
- ಕೇಳಿದ ಅಡುಗೆ ಮಾಡಲಿಲ್ಲವೆಂದು 65ರ ಹರೆಯದ ತಾಯಿಯನ್ನೇ ಕೊಂದ ಮಗ
- ಊಟ ಬಡಿಸಲು ವಿಳಂಬ ಮಾಡಿದ ಪತ್ನಿಯನ್ನು ತವಾದಿಂದ ಹೊಡೆದು ಕೊಂದ ಪತಿ
ಬಿಸಿ ಮಾಡಲು ಇಟ್ಟಿದ್ದ ಸಾಂಬರ್ ಸೀದುಹೋದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗೆ ಜಗಳವಾಡಿ, ಕೊಲೆ ಮಾಡಿರುವ ಘಟನೆ ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ನಡೆದಿದೆ.
ಮದ್ಯದ ಅಮಲಿನಲ್ಲಿ 36 ವರ್ಷದ ವ್ಯಕ್ತಿಯೊಬ್ಬ, ಆಮೆಯ ಸಾಂಬರ್ ಸೀದಿಸಿದ್ದಕ್ಕಾಗಿ ಹೆಂಡತಿಯೊಂದಿಗೆ ಜಗಳಕ್ಕಿಳಿದಿದ್ದಾನೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿ ಪತ್ನಿಯನ್ನು ಥಳಿಸಿದ್ದಾನೆ. ಪತಿಯ ಹೊಡೆತದಿಂದ ಕೆಳಗೆ ಬಿದ್ದ ಮಹಿಳೆ ಮೃತಪಟ್ಟಿದ್ದಾಳೆ. ಆಕೆಯನ್ನು ಮನೆಯ ಹಿತ್ತಲಿನಲ್ಲಿ ಹೂತುಹಾಕಿ ಆಕೆ ಕಾಣೆಯಾಗಿದ್ದಾಳೆ ಎಂದು ನಟಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈ ದಂಪತಿಯು ಒಡಿಶಾದ ಸಂಬಲ್ಪುರ ಜಿಲ್ಲೆಯ ರೌತ್ಪಾಡಾ ಗ್ರಾಮದಲ್ಲಿ ನೆಲೆಸಿದ್ದರು. ಅಪರಾಧಿ ರಂಜನ್ ಬಡಿಂಗ್, ಊಟಕ್ಕೆ ಆಮೆ ಸಾಂಬರ್ ಮಾಡಲು ಪತ್ನಿಗೆ ಹೇಳಿದ್ದಾನೆ. ನಂತರ ಮನೆಯಿಂದ ಹೊರಗೆ ಹೋಗಿ ಕುಡಿದ ಅಮಲಿನಲ್ಲಿ ವಾಪಸಾಗಿದ್ದ ವೇಳೆ ಸಾಂಬರ್ ಸ್ವಲ್ಪ ಸೀದಿರುವುದು ಕಂಡು ಬಂದಿದೆ. ಈ ವಿಷಯಕ್ಕೆ ಆಕೆಯೊಂದಿಗೆ ಜಗಳವಾಡಿದ್ದಾನೆ. ಪತ್ನಿಯನ್ನು ಕ್ರೂರವಾಗಿ ಥಳಿಸಿದ್ದಾನೆ. ಆಕೆ ಪ್ರಜ್ಞೆ ಕಳೆದುಕೊಂಡು ನೆಲದ ಮೇಲೆ ಬಿದ್ದಿದಾಳೆ.
ಈ ಸುದ್ದಿ ಓದಿದ್ದೀರಾ?: ʻಲೊರಿಯಲ್ʼ ಕೂದಲ ಉತ್ಪನ್ನಗಳ ಬಳಕೆಯಿಂದ ಗರ್ಭಕೋಶ ಕ್ಯಾನ್ಸರ್: ಕಂಪನಿ ವಿರುದ್ಧ ಮೊಕದ್ದಮೆ ಹೂಡಿದ ಅಮೆರಿಕ ಮಹಿಳೆ
ಜಗಳವಾಡಿ ಮನೆ ಬಿಟ್ಟು ಹೊರಬಂದಿದ್ದ ಅಪರಾಧಿಯು ಕೆಲವು ಗಂಟೆಗಳ ನಂತರ ಮನೆಗೆ ಹಿಂದಿರುಗಿದ್ದಾನೆ. ಆಗ ಆತನಿಗೆ ಪತ್ನಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಆಕೆಯ ಶವವನ್ನು ಹಿತ್ತಲಿನಲ್ಲಿ ಹೂತಿಟ್ಟು, ಪತ್ನಿ ತನ್ನ ಪೋಷಕರ ಮನೆಗೆ ಹೋಗಿರುವುದಾಗಿ ನೆರೆಹೊರೆಯವರಿಗೆ ತಿಳಿಸಿದ್ದಾನೆ. ಘಟನೆ ಒಂದು ತಿಂಗಳ ಹಿಂದೆ ನಡೆದಿದೆ. ಎರಡು ದಿನಗಳ ಹಿಂದೆ ಪೊಲೀಸರು ಆಕೆಯ ಶವವನ್ನು ಮನೆಯ ಹಿತ್ತಲಿನಿಂದ ಹೊರತೆಗೆದ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ ಪೊಲೀಸರು ಶೀಘ್ರದಲ್ಲೇ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮಹಿಳೆಯರ ಮೇಲಿನ ಇಂತಹ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಪತ್ನಿ ಅಡುಗೆ ಚೆನ್ನಾಗಿ ಮಾಡಲಿಲ್ಲವೆಂದು, ಅಡುಗೆ ಬಡಿಸಲು ತಡ ಮಾಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ, ಅವರನ್ನು ಹೊಡೆದು ಕೊಂದಿರುವ, ಕೈ ಕಾಲು ಕತ್ತರಿಸಿರುವ ಘಟನೆಗಳು ದೇಶದ ನಾನಾ ಭಾಗಗಳಲ್ಲಿ ವರದಿಯಾಗಿವೆ. ಇಂತಹ ಸುದ್ದಿಗಳು ಮಹಿಳೆಯರು ಎದುರಿಸಬೇಕಾದ ಕೌಟುಂಬಿಕ ದೌರ್ಜನ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿವೆ.
ಊಟದ ಬಗ್ಗೆ ಗಲಾಟೆ; ತಾಯಿಯನ್ನೇ ಕೊಂದ ಮಗ
ದೇಶದಲ್ಲಿ ಇಂತಹ ಪ್ರಕರಣ ನಡೆಯುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಪಂಜಾಬ್ನ ಲೂಧಿಯಾನದಲ್ಲಿ ಸುರೀಂದರ್ ಸಿಂಗ್ ಎಂದು ಗುರುತಿಸಲಾದ 26 ವರ್ಷದ ವ್ಯಕ್ತಿ, ಮಧ್ಯಾಹ್ನದ ಊಟದ ಸಮಯ ತಾಯಿಯೊಂದಿಗೆ ಜಗಳವಾಡಿ, ಆಕೆಯನ್ನು ತಳ್ಳಿ ಸಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯು ತನ್ನ 65 ವರ್ಷದ ತಾಯಿಯನ್ನು ಅವರ ಮನೆಯ ಮೊದಲ ಮಹಡಿಯಿಂದ ತಳ್ಳಿದನು. ನಂತರ ಆಕೆಯ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ಪತ್ನಿಯನ್ನು ಕಾಪಾಡಲು ಮಧ್ಯಪ್ರವೇಶಿಸಲು ಪ್ರಯತ್ನಿಸಿದ ತಂದೆಯ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಂಗೋಪಿಯಾಗಿದ್ದ ಸುರೀಂದರ್, ಮಧ್ಯಾಹ್ನದ ಊಟಕ್ಕೆ ಹೊಸದಾಗಿ ಅಡುಗೆ ಮಾಡಲು ತಾಯಿಗೆ ಆದೇಶಿಸಿದ್ದಾನೆ. ಆದರೆ, ಅವರು ಅಡುಗೆ ಮಾಡದೇ ಇದ್ದಾಗ ಅವರಿಗೆ ಹೊಡೆಯಲು ಆರಂಭಿಸಿದ್ದಾನೆ. ಮಗನಿಂದ ತಪ್ಪಿಸಿಕೊಳ್ಳಲು, ತಾಯಿ ಮೊದಲ ಮಹಡಿಗೆ ಧಾವಿಸಿದಾಗ, ಆತ ಅವರ ಹಿಂದೆ ಓಡಿ ಅವರನ್ನು ಮೊದಲ ಮಹಡಿಯಿಂದ ತಳ್ಳಿದ್ದಾನೆ. ತೀವ್ರವಾಗಿ ಗಾಯಗೊಂಡ ಹಿರಿಯ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಅಡುಗೆ ಮಾಡಲು ನಿರಾಕರಿಸಿದ ಪತ್ನಿಯನ್ನು ಕೊಂದ ಪತಿ
ರಾತ್ರಿ ಊಟಕ್ಕೆ ಅಡುಗೆ ಮಾಡಲು ಮಹಿಳೆ ನಿರಾಕರಿಸಿದ ಕಾರಣ, 72 ವರ್ಷದ ವ್ಯಕ್ತಿಯೊಬ್ಬ 53 ವರ್ಷದ ತನ್ನ ಪತ್ನಿಯನ್ನು ಕೊಂದಿರುವ ಘಟನೆ ಕಳೆದ ತಿಂಗಳು ವರದಿಯಾಗಿದೆ. ರಾತ್ರಿ ಅಡುಗೆ ವಿಷಯಕ್ಕೆ ಪತ್ನಿಯೊಂದಿಗೆ ವಾಗ್ವಾದಕ್ಕೆ ಇಳಿದ ಆರೋಪಿಯು, ಆಕೆಗೆ ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಕೊಂದಿದ್ದಾನೆ. ಘಟನೆ ನಂತರ ಆತನನ್ನು ಬಂಧಿಸಲಾಗಿದ್ದು, ಸದ್ಯ ಅವನು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಊಟದ ಬಗ್ಗೆ ವಾಗ್ವಾದ; ಮಾನಸಿಕ ಅಸ್ವಸ್ಥ ಪತ್ನಿಯನ್ನು ಕೊಂದ ವ್ಯಕ್ತಿ
ಆಹಾರ ಬಡಿಸುವ ವಿಷಯಕ್ಕೆ ಸಂಬಂಧಿಸಿದಂತೆ 59 ವರ್ಷದ ವ್ಯಕ್ತಿಯು ಪತ್ನಿಯೊಂದಿಗೆ ವಾದ ನಡೆಸಿದ್ದು, ಆಕೆಯನ್ನು ಕೊಂದಿದ್ದಾನೆ. ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುವ ಮೂಲಕ ಆತ ತನ್ನ ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಆದರೆ, ಈ ಕುರಿತು ತನಿಖೆ ನಡೆಸಿದ ಪೊಲೀಸರು ಮಹಿಳೆಯನ್ನು ಪತಿಯೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ?: ತಮಿಳಿನ ಸ್ಟಾರ್ ನಟ ಜಯಂ ರವಿಗೆ ಕೋವಿಡ್ ಸೋಂಕು ದೃಢ; ಪೊನ್ನಿಯಿನ್ ಸೆಲ್ವನ್ ಬಳಗಕ್ಕೆ ಆತಂಕ
ಊಟ ಬಡಿಸಲು ವಿಳಂಬ ಮಾಡಿದ ಪತ್ನಿಯನ್ನೇ ಕೊಂದ ಪತಿ
ಕೆಲಸ ಮುಗಿಸಿ, ರಾತ್ರಿ ಮನೆಗೆ ಹಿಂದಿರುಗಿದ ನಂತರ 36 ವರ್ಷದ ವ್ಯಕ್ತಿಯು, ಊಟ ಬಡಿಸಲು ಪತ್ನಿ ವಿಳಂಬ ಮಾಡಿದಳು ಎಂಬ ಕಾರಣಕ್ಕೆ ಬಿಸಿ ತವಾದಿಂದ ಆಕೆಯ ತಲೆಗೆ ಹೊಡೆದು ಕೊಂದಿದ್ದ ಘಟನೆ ದೆಹಲಿ ನೋಯ್ಡಾದಲ್ಲಿ ಕಳೆದ ತಿಂಗಳು ನಡೆದಿತ್ತು. ತಮ್ಮ 5 ವರ್ಷದ ಮಗನೊಂದಿಗೆ ನೋಯ್ಡಾದ ಸೆಕ್ಟರ್ 66ರಲ್ಲಿ ದಂಪತಿ ವಾಸಿಸುತ್ತಿದ್ದರು.
ಮಹಿಳೆಯರನ್ನು ಕೀಳಾಗಿ ನೋಡುವ ಮನೋಭಾವ ಕೊನೆಗೊಳ್ಳಲಿ
ಮಹಿಳೆ ಎಂದರೆ ಭೋಗದ ವಸ್ತು, ಚಾಕರಿ ಮಾಡುವ ವಸ್ತುವಿನಂತೆ ನೋಡುವ ಮನಸ್ಥಿತಿ ದೇಶದೆಲ್ಲೆಡೆ ಹೆಚ್ಚಾಗುತ್ತಿದೆ. ಅಡುಗೆ ಕಾರಣಕ್ಕೆ, ಅಥವಾ ಯಾವುದೋ ಕ್ಷುಲ್ಲಕ ಕಾರಣಕ್ಕೆ ಪುರುಷರು, ಮಹಿಳೆಯರನ್ನು ಮನಸೋ ಇಚ್ಛೆ ಥಳಿಸಿ, ಕೊಲ್ಲುವ, ಅವರನ್ನು ಕೀಳಾಗಿ ಕಾಣುವ ಆಲೋಚನೆ ಹೆಚ್ಚಾಗಿದೆ. ಇಂತಹ ಆಲೋಚನೆಗಳು ಸಮರ್ಥನೀಯ ಎಂದು ಹೇಳುವ ಪ್ರತಿನಿಧಿಗಳು ಸಮಾಜದಲ್ಲಿದ್ದು, ದೌರ್ಜನ್ಯಗಳನ್ನು ತಡೆಗಟ್ಟಬೇಕಾದವರೇ, ಇಂತಹ ಕಿರುಕುಳಗಳನ್ನು ನೀಡುತ್ತಿರುವುದು ಬೇಸರದ ಸಂಗತಿ. ಈ ಬಗ್ಗೆ ಮಹಿಳಾ ಆಯೋಗ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು ಎಂಬುದು ನೆಟ್ಟಿಗರ ಒತ್ತಾಯ.