ಕುತುಬ್‌ ಮಿನಾರ್‌ | ಜಮೀನು ಒಡೆತನ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಕೋರ್ಟ್

quutub minar
  • ತನ್ನ ಮುಂದಿರುವ ದಾವೆ ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ್ದಲ್ಲ‌
  • ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಅ.19ಕ್ಕೆ

ಕುತುಬ್ ಮಿನಾರ್ ಇರುವ ಪ್ರದೇಶದ ಜಮೀನಿನ ಒಡೆತನಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.

ಗಂಗಾ ಮತ್ತು ಯಮುನಾ ನದಿಗಳ ನಡುವಿನ ಆಗ್ರಾದಿಂದ ಮೀರತ್, ಅಲಿಘರ್, ಬುಲಂದ್‌ಶಹರ್ ಗುರುಗ್ರಾಮದವರೆಗಿನ ಎಲ್ಲ ಭೂಮಿಯ ಮಾಲೀಕತ್ವ ತಮ್ಮದೆಂದು ವಾದಿಸಿದ್ದ ರಾಜವಂಶಸ್ಥ ಕುಂವರ್ ಮಹೇಂದ್ರ ಧ್ವಜ್ ಪ್ರಸಾದ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದಿನೇಶ್ ಕುಮಾರ್ ವಜಾಗೊಳಿಸಿದರು.

"ನಾನು ಈ ಆಸ್ತಿಯ ಕಾನೂನುಬದ್ಧ ಮಾಲೀಕನಾಗಿದ್ದೇನೆ. 1947 ರಲ್ಲಿ ನನಗೆ 3 ವರ್ಷ. 1947ರಲ್ಲಿ ಸರ್ಕಾರ ರಚನೆಯಾದ ನಂತರ ನನ್ನ ಹಕ್ಕನ್ನು ಪರಿಗಣಿಸದೆ ಸರ್ಕಾರ ಎಲ್ಲ ಪ್ರದೇಶವನ್ನು ಅತಿಕ್ರಮಿಸಿತು" ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದರು.

ಆದರೆ, "ತನ್ನ ಮುಂದಿರುವ ದಾವೆ ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ್ದಲ್ಲ" ಎಂದಿರುವ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.

ಈ ಸುದ್ದಿ ಓದಿದ್ದೀರಾ?: ಬಿಲ್ಕಿಸ್‌ ಬಾನು ಪ್ರಕರಣ | ಅಪರಾಧಿಯಿಂದ ಸಾಕ್ಷಿಗೆ ಜೀವ ಬೆದರಿಕೆ: ಸಿಜೆಐಗೆ ಪತ್ರ ಬರೆದ ಸಾಕ್ಷಿದಾರ ಘಾಂಚಿ

ಇದೇ ವೇಳೆ ಕುತುಬ್‌ ಮಿನಾರ್‌ನಲ್ಲಿ ಪೂಜೆ ಮಾಡಲು ಮತ್ತೆ ಅವಕಾಶ ನೀಡುವಂತೆ ಕೋರಿದ್ದ ದಾವೆಯ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 19ಕ್ಕೆ ಮುಂದೂಡಿದೆ.

ಕುತುಬ್ ಸಂಕೀರ್ಣದೊಳಗೆ ದೇವತೆಗಳನ್ನು ಮತ್ತೆ ಪ್ರತಿಷ್ಠಾಪಿಸಬೇಕು ಮತ್ತು ದೇವತೆಗಳ ಪೂಜೆ ಮತ್ತು ದರ್ಶನ ಮಾಡುವ ಹಕ್ಕಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿ ವಿಷ್ಣು ಮತ್ತು ರಿಷಬ್ ದೇವ್ ದೈವಗಳ ಪರವಾಗಿ ವಕೀಲರಾದ ಹರಿಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ಅವರು ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯಲ್ಲಿ ಮಧ್ಯಪ್ರವೇಶ ಕೋರಿ ಸಿಂಗ್‌ ಅರ್ಜಿ ಸಲ್ಲಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್