ಟ್ವಿಟರ್‌ ಸುದ್ದಿ | ವ್ಯವಹಾರಕ್ಕೂ ಮಿಗಿಲಾಗಿ ಮಾನವೀಯತೆಗೆ ಬೆಲೆ ನೀಡಿ; ಎಲಾನ್‌ಗೆ ಪತ್ರ ಬರೆದ ವಿಶ್ವಸಂಸ್ಥೆ

Volker Turk
  • ಟ್ವಿಟರ್‌ ಉದ್ಯೋಗಿಗಳ ಸಾಮೂಹಿಕ ವಜಾ; ಎಲಾನ್‌ ಮಸ್ಕ್‌ಗೆ ಬಹಿರಂಗ ಪತ್ರ ಬರೆದ ವೋಲ್ಕರ್‌
  • ಬಳಕೆದಾರರ ಗೌಪ್ಯತೆ ರಕ್ಷಿಸುವ ಬಗ್ಗೆ ಮಾತನಾಡಿದ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗ 

ಟ್ವಿಟರ್‌ನ ಹೊಸ ಮುಖ್ಯಸ್ಥ ಎಲಾನ್‌ ಮಸ್ಕ್‌ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲು ನಿರ್ಧರಿಸಿರುವುದು ವಿವಾದಕ್ಕೀಡಾಗಿದೆ. ಈ ಬಗ್ಗೆ ಟ್ವಿಟ್ಟಿಗರು ಆಶ್ಚರ್ಯ, ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ವಜಾಗೊಂಡ ಉದ್ಯೋಗಿಗಳು ಕಂಪನಿಗೆ ಭಾವನಾತ್ಮಕ ವಿದಾಯ ಹೇಳುತ್ತಿದ್ದಾರೆ.

ಉದ್ಯೋಗಿಗಳ ಸಾಮೂಹಿಕ ವಜಾ ಬಗ್ಗೆ ಮೌನ ಮುರಿದಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿ ವೋಲ್ಕರ್‌ ಟರ್ಕ್‌, ಮಾನವ ಹಕ್ಕುಗಳನ್ನು ಗೌರವಿಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಎಲಾನ್‌ ಮಸ್ಕ್‌ಗೆ ಬಹಿರಂಗ ಪತ್ರ ಬರೆದಿದ್ದಾರೆ.

Eedina App

ಟ್ವಿಟರ್‌ನಿಂದ ಉದ್ಯೋಗಿಗಳನ್ನು ವಜಾಗೊಳಿಸಿದ ವರದಿಗಳು, "ನನ್ನ ದೃಷ್ಟಿಕೋನದಿಂದ ಇಂತಹ ಬೆಳವಣಿಗೆ ಉತ್ತೇಜನಕಾರಿ ಆರಂಭವಲ್ಲ" ಎಂದು ಟರ್ಕ್‌ ಪತ್ರದಲ್ಲಿ ತಿಳಿಸಿದ್ದಾರೆ.

"ಡಿಜಿಟಲ್ ವೇದಿಕೆಯಲ್ಲಿ ಟ್ವಿಟರ್‌ ಪಾತ್ರದ ಬಗ್ಗೆ ಕಾಳಜಿ ಮತ್ತು ಆತಂಕದಿಂದ ಪತ್ರ ಬರೆದಿರುವುದಾಗಿ ತಿಳಿಸಿರುವ ಟರ್ಕ್‌ ಅವರು, ದ್ವೇಷದ ಭಾಷಣ ಮತ್ತು ತಪ್ಪು ಮಾಹಿತಿ ಪ್ರಚಾರ ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಬಳಕೆದಾರರ ಗೌಪ್ಯತೆ ರಕ್ಷಿಸುವ ಅಗತ್ಯವನ್ನು ಎತ್ತಿ ತೋರಿಸಿದರು.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮಸ್ಕ್ ಅವರು, ವಾರದ ಹಿಂದೆ ಟ್ವಿಟರ್‌ ಖರೀದಿಸಿ ಸಂಪೂರ್ಣವಾಗಿ ಸ್ವಾಧೀನಕ್ಕೆ ಪಡೆದಿದ್ದಾರೆ. ಟ್ವಿಟರ್‌ ಮುಖ್ಯಸ್ಥರಾಗಿ ಕೆಲಸ ಆರಂಭಿಸಿದ ದಿನದಿಂದಲೇ ಒಂದಿಲ್ಲೊಂದು ಹೊಸ ನಿರ್ಧಾರಗಳನ್ನು ಘೋಷಿಸುತ್ತಲೇ ಬಂದಿರುವ ಅವರು, ಟ್ವಿಟರ್‌ ನಿರ್ದೇಶಕ ಮಂಡಳಿಯನ್ನು ವಿಸರ್ಜಿಸಿದರು. ಮಾಜಿ ಸಿಇಓ ಸೇರಿದಂತೆ ನಾಲ್ಕು ಉನ್ನತ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿದ್ದರು.

ಇದರ ಬೆನ್ನಲ್ಲೇ ನವೆಂಬರ್‌ 3ರ ತಡರಾತ್ರಿ ಟ್ವಿಟರ್‌ನ ಉದ್ಯೋಗಿಗಳಿಗೆ ಆಂತರಿಕ ಮೆಮೊ ಇಮೇಲ್‌ ಮಾಡುವ ಮೂಲಕ ಸಾಮೂಹಿಕ ವಜಾಗೊಳಿಸುವಿಕೆಯ ಕುರಿತು ಮಾಹಿತಿ ನೀಡಿದ್ದರು. 

ಅರ್ಧದಷ್ಟು ಟ್ವಿಟರ್ ಉದ್ಯೋಗಿಗಳ ವಜಾ

ಇಮೇಲ್‌ ಮೂಲಕ ಉದ್ಯೋಗಗಳ ವಜಾಕ್ಕೆ ಮುಂದಾಗಿದ್ದ ಎಲಾನ್‌, 7,500 ಮಂದಿ ಉದ್ಯೋಗಿಗಳಲ್ಲಿ ಸುಮಾರು ಅರ್ಧದಷ್ಟು ನೌಕರರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಕಂಪನಿಯ ಕಂಪ್ಯೂಟರ್‌ ಮತ್ತು ಇಮೇಲ್‌ಗಳಿಗೆ ತಕ್ಷಣದಿಂದಲೇ ಪ್ರವೇಶ ನಿರಾಕರಿಸಲಾಗುವುದು ಎಂದು ಕಂಪನಿ ಹೇಳಿದ್ದು, ಸುಮಾರು ಶೇ. 50ರಷ್ಟು ಉದ್ಯೋಗಿಗಳು ಕಂಪನಿ ಇಮೇಲ್‌ಗೆ ಲಾಗ್‌ಇನ್‌ ಆಗಲು ಸಾಧ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಶಾಸಕರ ಸೋಗಿನಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಕರೆ ಮಾಡಿದ್ದ ಆರೋಪಿಯ ಬಂಧನ

ʻʻದುರದೃಷ್ಟವಶಾತ್ ಕಂಪನಿಯು ದಿನಕ್ಕೆ ₹4 ಕೋಟಿಯಷ್ಟು ಹಣ ಕಳೆದುಕೊಳ್ಳುತ್ತಿದ್ದು, ಉದ್ಯೋಗಿಗಳ ಕಡಿತಗೊಳಿಸುವುದು ಬಿಟ್ಟು ಬೇರೆ ಯಾವುದೇ ಆಯ್ಕೆಯಿಲ್ಲ. ವಜಾಗೊಳಿಸಲಾದ ಪ್ರತಿಯೊಬ್ಬರಿಗೂ ಮೂರು ತಿಂಗಳ ಸಂಬಳವನ್ನು ನೀಡಲಾಗಿದೆ. ಇದು ಕಾನೂನುಬದ್ಧ ಅಗತ್ಯಕ್ಕಿಂತ ಶೇ. 50ರಷ್ಟು ಹೆಚ್ಚುʼʼ ಎಂದು ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿದ್ದಾರೆ.

ಸಾಮೂಹಿಕ ವಜಾ ವಿರುದ್ಧ ಕ್ಲಾಸ್‌ ಆಕ್ಷನ್‌ ಮೊಕದ್ದಮೆ ದಾಖಲು

ಈ ಸಾಮೂಹಿಕ ವಜಾದ ಕುರಿತು ಪರ- ವಿರೋಧದ ಮಾತುಗಳು ಕೇಳಿಬರುತ್ತಿವೆ. ಈ ವಜಾ ಬಗ್ಗೆ ಈಗಾಗಲೇ ಮೊಕದ್ದಮೆ ಹೂಡಲಾಗಿದೆ.

ನೋಟಿಸ್ ಇಲ್ಲದೆ ಉದ್ಯೋಗಿಗಳನ್ನು ವಜಾಗೊಳಿಸಿದ್ದಕ್ಕಾಗಿ ಕಂಪನಿಯು ಕ್ಲಾಸ್ ಆಕ್ಷನ್ ಮೊಕದ್ದಮೆ ಎದುರಿಸಲು ಸಿದ್ಧವಾಗಿದೆ. ಸಾಮೂಹಿಕ ವಜಾ ನಿರ್ಧಾರವು ಫೆಡರಲ್ ಮತ್ತು ಕ್ಯಾಲಿಫೋರ್ನಿಯ ರಾಜ್ಯದ ಕಾನೂನಿನ ಉಲ್ಲಂಘನೆ ಎಂದು ದೂರಿನಲ್ಲಿ ಹೇಳಲಾಗಿದೆ. ಕಂಪನಿಯ ವಿರುದ್ಧ ಸ್ಯಾನ್ ಫ್ರಾನ್ಸಿಸ್ಕೋ ಫೆಡರಲ್ ನ್ಯಾಯಾಲಯದಲ್ಲಿ ಗುರುವಾರ ಮೊಕದ್ದಮೆ ದಾಖಲಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app