ಎನ್‌ಸಿಪಿ ಸಚಿವರಿಗೆ ಮತ ಚಲಾಯಿಸಲು ಅನುಮತಿ ನಿರಾಕರಿಸಿದ ಹೈಕೋರ್ಟ್

  • ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವರನ್ನು ಬಂಧನ
  • ಒಂದು ದಿನದ ಜಾಮೀನು ನೀಡುವಂತೆ ಕೋರ್ಟ್‌ಗೆ ಮನವಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನವಾಗಿರುವ ಎನ್‌ಸಿಪಿ ನಾಯಕರಾದ ಸಚಿವ ನವಾಬ್ ಮಲಿಕ್ ಮತ್ತು ಮಾಜಿ ಸಚಿವ ಅನಿಲ್ ದೇಶಮುಖ್‌ರವರಿಗೆ ಮಹಾರಾಷ್ಟ್ರದ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ನಿರಾಕರಿಸಿ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶವು ಚುನಾವಣೆಯಲ್ಲಿ ಮಹಾ ವಿಕಾಸ್‌ ಆಘಾಡಿ ಮೈತ್ರಿಕೂಟಕ್ಕೆ ಭಾರಿ ಹೊಡೆತ ನೀಡಿದೆ

ಸಂವಿಧಾನದ 227ನೇ ವಿಧಿಯಲ್ಲಿ ಸಚಿವರು ಸಲ್ಲಿಸಿದ ಅರ್ಜಿ ಪರಿಗಣಿಸಲು ಸಾಧ್ಯವಿಲ್ಲ, ಬದಲಿಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 439ರ ಅಡಿಯಲ್ಲಿ ಸಚಿವರು ತಮ್ಮ ಅರ್ಜಿಯನ್ನು ಜಾಮೀನು ಅರ್ಜಿಯಾಗಿ ಸಲ್ಲಿಸಿ ಸೂಕ್ತ ಪೀಠ ಸಂಪರ್ಕಿಸುವಂತೆ ಸಚಿವರಿಗೆ ನ್ಯಾಯಾಲಯದ ಸಲಹೆ ನೀಡಿದೆ. ಈ ಹಿಂದೆ ವಿಶೇಷ ನ್ಯಾಯಾಲಯವು ರಾಜ್ಯಸಭಾ ಚುನಾವಣೆಗೆ ಮತ ಚಲಾಯಿಸಲು ಸಚಿವರಿಬ್ಬರಿಗೆ ಅನುಮತಿ ನಿರಾಕರಿಸಿತ್ತು. 

ಸಚಿವ ನವಾಬ್ ಮಲಿಕ್ ಶುಕ್ರವಾರ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ಕೋರಿ ಸಂವಿಧಾನದ 227ನೇ ವಿಧಿಯಡಿಯಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಜಾಮೀನು ಅರ್ಜಿಯಾಗಿ ತಿದ್ದುಪಡಿ ಮಾಡಲು ಮುಂದಾಗಿದ್ದಾರೆ. 

ಈ ಸುದ್ದಿ ಓದಿದ್ದೀರಾ? ರಾಜ್ಯಸಭಾ ಚುನಾವಣೆ | 16 ಸ್ಥಾನಗಳಿಗೆ ಮತದಾನ - 4 ರಾಜ್ಯಗಳಲ್ಲಿ ತೀವ್ರ ಪೈಪೋಟಿ

ವಿಶೇಷ ನ್ಯಾಯಾಧೀಶರು ಮತ ಚಲಾಯಿಸಲು ನಿರಾಕರಿಸಿದ ಆದೇಶವನ್ನು ಸಂವಿಧಾನದ ವಿಧಿ 227 ಮತ್ತು ಕೋಡ್ ಆಫ್ ಕ್ರಿಮಿನಲ್ ಪ್ರೋಸಿಜರ್‌ನ ಸೆಕ್ಷನ್ 482ರ ಅಡಿಯಲ್ಲಿ ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ನವಾಬ್ ಸಲ್ಲಿಸಿದ್ದರು.

 “ಸಚಿವರು ಸಲ್ಲಿಸಿದ ಅರ್ಜಿಯ ಪ್ರಕಾರ ಬಾಂಡ್ ಮೇಲೆ ಜಾಮೀನು ಪಡೆದು ಬಿಡುಗಡೆ ಪಡೆಯುವುದಾಗಿದೆ. ಕ್ರಿಮಿನಲ್ ಪ್ರೋಸಿಜರ್ ಕೋಡ್‌ನ 439, 440 ಮತ್ತು 441ರ ನಿಬಂಧನೆಗಳ ಅಡಿ ಬಾಂಡ್ ಮೇಲೆ ಜಾಮೀನು ಪಡೆದು ಬಿಡುಗಡೆ ಹೊಂದಲು ಅವಕಾಶವಿದೆ. ಅರ್ಜಿದಾರರು  ಬಾಂಡ್ ಮೇಲೆ ಜಾಮೀನು ಪಡೆಯಲು 439ರ ಅಡಿಯಲ್ಲಿ ಸೂಕ್ತ ಅರ್ಜಿ ಸಲ್ಲಿಸಬೇಕೇ ಹೊರತು 227ರ ಅಡಿಯಲ್ಲಿ ಅಲ್ಲ. ಅರ್ಜಿಗೆ ತಿದ್ದುಪಡಿ ತರಲು ನ್ಯಾಯಾಲಯ ಅವಕಾಶ ನೀಡಿದೆ” ಎಂದು ಕೋರ್ಟ್ ತಿಳಿಸಿದೆ. 

ಮತ ಚಲಾಯಿಸುವ ಉದ್ದೇಶಕ್ಕೆ ಒಂದು ದಿನದ ಜಾಮೀನು ನೀಡುವಂತೆ ಹೈಕೋರ್ಟ್‌ಗೆ ಸಚಿವರಿಬ್ಬರು ಅರ್ಜಿ ಸಲ್ಲಿಸಿದ್ದರು. ಜಾಮೀನು ನೀಡದಿದ್ದರೂ ಪೊಲೀಸ್ ಬೆಂಗಾವಲಿನಲ್ಲಿಯೇ ಮತ ಚಲಾಯಿಸಿ ಜೈಲಿಗೆ ಹಿಂದಿರುಗುವ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ನವಾಬ್ ಮನವಿ ಮಾಡಿದರು.

ಶುಕ್ರವಾರ ಬೆಳಿಗ್ಗೆ ಮಹಾ ವಿಕಾಸ್ ಅಘಾಡಿಯ ಕೆಲವು ಶಾಸಕರು ಮತ ಚಲಾಯಿಸಿದ್ದು , ಉಳಿದವರು ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಅವರ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಸಚಿವರಿಬ್ಬರ ಮತ ಚಲಾಯಿಸುವ ಹಕ್ಕನ್ನು ಕೋರ್ಟ್ ಮಾನ್ಯತೆ ಮಾಡುತ್ತದೆಯೇ ಅಥವಾ ನಿರಾಕರಿಸುತ್ತದೆಯೇ ಎನ್ನುವುದರ ಮೇಲೆ ಮೈತ್ರಿ ಪಕ್ಷಗಳು ಹೊಸ ತಂತ್ರ ಯೋಜಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180