
- ಮೌದರ್ಹ್ ಗ್ರಾಮದ ಹ್ನಾಥಿಯಾಲ್ನಲ್ಲಿರುವ ಕಲ್ಲು ಗಣಿಯಲ್ಲಿ ದುರಂತ
- ಎಬಿಸಿಐ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿ. ಕಂಪನಿ ಕಾರ್ಮಿಕರು ಗಣಿಯಲ್ಲಿ ಕೆಲಸ
ಮಿಜೋರಾಂನಲ್ಲಿ ಸೋಮವಾರ (ನ. 14) ಮಧ್ಯಾಹ್ನ ಕಲ್ಲು ಗಣಿಯೊಂದು ಕುಸಿದು ಬಿದ್ದು ಎಂಟು ಬಿಹಾರ ಕಾರ್ಮಿಕರು ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ಮಂಗಳವಾರ (ನ. 15) ಹೊರತರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೂ ನಾಲ್ವರು ಕಾರ್ಮಿಕರು ಗಣಿಯಲ್ಲಿ ಸಿಲುಕಿರುವ ಶಂಕೆ ಇದೆ. ಅವರನ್ನು ಹೊರತರಲು ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಅವರು ಹೇಳಿದರು.
ಐಜ್ವಾಲ್ನಿಂದ ಸುಮಾರು 160 ಕಿಮೀ ದೂರದಲ್ಲಿರುವ ದಕ್ಷಿಣ ಮಿಜೋರಾಂನ ಹ್ನಾಥಿಯಾಲ್ ಜಿಲ್ಲೆಯಲ್ಲಿ ಸೋಮವಾರ ಕಲ್ಲಿನ ಗಣಿಯೊಂದು ಕುಸಿದ ನಂತರ ಕನಿಷ್ಠ 12 ಜನರು ಸಿಕ್ಕಿಬಿದ್ದಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿನೀತ್ ಕುಮಾರ್ ತಿಳಿಸಿದ್ದರು.
ಎಬಿಸಿಐ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಮಿಕರು ಮೌದರ್ಹ್ ಗ್ರಾಮದ ಹ್ನಾಥಿಯಾಲ್ನಲ್ಲಿರುವ ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ 3 ಗಂಟೆಗೆ ಈ ಘಟನೆ ಸಂಭವಿಸಿದೆ. ಈ ವೇಳೆ ಅಲ್ಲಿ 13 ಜನ ಕೆಲಸ ಮಾಡುತ್ತಿದ್ದರು ಎಂದು ವಿನೀತ್ ಕುಮಾರ್ ಹೇಳಿದರು.
ಕಾರ್ಮಿಕರು ತಮ್ಮ ಊಟದ ವಿರಾಮ ಮುಗಿಸಿ ಕೆಲಸಕ್ಕೆ ಮರಳಿದ್ದರು. ಕಲ್ಲು ಗಣಿಯ ಒಳಗೆ ಪ್ರವೇಶಿಸಿದರು. ಕಾರ್ಮಿಕರು ಐದು ಅಗೆಯುವ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳನ್ನು ತಮ್ಮೊಡನೆ ಕೊಂಡೊಯ್ದಿದ್ದರು ಎಂದು ಪೊಲೀಸರು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಗಣಿ ಕುಸಿತದ ವೇಳೆ ಒಬ್ಬ ಕಾರ್ಮಿಕ ಅಲ್ಲಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ 12 ಮಂದಿ ಅಲ್ಲಿಯೇ ಇದ್ದರು.
ಘಟನೆ ನಡೆದ ಕೂಡಲೇ ಹ್ನಾಥಿಯಾಲ್ ಜಿಲ್ಲಾ ಅಧಿಕಾರಿಗಳು ಮತ್ತು ವೈದ್ಯಕೀಯ ತಂಡ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.
“ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಗುರುತಿಸಲಾಗುವುದು. ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಕಣ್ಮರೆಯಾಗಿರುವವರ ಪತ್ತೆಯಾಗುವವರೆಗೂ ಮುಂದುವರಿಯಲಿದೆ” ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಾರ್ಮಿಕರು ಗಣಿಯಲ್ಲಿ ಕಲ್ಲುಗಳನ್ನು ಒಡೆದು ಸಂಗ್ರಹಿಸುತ್ತಿದ್ದಾಗ ಮೇಲಿನಿಂದ ಸಡಿಲವಾದ ಮಣ್ಣು ಅವರ ಮೇಲೆ ಬಿದ್ದಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಹತ್ತಿರದ ಗ್ರಾಮಗಳ ಯಂಗ್ ಮಿಜೋ ಅಸೋಸಿಯೇಶನ್ನ (ವೈಎಂಎ) ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಧಾವಿಸಿದರು ಎಂದು ಪೊಲೀಸರು ಹೇಳಿದರು.
ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ಸಹ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಪೊಲೀಸರ ಎದುರೇ ದಲಿತನಿಗೆ ಥಳಿತ : ಗ್ರಾಮದ ಮುಖ್ಯಸ್ಥನ ಬಂಧನ
ಮೌದರ್ಹ್ ಒಂದು ಸಣ್ಣ ಕುಗ್ರಾಮವಾಗಿದ್ದು, ಹ್ನಾಥಿಯಾಲ್ ಪಟ್ಟಣದಿಂದ ಸುಮಾರು 23 ಕಿಮೀ ದೂರದಲ್ಲಿದೆ.
ಪ್ರಸ್ತುತ ಹ್ನಾಥಿಯಾಲ್ ಮತ್ತು ಡಾನ್ ಗ್ರಾಮದ ನಡುವೆ ಹೆದ್ದಾರಿಯನ್ನು ನಿರ್ಮಿಸುತ್ತಿರುವ ಕಂಪನಿಯು ಗಣಿಯಿಂದ ಕಲ್ಲುಗಳು ಅಥವಾ ಬಂಡೆಗಳನ್ನು ಸಂಗ್ರಹಿಸುತ್ತದೆ. ಎರಡೂವರೆ ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.