಾಮ್‌ ಸಿಂಗ್‌ ನಿಂಗ್ವಾಲ್‌ ಅವರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಸ್ಥಳೀಯ ರಾಜಕಾರಣಿಯೊಬ್ಬರು ಹೇಗೆ ಪ್ರಮಾಣ ವಚನ ಬೋಧಿಸಿದರು ಎಂಬುದನ್ನು ನಾವು ಪ್ರಶ್ನಿಸಿದ್ದೇವೆ" ಎಂದು ಧಾರ್‌ ಜಿಲ್ಲಾ ಪಂಚಾಯತಿಯ ಸಿಇಒ ಕೆ ಎಲ್‌ ಮೀನಾ ತಿಳಿಸಿರುವುದಾಗಿ 'ಟೈಮ್ಸ್‌ ಆಫ್‌ ಇಂಡಿಯಾ' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಸುದ್ದಿ ಓದಿದ್ದೀರಾ?: ನೂಪುರ್ ಶರ್ಮಾ ಹೇಳಿಕೆ | ನಿರೂಪಕಿ ನಾವಿಕಾ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಆದೇಶ

ʻʻಗ್ರಾಮ ಪಂಚಾಯತಿ ಸದಸ್ಯೆಯರಿಂದ ಈವರೆಗೆ ಯಾವುದೇ ದೂರು ಬಂದಿಲ್ಲ. ಘಟನೆ ಬಗ್ಗೆ ಸದಸ್ಯೆಯರು ಆಕ್ಷೇಪಿಸಿದರೆ ಅಥವಾ ಅವರ ಹಕ್ಕುಗಳ ಉಲ್ಲಂಘನೆಯ ಬಗ್ಗೆ ದೂರು ಸಲ್ಲಿಸಿದರೆ ಅವರ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಮೀನಾ ತಿಳಿಸಿದರು.

"ಚುನಾಯಿತ ಅಭ್ಯರ್ಥಿಗಳಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡಲು ನಾವು ತರಬೇತಿ ಆಯೋಜಿಸುತ್ತಿದ್ದೇವೆ. ಗ್ರಾಮದ ಸಮಸ್ಯೆಗಳ ಬಗ್ಗೆ ಆಡಳಿತದೊಂದಿಗೆ ಸಂವಹನ ನಡೆಸಲು ಸುಧಾರಿತ ವಿಧಾನಗಳನ್ನು ಅವರಿಗೆ ಹೇಳಿಕೊಡಲಾಗುವುದು" ಎಂದು ಅವರು ಹೇಳಿದರು.

ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಮಹಿಳೆಯರ ಬದಲಿಗೆ ಅವರ ಕುಟುಂಬದ ಪುರುಷರು ಪ್ರಮಾಣ ವಚನ ಸ್ವೀಕರಿಸಿದ ಘಟನೆ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಜೈಸಿನಗರದಲ್ಲಿ ನಡೆದಿತ್ತು. ಚುನಾಯಿತ ಏಳು ಮಂದಿ ಮಹಿಳಾ ಸದಸ್ಯರ ಬದಲಿಗೆ ಅವರ ಪತಿ, ಸೋದರ ಮಾವ ಅಥವಾ ತಂದೆ ಗ್ರಾಮ ಪಂಚಾಯತಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೈಸಿನಗರ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಆಶಾರಾಮ್‌ ಸಾಹು ಪ್ರಮಾಣ ವಚನ ಬೋಧಿಸಿದ್ದರು. ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಿರುವುದಾಗಿ ಸಾಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಸ್ಟ್‌ 5ರಂದು ತಿಳಿಸಿದ್ದರು.

ಜೈಸಿನಗರ ಗ್ರಾಮ ಪಂಚಾಯತಿ ಕಾರ್ಯದರ್ಶಿ ಆಶಾರಾಮ್ ಸಾಹು ಪ್ರಮಾಣ ವಚನ ಸಮಾರಂಭವನ್ನು ಸಮರ್ಥಿಸಿಕೊಂಡಿದ್ದರು. ಮಹಿಳೆಯರ ಬದಲಿಗೆ ಪುರುಷರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ನಿಮಗೆ ಏನು ಅನ್ನಿಸ್ತು?
0 ವೋಟ್