ಬೆಂಗಳೂರು | ದೈಹಿಕ ಸಂಪರ್ಕಕ್ಕೆ ಸಹಕರಿಸದ ಆರೋಪ; ಪತ್ನಿ ಹತ್ಯೆಗೈದು ಶಿರಾಡಿ ಘಾಟ್‌ಗೆ ಎಸೆದ ಪತಿ

murder
  • ಆಗಸ್ಟ್‌ 5ರಂದು ಪತ್ನಿ ಕಾಣೆಯಾಗಿದ್ದಾಳೆಂದು ದೂರು
  • ವಿಚಾರಣೆ ವೇಳೆ ಅಸ್ಪಷ್ಟವಾಗಿ ಉತ್ತರ ನೀಡಿದ್ದ ಪತಿ

ಲೈಂಗಿಕ ಕ್ರಿಯೆಗೆ ಸಹಕರಿಸದ ಹಿನ್ನೆಲೆ ಪತಿ ತನ್ನ ಪತ್ನಿಯನ್ನು ಹತ್ಯೆಗೈದಿರುವ ಆರೋಪದಡಿ ಬೆಂಗಳೂರಿನ ಮಾರುತಿ ಲೇಔಟ್‌ ನಿವಾಸಿ ಪೃಥ್ವಿರಾಜ್‌ (28) ಎಂಬಾತನನ್ನು ಮಡಿವಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಸೀತಾಮರ್ಹಿ ಮೂಲದ ಪೃಥ್ವಿರಾಜ್‌ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಎಲೆಕ್ಟ್ರಾನಿಕ್ಸ್ ವಸ್ತುಗಳ ವ್ಯಾಪಾರ ಮಾಡುತ್ತಿದ್ದರು. ಆಗಸ್ಟ್‌ 5ರಂದು ತನ್ನ ಪತ್ನಿ ಜ್ಯೋತಿ ಕುಮಾರಿ ಕಾಣೆಯಾಗಿದ್ದಾಳೆ ಎಂದು ಪೃಥ್ವಿರಾಜ್‌ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

"ತಾವು ಬಿಹಾರದ ಮೂಲದವರಾಗಿದ್ದು, ಸೀತಾಮರ್ಹಿ ಗ್ರಾಮದ ಪಕ್ಕದ ಗ್ರಾಮದವಳು ನನ್ನ ಪತ್ನಿ. ಒಂಭತ್ತು ತಿಂಗಳ ಹಿಂದೆ ಮದುವೆಯಾಗಿದ್ದ ನಾವು, ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಮಾರುತಿ ಲೇಔಟ್‌ನಲ್ಲಿ ನೆಲೆಸಿದ್ದೆವು. ಕುಮಾರಿ ಈ ಹಿಂದೆ ಎರಡು ಬಾರಿ ಮನೆ ಬಿಟ್ಟು ಹೋಗಿ, ಸಂಜೆ ವೇಳೆಗೆ ವಾಪಸ್‌ ಬಂದಿದ್ದಳು. ಕಳೆದ ಕೆಲ ದಿನಗಳಿಂದ ದೆಹಲಿಗೆ ಹೋಗೋಣ ಎಂದು ಒತ್ತಾಯಿಸುತ್ತಿದ್ದಳು. ಆದರೆ, ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿರುವುದರಿಂದ ನಾನು ದೆಹಲಿಗೆ ತೆರಳಲು ನಿರಾಕರಿಸಿದ್ದೆ. ಹೀಗಾಗಿ ಆಕೆ ಮನೆ ಬಿಟ್ಟು ಹೋಗಿರುವ ಸಾಧ್ಯತೆಯಿದೆ. ಆಕೆಯ ಫೋನ್‌ ಸ್ವಿಚ್‌ ಆಫ್‌ ಆಗಿದ್ದು, ಎಲ್ಲ ಕಡೆ ಹುಡುಕಿದ್ದೇನೆ. ಆದರೂ, ಪತ್ತೆಯಾಗಿಲ್ಲ" ಎಂದು ಆರೋಪಿ ಪೃಥ್ವಿರಾಜ್‌ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದ.  

ಜ್ಯೋತಿ ಅವರ ಪತ್ತೆಗೆ ತನಿಖೆ ಚುರುಕುಗೊಳಿಸಿದ ತನಿಖಾ ತಂಡಕ್ಕೆ ಪೃಥ್ವಿರಾಜ್‌ ಆಕೆಯ ಜತೆ ಸದಾ ಜಗಳ ಮಾಡುತ್ತಿದ್ದ ಎಂಬ ಸಂಗತಿ ತಿಳಿಯಿತು. ಈ ಕುರಿತು ಪೃಥ್ವಿಯನ್ನು ವಿಚಾರಣೆ ನಡೆಸಿದಾಗ ಆತನೂ ಅಸ್ಪಷ್ಟ ಉತ್ತರ ನೀಡುತ್ತಿದ್ದ. ಹೀಗಾಗಿ, ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. 

ತನಿಖೆ ವೇಳೆ ಆತ, "ನನ್ನ ಪತ್ನಿ ಪದವೀಧರೆ. ಮದುವೆಗೂ ಮುಂಚೆ ಆಕೆ ತನ್ನ ವಯಸ್ಸು 28 ಎಂದು ಹೇಳಿದ್ದಳು. ಆದರೆ, ಆಕೆಯ ನಿಜವಾದ ವಯಸ್ಸು 38 ಆಗಿತ್ತು. ನಿಜಾಂಶ ತಿಳಿದ ಮೇಲೂ ನಾನು ಮಾತಾಡದೆ ಸುಮ್ಮನಿದ್ದೆ. ಆದರೆ, ಆಕೆ ನನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹರಿಸಲಿಲ್ಲ. ಸದಾ ಫೋನಿನಲ್ಲಿ ಬ್ಯುಸಿಯಾಗಿರುತ್ತಿದ್ದಳು. ಅವಳು ಬೇರೊಬ್ಬನನ್ನು ಇಷ್ಟ ಪಡುತ್ತಿದ್ದಾಳೆ ಎಂದೆನಿಸಿತು. ಮಾತ್ರವಲ್ಲದೆ, ಆಕೆ ನನ್ನ ಕುಟುಂಬದವರನ್ನೂ ದೂಷಿಸುತ್ತಿದ್ದಳು" ಎಂದು ಬಾಯ್ಬಿಟ್ಟಿದ್ದಾನೆ. 

ಈ ಸುದ್ದಿ ಓದಿದ್ದೀರಾ?: ಬಿಲ್ಕೀಸ್ ಬಾನು ಪ್ರಕರಣ| ಅತ್ಯಾಚಾರಿಗಳ ಬಿಡುಗಡೆಯಿಂದ ಭಯ ಹೆಚ್ಚಾಗಿದೆ: ಬಾನು ಪತಿ ರಸೂಲ್ ಪಟೇಲ್

ಕುಮಾರಿ ನಡವಳಿಕೆಗಳಿಂದ ಬೇಸತ್ತು, ತನ್ನ ಬಿಹಾರ ಮೂಲದ ಗೆಳೆಯ ಸಮೀರ್‌ ಸಹಾಯ ಪಡೆದು ಆಕೆಯನ್ನು ಹತ್ಯೆಗೈಯ್ಯಲು ಸಂಚು ರೂಪಿಸಿದ್ದನಂತೆ ಪೃಥ್ವಿ. ಆಗಸ್ಟ್‌ 1ರಂದು ಉಡುಪಿ ಜಿಲ್ಲೆಯ ಮಲ್ಪೆಗೆ ಪ್ರವಾಸಕ್ಕೆ ಕರೆದೊಯ್ದು, ಶಿರಾಡಿ ಘಾಟ್‌ನಲ್ಲಿ ಕಾರು ನಿಲ್ಲಿಸಿ ಕುಮಾರಿಯನ್ನು ದುಪ್ಪಟದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಶಿರಾಡಿ ಘಾಟ್‌ನಲ್ಲಿಯೇ ಎಸೆದು ಬೆಂಗಳೂರಿಗೆ ಮರಳಿದ್ದು, ಏನೂ ಗೊತ್ತಿಲ್ಲದವನಂತೆ ಪೊಲೀಸ್‌ ಠಾಣೆಗೆ ತೆರಳಿ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ.

ಪೊಲೀಸರು ಮೃತದೇಹ ಎಸೆದಿದ್ದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಶವವನ್ನು ಪತ್ತೆಹಚ್ಚಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್