ಮಹಾರಾಷ್ಟ್ರ | ಪ್ರತ್ಯೇಕ ಕಾರು ಅಪಘಾತ; ಮಾಜಿ ಎಂಎಲ್‌ಸಿ ಸೇರಿ ಏಳು ಜನರ ಸಾವು

  • ಮರಾಠ ಸಮುದಾಯದ ಮೀಸಲಾತಿ ಹೋರಾಟಗಾರ ಮೇಟೆ ಸಾವು
  • ಮದುವೆಗೆ ತೆರಳುತ್ತಿದ್ದ ಒಂದೇ ಕುಟುಂದ ಐವರು ಅಪಘಾತದಲ್ಲಿ ಮೃತ 

ಮಹಾರಾಷ್ಟ್ರದಲ್ಲಿ ಭಾನುವಾರ (ಆಗಸ್ಟ್‌ 14) ಬೆಳ್ಳಂ ಬೆಳಿಗ್ಗೆ 5 ಗಂಟೆ ಸುಮಾರಿಗೆ ಎರಡು ಪ್ರತ್ಯೇಕ ಕಾರು ಅಪಘಾತ  ಸಂಭವಿಸಿ‌ದ್ದು, ದುರಂತದಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ವಿನಾಯಕ ಮೇಟಿ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಂಜರಸುಂಬ-ಪಟೋಡ ಹೆದ್ದಾರಿಯ ಬಳಿ ಭಾನುವಾರ ಕಾರು ಮತ್ತು ಟೆಂಪೊ ಮುಖಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪರಿಣಾಮ ಒಂದೇ ಕುಟುಂಬದ ಐದು ಜನ ಸೇರಿ ಒಟ್ಟು ಆರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಕೇಜ್ ತಹಸಿಲ್‌ನ ಜಿವಾಚಿವಾಡಿ ಗ್ರಾಮದ ಕುಟುಂಬವೊಂದು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಪುಣೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. 

“ಎರಡು ವಾಹನಗಳನ್ನು ಬೇರ್ಪಡಿಸಲು ಪೊಲೀಸರು ಕ್ರೇನ್ ಬಳಸಲಾಗಿದೆ ಮತ್ತು ಸಂತ್ರಸ್ತರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿ ಮನೆ ನಿರ್ಮಿಸಿದ ಯುವತಿಯರು

AV Eye Hospital ad

ಮಾಜಿ ಎಂಎಲ್‌ಸಿ ಸಾವು

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಮಹಾರಾಷ್ಟ್ರದ ಮಾಜಿ ವಿಧಾನ ಪರಿಷತ್‌ (ಎಂಎಲ್‌ಸಿ) ಸದಸ್ಯ ಮತ್ತು ಶಿವ ಸಂಗ್ರಾಮ್‌ ಪಕ್ಷದ ನಾಯಕ ವಿನಾಯಕ ಮೇಟೆ ಅವರ ಕಾರು ಕೂಡ ಪ್ರತ್ಯೇಕ ಅಪಘಾತಕ್ಕೀಡಾಗಿದೆ. ರಾಯಗಡ ಜಿಲ್ಲೆಯ ರಸಾಯನಿ ಪೊಲೀಸ್ ಠಾಣೆ ವ್ಯಾಪ್ತಿಯ ಮಡಪ್‌ ಸುರಂಗದ ಬಳಿ ಬೆಳಿಗ್ಗೆ 5:15ರ ವೇಳೆ ಅಪಘಾತ ಸಂಭವಿಸಿದ್ದು, ಮಾಜಿ ಎಂಎಲ್‌ಸಿ ವಿನಾಯಕ ಮೇಟೆ ಮೃತಪಟ್ಟಿದ್ದಾರೆ.

ವಿನಾಯಕ ಮೇಟೆ ಅವರು ಪುಣೆಯಿಂದ ಮುಂಬೈಗೆ ತೆರಳುತ್ತಿದ್ದರು. ಮಡಪ್ ಸುರಂಗದ ಕೆಳಗೆ ವಾಹನವೊಂದು ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ನವ ಮುಂಬೈನ ಕಾಮೋಥೆಯ ಖಾಸಗಿ ಆಸ್ಪತ್ರೆಗೆ ಸಚಿವರನ್ನು ಕೂಡಲೇ ಕರೆದೊಯ್ದಿದ್ದರೂ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ವಿನಾಯಕ್ ಮೇಟೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ವಿವರಿಸಿದ್ದಾರೆ. 

ಮಹಾರಾಷ್ಟ್ರ ಮುಖ್ಯಮಂತ್ರಿ ಭೇಟಿ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌ ಆಸ್ಪತ್ರೆಗೆ ಭೇಟಿ ನೀಡಿ ವಿನಾಯಕ್ ಮೇಟೆ ಅವರಿಗೆ ಅಂತಿಮ ನಮನ ಸಲ್ಲಿಸಿದರು.   

ವಿನಾಯಕ ಮೇಟೆ ಅವರು ಮರಾಠ ಸಮುದಾಯಕ್ಕೆ ಮೀಸಲಾತಿ ವಿಷಯದ ಕಟ್ಟಾ ಬೆಂಬಲಿಗರಾಗಿದ್ದರು. 2008 ರಲ್ಲಿ ಮೇಟೆ ಅವರು ಕೆಲವು ಕಾರ್ಯಕರ್ತರೊಂದಿಗೆ ಮರಾಠಿ ದೈನಿಕದ ಅಂದಿನ ಸಂಪಾದಕ ಕುಮಾರ್ ಕೇತ್ಕರ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅರಬ್ಬಿ ಸಮುದ್ರದಲ್ಲಿ ಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಧಾರ ಹಾಗೂ ಪತ್ರಿಕೆಯಲ್ಲಿ ಬಂದ ಲೇಖನದ ವಿರುದ್ಧ ಮೇಟಿ ಪ್ರತಿಭಟನೆ ನಡೆಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app