
- ಮ್ಯಾಸ ಬೇಡ ಬುಡಕಟ್ಟು ಜನರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಆಗ್ರಹ
- ಮ್ಯಾಸ ನಾಯಕ ಜನಾಂಗಕ್ಕೆ ಅನ್ಯಾಯವೆಸಗಿರುವ ಬಿ ಶ್ರೀರಾಮುಲು ; ಆರೋಪ
ಬುಡಕಟ್ಟು ಆಚಾರ, ವಿಚಾರ ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಮ್ಯಾಸ ಬೇಡ (ಮ್ಯಾಸ ನಾಯಕ) ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಚಿತ್ರದುರ್ಗದ ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮ್ಯಾಸ ಬೇಡ ಬುಡಕಟ್ಟು ಜನರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಮತ್ತು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಮಾತನಾಡಿ, “1975ರಲ್ಲಿ ಎಲ್ ಜಿ ಹಾವನೂರ ಅವರು ಮ್ಯಾಸ ಬೇಡರನ್ನು ಹಿಂದುಳಿದ ಜಾತಿ ಪಟ್ಟಿಗೆ ಸೇರಿಸಿ ನಾಯಕ, ಬೇಡ, ನಾಯ್ಕ, ವಾಲ್ಮೀಕಿ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ನಮೂದಿಸಿ ಸರ್ಕಾರಕ್ಕೆ ವರದಿ ನೀಡಿ ಮ್ಯಾಸ ಬೇಡ ನಾಯಕರಿಗೆ ಅನ್ಯಾಯ ಮಾಡಿದ್ದಾರೆ” ಎಂದು ಆರೋಪಿಸಿದರು.
“ಪಾಳೆಯಗಾರರ ಶಾಸನಗಳಲ್ಲಿ, ಬ್ರಿಟೀಷರ ದಾಖಲಾತಿಗಳಲ್ಲಿ ಮತ್ತು ಜನಗಣತಿ ವರದಿಯಲ್ಲಿ ಮ್ಯಾಸ ನಾಯಕ ಪಂಗಡವನ್ನು 1971ರವರೆಗೂ ಮ್ಯಾಸ ನಾಯಕ, ಮ್ಯಾಸಬೇಡ ಎಂದೇ ಜಾತಿ ಪ್ರಮಾಣಪತ್ರದಲ್ಲಿ ನಮೂದಿಸಲಾಗಿತ್ತು. 2011ರಲ್ಲಿ ಮ್ಯಾಸ ನಾಯಕ ಪದವನ್ನು ಬಿ ಶ್ರೀರಾಮುಲು, ಬಾಲಚಂದ್ರ ಜಾರಕಿಹೊಳಿ, ಪ್ರಸನ್ನಾನಂದಪುರಿ ಸ್ವಾಮೀಜಿಯವರು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಿ ಮ್ಯಾಸ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ” ಎಂದು ದೂರಿದರು.
“ಮ್ಯಾಸ ನಾಯಕ ಬುಡಕಟ್ಟು ಜನಾಂಗಕ್ಕೆ ಅನ್ಯಾಯವೆಸಗಿರುವ ಬಿ ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶಕ್ಕೆ ಮ್ಯಾಸ ನಾಯಕರು ಹೋಗಬಾರದು. ಮೊಳಕಾಲ್ಮೂರು ತಾಲೂಕನ್ನು ಮತ್ತು ಮ್ಯಾಸ ನಾಯಕ ಬುಡಕಟ್ಟು ಜನರನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲೇ ಉಳಿಸಬೇಕು. ಪ್ರತ್ಯೇಕವಾಗಿ ಮ್ಯಾಸ ಬೇಡ ಬುಡಕಟ್ಟು ನಿಗಮವನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಭಾರತ್ ಜೋಡೋ ಯಾತ್ರೆ | ಮ್ಯಾಸ ಬೇಡರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ನೆರವಾಗುವಂತೆ ರಾಹುಲ್ ಗಾಂಧಿಗೆ ಮನವಿ
ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ. ಗೆರೆಗಲ್ಪಾಪಯ್ಯ, ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ ತಿಪ್ಪೇಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ತಿಪ್ಪೇಸ್ವಾಮಿ ಹಾಗೂ ಇತರರು ಇದ್ದರು.