ಸುದ್ದಿ ವಿವರ | ಮಾಹಿತಿ ಸಂಗ್ರಹಿಸಲು ವಿಪಿಎನ್‌ ಕಂಪನಿಗಳಿಗೆ ತಾಕೀತು, ಜೂನ್‌ನಿಂದ ಜಾರಿ

  • ಗ್ರಾಹಕರ ಮಾಹಿತಿಯನ್ನು 5 ವರ್ಷ ಸಂಗ್ರಹಿಸಿಡಬೇಕಾದ ಕಂಪನಿಗಳು
  • ನಿಯಮ ಪಾಲಿಸದ ವಿಪಿಎನ್‌ ಕಂಪನಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ     

ಕೇಂದ್ರ ಸರ್ಕಾರವು ಮತ್ತೆ ಅಂತರ್ಜಾಲದ ಮೇಲೆ ಕಡಿವಾಣ ಹಾಕಲು ಮತ್ತೊಂದು ಕ್ರಮ ಕೈಗೊಂಡಿದ್ದು, ಎಲ್ಲಾ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ ಸರ್ವಿಸ್‌ಗಳಿಗೆ (ವಿಪಿಎನ್) ತಮ್ಮ ಬಳಕೆದಾರರ ಮಾಹಿತಿಯನ್ನು ಐದು ವರ್ಷಗಳವರೆಗೆ ಸಂಗ್ರಹಿಸುವ ಹಾಗೂ ಹಿಡಿದಿಡುವುದನ್ನು ಕಡ್ಡಾಯಗೊಳಿಸಿ ಕಾನೂನು ಜಾರಿಮಾಡಿದೆ.

ವಿದ್ಮುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಂಗಸಂಸ್ಥೆಯಾಗಿರುವ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್ ಟಿ-ಎನ್) ಪತ್ರಿಕಾ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದೆ.

ಬಳಕೆದಾರರ ಮಾಹಿತಿ ಸುರಕ್ಷತೆ ಮತ್ತು ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್ 70(ಬಿ) ಉಪ ವಿಭಾಗ (6)ರ ನಿಬಂಧನೆಗಳ ಅಡಿಯಲ್ಲಿ ಈ ನಿರ್ದೇಶನಗಳನ್ನು ನೀಡಲಾಗಿದೆ.

ಜನಸಾಮಾನ್ಯರ ಚಟುವಟಿಕೆ ಮೇಲೆ ಸರ್ಕಾರದ ಕಾವಲು

ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆಯು ದೇಶಿ ಮತ್ತು ವಿದೇಶಿ ಪ್ರವಾಸಿಗರ ಚಲನವಲನ ತಿಳಿಯಲು ಹೊಸ ನಿಯಮ ಜಾರಿಗೊಳಿಸಿದ್ದು, ಪ್ರವಾಸಿಗರ ಎಲ್ಲಾ ಮಾಹಿತಿ ತಿಳಿಯಲು ಸಮೀಕ್ಷಾ ತಂಡಗಳನ್ನು ದೇಶದ ಎಲ್ಲಾ ಜಿಲ್ಲೆಗಳಲ್ಲಿ ನೇಮಿಸಲು ನಿರ್ಧರಿಸಿತ್ತು. 

ಇದೀಗ ಬಳಕೆದಾರರು ತಮ್ಮ ಖಾತೆ ಅಳಿಸಿದರೂ ಅಥವಾ ಚಂದದಾರಿಕೆ ತೆಗೆದು ಹಾಕಿದರೂ ಸಹ ಕಂಪನಿ ಅಂತಹ ವ್ಯಕ್ತಿಗಳ ಮಾಹಿತಿ ಹಿಡಿದಿಟ್ಟುಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಇದರಲ್ಲೂ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿರುವುದು ಖಚಿತ.

ಇದನ್ನು ಓದಿದ್ದೀರಾ? ಪ್ರವಾಸಿಗರ ಮೇಲೆ ಸರ್ಕಾರದ ನಿಗಾ; ಪ್ರವಾಸೋದ್ಯಮ ಇಲಾಖೆಯಿಂದ ಹೊಸ ನಿಯಮ

ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡವು, ವಿಪಿಎನ್‌ಗೆ ವಿಧಿಸಿದ ನಿರ್ದೇಶನಗಳನ್ನು ಕ್ರಿಪ್ಟೋ ಎಕ್ಸ್‌ಚೇಂಜ್‌ ಹಾಗೂ ಇತರ ಪಾವತಿ ಸಂಬಂಧಿತ ಸೇವೆಗಳಿಗೂ ಅನ್ವಯಿಸಿ, ಮಾಹಿತಿ ಸಂಗ್ರಹಿಸಿಡಲು ಹೇಳಿದೆ.

ವಿಪಿನ್ ಸೇವೆಗಳು ಈಗ ಹೇಗಿವೆ?

ನಾರ್ಡ್ ವಿಪಿನ್, ಸರ್ಫ್‌ಶಾರ್ಕ್‌ ವಿಪಿಎನ್, ಎಕ್ಸ್‌ಪ್ರೆಸ್‌ ವಿಪಿನ್‌ನಂತಹ ಜನಪ್ರಿಯ ವಿಪಿನ್ ಕಂಪನಿಗಳು ರ್‍ಯಾಮ್‌ ಓನ್ಲಿ ಸರ್ವರ್‌ಗಳನ್ನು ಅಳವಡಿಸಿಕೊಂಡಿದ್ದು, ಗ್ರಾಹಕ ಮಾಹಿತಿಗಳನ್ನು ನಿಯಮಿತ ಮತ್ತು ಸ್ವಯಂಚಾಲಿತವಾಗಿ ಅಳಿಸಿ ಹಾಕುತ್ತವೆ. ಅಧಿಕೃತ ನಿಯಮ ಜಾರಿಯಾದ ನಂತರ ಈ ಕಂಪನಿಗಳು ಹೊಸ ಸರ್ವರ್‌ ಅಳವಡಿಸಿಕೊಳ್ಳಬೇಕಾಗುತ್ತದೆ. 

ವಿಪಿಎನ್‌ಗಳನ್ನು ಪೂರ್ಣವಾಗಿ ಕಾನೂನು ಬಾಹಿರಗೊಳಿಸುವ ಬದಲು ಜನರಿಗೆ ಅದರ ಬಗ್ಗೆ ಆತಂಕ ಸೃಷ್ಟಿ (ವೈಯಕ್ತಿಕ ಮಾಹಿತಿ ಸೋರಿಕೆಯಾಗುದೆಂಬ) ಮಾಡುವುದು ಸರ್ಕಾರದ ಗುರಿಯಾಗಿದೆ. ಇದೇ ರೀತಿಯ ತಂತ್ರವನ್ನು ಕ್ರಿಪ್ಟೋ ಕರೆನ್ಸಿಯನ್ನು ಕಾನೂನಾತ್ಮಕವಾಗಿ ಮಾಡುವ ವಿಷಯದಲ್ಲಿ ತೆಗೆದುಕೊಂಡಿರುವುದು ಇಲ್ಲಿ ಗಮನಾರ್ಹ. 

ಯಾವ ಕಂಪನಿ ಈ ನಿರ್ದೇಶನ ಪಾಲಿಸುವುದಿಲ್ಲವೋ ಅಂತಹ ಕಂಪನಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಈ ನಿರ್ದೇಶನಗಳು ಜೂನ್ 22, 2022ರಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ

ವಿಪಿಎನ್ ಎಂದರೆ?

ಪ್ರಪಂಚದಾದ್ಯಂತ ಬಳಕೆದಾರರು ಮತ್ತು ಕಂಪನಿಗಳು  ತಮ್ಮ ಮಾಹಿತಿ ದತ್ತಾಂಶಗಳನ್ನು ಸುರಕ್ಷಿತವಾಗಿ ಎನ್‌ಕ್ರಿಪ್ಟ್‌ (ಗೌಪ್ಯತೆ) ಮಾಡಲು ಹಾಗೂ ತಮ್ಮ ಗುರುತನ್ನು ಮರೆಮಾಚಲು ವಿಪಿಎನ್‌ಗಳ ಮೊರೆ ಹೋಗುತ್ತಾರೆ. ವಿಪಿಎನ್‌ಗಳು ದೇಶದಲ್ಲಿ ನಿರ್ಬಂಧಿತ ವೆಬ್ಸೈಟ್‌ಗಳನ್ನು (ಜಾಲತಾಣ) ಪ್ರವೇಶ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಆನ್‌ಲೈನ್‌ ಕಾರ್ಯಾಚರಣೆಯಲ್ಲಿ ಗೌಪತ್ಯೆಯನ್ನು ಕಾಪಾಡುತ್ತದೆ. 

ವಿಪಿಎನ್ ಕಂಪನಿಗಳು ಐದು ವರ್ಷ ಗ್ರಾಹಕರಿಂದ ಸಂಗ್ರಹಿಸಬೇಕಾದ ಮಾಹಿತಿಗಳು

ನಿರ್ದೇಶನಗಳ ಷರತ್ತು(ವಿ) ಅಡಿಯಲ್ಲಿ, ಡೇಟಾ ಸೆಂಟರ್‌ಗಳು, ವರ್ಚುವಲ್ ಪ್ರೈವೇಟ್ ಸರ್ವರ್ (ವಿಪಿಎಸ್) ಪೂರೈಕೆದಾರರು, ಕ್ಲೌಡ್ ಸೇವಾ ಪೂರೈಕೆದಾರರು ಮತ್ತು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ ಸೇವೆ (ವಿಪಿಎನ್) ಪೂರೈಕೆದಾರರು ಈ ಕೆಳಗಿನ ಮಾಹಿತಿಗಳನ್ನು ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳವರೆಗೆ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸರ್ಕಾರ ಕಡ್ಡಾಯವಾಗಿ ತಿಳಿಸಿದೆ.

  1. ಗ್ರಾಹಕರ ದೃಢೀಕರಣ ಹೆಸರು
  2. ಬಾಡಿಗೆ ಪಡೆದ ಅವಧಿ (ದಿನಾಂಕ ಒಳಗೊಂಡತೆ)
  3. ಅಂತರ್ಜಾಲ ಬಳಕೆದಾರರು ಬಳಸಿದ ಐಪಿ
  4. ಇ-ಮೇಲ್‌, ಐಪಿ ವಿಳಾಸ ಮತ್ತು ಬಳಕೆಯ ಅವಧಿಯ ಮಾಹಿತಿ ನೋಂದಣಿ
  5. ಸೇವೆ ಪಡೆದ ಉದ್ದೇಶ
  6. ಬಳಕೆದಾರರ ಪೂರ್ಣ ವಿಳಾಸ
  7. ಸೇವೆಯ ಮಾಲೀಕತ್ವದ ಮಾದರಿ
ನಿಮಗೆ ಏನು ಅನ್ನಿಸ್ತು?
0 ವೋಟ್