ಮಧ್ಯಪ್ರದೇಶ | ಅಪೌಷ್ಟಿಕತೆಗೆ ಬಲಿಯಾದ ಬುಡಕಟ್ಟು ಸಮುದಾಯದ ಬಾಲಕಿ

  • ಬಾಲಕಿಗೆ ಪೌಷ್ಟಿಕಾಂಶ ನೀಡಲು ಎನ್ಆರ್‌ಸಿ ಕೇಂದ್ರಕ್ಕೆ ದಾಖಲಿಸಲಾಗಿತ್ತು
  • ಶಿಯೋಪುರ್ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ

ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಬುಡಕಟ್ಟು ಸಮುದಾಯದ ಬಾಲಕಿಯೊಬ್ಬಳು ಗುರುವಾರ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿಗೆ ಪೌಷ್ಟಿಕಾಂಶ ನೀಡಲು ಶಿಯೋಪುರ್ ಜಿಲ್ಲಾ ಆಸ್ಪತ್ರೆಯ ಎನ್ಆರ್ಸಿ ಕೇಂದ್ರಕ್ಕೆ ನಾಲ್ಕು ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದರೆ, ಆಕೆಯ ಆರೋಗ್ಯ ಸುಧಾರಿಸುವ ಬದಲು ಹದಗೆಟ್ಟಿತ್ತು. 

ಬಾಲಕಿ ಮೃತಪಟ್ಟ ಬಳಿಕ ಆಡಳಿತಾಧಿಕಾರಿಗಳಲ್ಲಿ ಗದ್ದಲ ಉಂಟಾಗಿತ್ತು. ಈ ವಿಷಯವನ್ನು ಮುಚ್ಚಿಡಲು ಪ್ರಯತ್ನ ಮಾಡಿದ್ದರು. ಆದರೆ, ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೆಳಗ್ಗೆ ಬಾಲಕಿಯ ಶವವನ್ನು ವಾಹನದ ಮೂಲಕ ಆಕೆಯ ಗ್ರಾಮಕ್ಕೆ ಕೊಂಡೊಯ್ದರು.

ಆದಿವಾಸಿ ಸಮುದಾಯದ ಒಂದೂವರೆ ವರ್ಷ ವಯಸ್ಸಿನ ಬಾಲಕಿ ದೇವಕಿ ಸರಾಸರಿ ತೂಕ 10 ಕೆ.ಜಿಗಿಂತ ಹೆಚ್ಚು ಇರಬೇಕಿತ್ತು. ಆದರೆ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಕಾರಣ ಆಕೆಯ ದೇಹದ ತೂಕ ಕೇವಲ ನಾಲ್ಕೂವರೆ ಕೆ.ಜಿ ಇತ್ತು. ಚಿಕಿತ್ಸೆ ಮತ್ತು ಪೋಷಣೆಗಾಗಿ ಆಗಸ್ಟ್ 8 ರಂದು ಜಿಲ್ಲಾ ಆಸ್ಪತ್ರೆಯ ಎನ್ಆರ್‌ಸಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ, ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.

ಈ ಬಗ್ಗೆ ಜಿಲ್ಲೆಯ ಸಿಎಂಎಚ್ಒ ಡಾ. ಬಿ ಎಲ್ ಯಾದವ್ ಪ್ರತಿಕ್ರಿಯಿಸಿದ್ದು, “ಬಾಲಕಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಳು. ಆ ಕಾರಣದಿಂದಲೇ ಸಾವನ್ನಪ್ಪಿದ್ದಾಳೆ” ಎಂದು ಒಪ್ಪಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸ್ಮಶಾನ ವಿವಾದ; ಗ್ರಾಮ ಪಂಚಾಯತಿ ಮುಂಭಾಗವೇ ಶವ ಹೂಳಲು ಮುಂದಾದ ಕುಟುಂಬ

20 ಸಾವಿರ ಮಕ್ಕಳಲ್ಲಿ ಅಪೌಷ್ಟಿಕತೆ: 

ಶಿಯೋಪುರ್ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ 20 ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಈ ಪೈಕಿ ಸುಮಾರು 4 ಸಾವಿರ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲಿ ತಿಳಿಸಲಾಗಿದೆ. ಆದರೆ, “ಪ್ರತಿ ತಿಂಗಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಅಸಂಖ್ಯಾತ ಮಕ್ಕಳು ಸಾಯುತ್ತಿದ್ದಾರೆ” ಎಂಬುದು ತಜ್ಞರು ದೂರಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್