ಬಾಲಾಪರಾಧಿಯ ಶಿಕ್ಷೆ ರದ್ದುಗೊಳಿಸಿದ ಮದ್ರಾಸ್‌ ಹೈಕೋರ್ಟ್‌

  • ಅಪ್ರಾಪ್ತರ ನಡುವಿನ ದೈಹಿಕ ಸಂಬಂಧದ ಸಂಕೀರ್ಣ ಪ್ರಕರಣ
  • ವಿಶೇಷ ಕಾಳಜಿಯಿಂದ ಬಾಲಾಪರಾಧ ನಿಯಂತ್ರಣ ಸಾಧ್ಯ

ಬಾಲ ನ್ಯಾಯ ಮಂಡಳಿಯು ʻಪೋಕ್ಸೊ ಕಾಯ್ದೆʼಯಡಿ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಪರಾಧಿಗೆ ವಿಧಿಸಿದ್ದ ಮೂರು ವರ್ಷಗಳ ಸೆರೆವಾಸವನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ (ಏಪ್ರಿಲ್ 29) ರದ್ದುಗೊಳಿಸಿದೆ.

ನ್ಯಾಯ ಮಂಡಳಿಯ ಆದೇಶ ತಳ್ಳಿ ಹಾಕಿರುವ ನ್ಯಾಯಮೂರ್ತಿ ಎ ಡಿ ಜಗದೀಶ್‌ ಚಂದಿರ, ಬಾಲಕನನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ.

ಅಪ್ರಾಪ್ತರಿಬ್ಬರ ಪ್ರಣಯ ಪ್ರಕರಣಕ್ಕೆ ಸಂಬಂಧಿಸಿದಂತೆ, ತಿರುವಳ್ಳೂರು ಜಿಲ್ಲಾ ಬಾಲ ನ್ಯಾಯ ಮಂಡಳಿಯು 2021 ಮಾರ್ಚ್ 17ರಂದು ಅಪರಾಧಿ ಮೂರು ವರ್ಷ ಬಂಧನದಲ್ಲಿ ಇರಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಾಲಕನ ತಾಯಿ ಮದ್ರಾಸ್ ಹೈಕೋರ್ಟ್‌ನಲ್ಲಿ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ, ʻʻಪೋಕ್ಸೋ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಬಾಲಕಿ ಅಪ್ರಾಪ್ತಳು ಎಂಬ ಅಂಶವನ್ನು ನಿರ್ವಿವಾದವಾಗಿ ಸಾಬೀತುಪಡಿಸಲಾಗಿಲ್ಲʼʼ ಎಂದಿದ್ದಾರೆ.

ʻʻಸಾಮಾಜಿಕವಾಗಿ ಹಿಂದುಳಿದ ವರ್ಗದಿಂದ ಬಂದಿರುವ ಅಪ್ರಾಪ್ತ ವಯಸ್ಕ (ಹುಡುಗ) ಮತ್ತು ಸಂತ್ರಸ್ತ ಹುಡುಗಿಯ ಬೇಜವಾಬ್ದಾರಿಯುತ ವರ್ತನೆಯು, ಸಮಾಜದ ಲೋಪದೋಷಕ್ಕೆ ಹಿಡಿದ ಕನ್ನಡಿಯಾಗಿದೆ. ಬಾಲಾಪರಾಧದಂತಹ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ, ಪೋಷಕರು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳನ್ನು ಅಪರಾಧಿಗಳು ಎಂದು ದೂಷಿಸುವ ಬದಲು, ಅವರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕುʼʼ ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ?: ಸುದ್ದಿ ವಿವರ| ಮೇವಾನಿ ಪ್ರಕರಣದ ವಿಚಾರಣೆ ಸಂದರ್ಭ ಅಸ್ಸಾಂ ಪೊಲೀಸ್‌ ರಾಜ್ಯವಾಗುವ ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ

ʻʻಅಪರಾಧಗಳಲ್ಲಿ ತೊಡಗಿರುವ ಬಾಲಾಪರಾಧಿಗಳು ವಾಸ್ತವವಾಗಿ ಅಪರಾಧಿಗಳಲ್ಲ. ಕೆಲವು ಪ್ರಕರಣಗಳಲ್ಲಿ ಅವರು ಸಮಾಜದ ರೀತಿನೀತಿಗಳ ಬಲಿಪಶುಗಳಾಗಿದ್ದಾರೆ. ಮನೆ ಮತ್ತು ಶಾಲೆಯಲ್ಲಿ ವಿಶೇಷ ಕಾಳಜಿ ವಹಿಸಿದರೆ ಬಾಲಾಪರಾಧವನ್ನು ಆರಂಭಿಕ ಹಂತದಲ್ಲಿಯೇ ನಿಲ್ಲಿಸಬಹುದುʼʼ ಎಂದು ಸೂಚಿಸಿದ್ದಾರೆ.

15 ವರ್ಷದ ಬಾಲಕ ಮತ್ತು 17ರ ಹರೆಯದ ಬಾಲಕಿ ದೈಹಿಕ ಸಂಪರ್ಕ ಹೊಂದಿದ್ದರು. ಬಾಲಕಿಯು ಗರ್ಭಿಣಿಯಾಗಿದ್ದಳು. ಬಾಲಕಿಯ ತಾಯಿಯು ನೀಡಿದ್ದ ದೂರಿನ ಆಧಾರದ ಮೇಲೆ ಹುಡುಗನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿತ್ತು.

ʻʻಬಾಲಾಪರಾಧಿ ಕಾಯ್ದೆಯಡಿ ಪರಿಗಣಿಸಲಾದ ಪ್ರಕರಣದ ವಿಚಾರಣೆಯನ್ನು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಲಾಗಿಲ್ಲ. ಆದ್ದರಿಂದ ಅರ್ಜಿದಾರರು ʻಪೋಕ್ಸೊ ಕಾಯ್ದೆʼಯ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದಿರುವ ನ್ಯಾಯ ಮಂಡಳಿಯ ತೀರ್ಪನ್ನು ಒಪ್ಪಿಕೊಳ್ಳುವುದು ಹಾನಿಕಾರಕ. ಕಾನೂನಿನ ಸಂಘರ್ಷ ನಡೆಸುತ್ತಿರುವ ಅರ್ಜಿದಾರರಿಗೆ ನ್ಯಾಯವನ್ನು ನಿರಾಕರಿಸಲಾಗಿದೆ. ಸಂತ್ರಸ್ತ ಬಾಲಕಿಯ ವಯಸ್ಸಿನ ಕುರಿತ ಅನುಮಾನವನ್ನು ಮಂಡಳಿಯು ಕಾನೂನಿಗೆ ತಿಳಿದಿರುವ ರೀತಿಯಲ್ಲಿ ತನಿಖೆ ಮಾಡಲು ವಿಫಲವಾಗಿದೆ. ಘಟನೆ ನಡೆದ ದಿನಾಂಕದಂದು ಬಾಲಕಿಯು 18 ವರ್ಷಕ್ಕಿಂತ ಮೇಲ್ಪಟ್ಟವಳು ಎಂದು ಒಂದು ವೇಳೆ ಸಾಬೀತಾಗಿದ್ದರೆ, ಸನ್ನಿವೇಶವು ಅದಲು ಬದಲಾಗುತ್ತಿತ್ತುʼʼ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್