
- ದೇವರ ಮೇಲೆ ನಂಬಿಕೆ ಇದ್ದರೆ ಅನ್ಯಧರ್ಮದವರು ದೇಗುಲ ಪ್ರವೇಶಿಸಬಹುದು
- ಪ್ರತಿಯೊಬ್ಬರ ಧಾರ್ಮಿಕ ಅಸ್ಮಿತೆ ಪರಿಶೀಲಿಸುವುದು ಅಧಿಕಾರಿಗಳಿಗೆ ಅಸಾಧ್ಯ
ಅನ್ಯ ಧರ್ಮದ ವ್ಯಕ್ತಿಗೆ ಹಿಂದೂ ದೇವರ ಮೇಲೆ ನಂಬಿಕೆಯಿದ್ದರೆ, ಅವರು ಆ ದೇವರ ದೇಗುಲ ಪ್ರವೇಶಿಸುವುದನ್ನು ಯಾರೂ ತಡೆಯುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ʼತಿರುವಟ್ಟಾರ್ನಲ್ಲಿರುವ ಅರುಲ್ಮಿಘು ಆದಿಕೇಶವ ಪೆರುಮಾಳ್ ತಿರುಕೋವಿಲ್ʼನ ಕುಂಭಾಭಿಷೇಕ ಉತ್ಸವದಲ್ಲಿ ಹಿಂದೂಯೇತರರು ಭಾಗವಹಿಸಲು ಅನುಮತಿ ನೀಡದಂತೆ ನಿರ್ದೇಶಿಸಬೇಕು ಎಂದು ಕೋರಿ ಸಿ ಸೋಮನ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಕ್ರೈಸ್ತ ಧರ್ಮಕ್ಕೆ ಸೇರಿದವರು ಎನ್ನಲಾದ ಸಚಿವರೊಬ್ಬರ ಹೆಸರನ್ನು ಕುಂಭಾಭಿಷೇಕ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಸಿ ಸೋಮನ್ ಈ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯನ್ನು ಪಿ ಎನ್ ಪ್ರಕಾಶ್ ಮತ್ತು ಆರ್ ಹೇಮಲತಾ ಅವರಿದ್ದ ವಿಭಾಗೀಯ ಪೀಠ ನಡೆಸಿತು.
"ನಾಗೋರ್ ದರ್ಗಾ ಮತ್ತು ವೇಲಂಕಣಿ ಚರ್ಚ್ಗಳಲ್ಲಿ ಗಾಯಕ ಡಾ. ಕೆ ಜೆ ಯೇಸುದಾಸ್ ಹಾಡಿರುವ ಹಿಂದೂ ಭಕ್ತಿಗೀತೆಗಳನ್ನು ಯಾವುದೇ ಆಕ್ಷೇಪಣೆಗಳಿಲ್ಲದೆ ಹಾಕುತ್ತಾರೆ" ಎಂದು ನ್ಯಾಯಾಲಯ ಇದೇ ವೇಳೆ ಹೇಳಿದೆ.
ಅಲ್ಲದೆ, "ಕುಂಭಾಭಿಷೇಕದಂತಹ ಸಾರ್ವಜನಿಕ ಉತ್ಸವ ನಡೆದಾಗ ದೇಗುಲ ಪ್ರವೇಶಿಸುವ ಪ್ರತಿಯೊಬ್ಬ ಭಕ್ತನ ಧಾರ್ಮಿಕ ಅಸ್ಮಿತೆಯನ್ನು ಪರಿಶೀಲಿಸುವುದು ಅಧಿಕಾರಿಗಳಿಗೆ ಅಸಾಧ್ಯವಾಗುತ್ತದೆ" ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಸುದ್ದಿ ಓದಿದ್ದೀರಾ?: ಮೇಘ ಸ್ಪೋಟ| ಅಮರನಾಥ ಯಾತ್ರಾರ್ಥಿಗಳಿಗಾಗಿ ಸಹಾಯವಾಣಿ ತೆರೆದ ರಾಜ್ಯ ಸರ್ಕಾರ
"ದೇವಾಲಯದ ಕುಂಭಾಭಿಷೇಕದಂತಹ ಸಾರ್ವಜನಿಕ ಉತ್ಸವ ನಡೆದಾಗ, ದೇವಾಲಯ ಪ್ರವೇಶ ಅನುಮತಿಸುವ ಉದ್ದೇಶದಿಂದ ಪ್ರತಿಯೊಬ್ಬ ಭಕ್ತನ ಧಾರ್ಮಿಕ ಗುರುತನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಅಸಾಧ್ಯ. ಮತ್ತೊಂದು ಧರ್ಮಕ್ಕೆ ಸೇರಿದ ವ್ಯಕ್ತಿ, ನಿರ್ದಿಷ್ಟ ಹಿಂದೂ ದೇವತೆಯಲ್ಲಿ ನಂಬಿಕೆ ಹೊಂದಿದ್ದರೆ, ಅದನ್ನು ತಡೆಯಲು ಸಾಧ್ಯವಿಲ್ಲ” ಎಂದು ತಿಳಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.