ಕಸದಲ್ಲಿ ಮೋದಿ ಭಾವಚಿತ್ರ | ವಜಾಗೊಂಡಿದ್ದ ಸ್ವಚ್ಛತಾ ಕಾರ್ಮಿಕ ಮರು ನೇಮಕ

Bobby Khare
  • ಕುಟುಂಬಕ್ಕೆ ಏಕಮಾತ್ರ ಆಧಾರವಾಗಿರುವ ಸ್ವಚ್ಛತಾ ಕಾರ್ಮಿಕ ಬಾಬಿ ಖರೆ
  • ಕಸದ ಗಾಡಿಯಲ್ಲಿದ್ದ ಪ್ರಧಾನಿ, ಯೋಗಿ ಫೊಟೊಗಳು ವೈರಲ್‌ ಆಗಿದ್ದವು

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿನಾಥ್‌ ಅವರ ಭಾವಚಿತ್ರಗಳನ್ನು ಕಸದ ಗಾಡಿಯಲ್ಲಿ ಕೊಂಡೊಯ್ದಿದ್ದಕ್ಕಾಗಿ ಕೆಲಸದಿಂದ ವಜಾಗೊಂಡಿದ್ದ ಸ್ವಚ್ಛತಾ ಕಾರ್ಮಿಕ ಬಾಬಿ ಖರೆ ಮಂಗಳವಾರ (ಜುಲೈ 19) ಕೆಲಸಕ್ಕೆ ಮರುನೇಮಕವಾಗಿದ್ದಾರೆ. 

ಮರುನೇಮಕದ ಬಗ್ಗೆ ಪ್ರತಿಕ್ರಿಯಿಸಿರುವ ಮಥುರಾ ಪ್ರದೇಶದ 40 ವರ್ಷದ ಬಾಬಿ, “ಇಂತಹ ತಪ್ಪುಗಳು ಮತ್ತೆ ಮರುಕಳಿಸದಂತೆ ನಿಗಾ ವಹಿಸುತ್ತೇನೆ” ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ ಫೊಟೊಗಳು ಇದ್ದ ಕಸದ ಗಾಡಿಯನ್ನು ಬಾಬಿ ಅವರು ತಳ್ಳಿಕೊಂಡು ಹೊಗಿದ್ದರು. ಈ ಕುರಿತ ಫೊಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಆ ನಂತರ ಬಾಬಿ ಅವರನ್ನು ಜುಲೈ 17 ರಂದು ಕೆಲಸದಿಂದ ವಜಾಗೊಳಿಸಲಾಗಿತ್ತು.  

ಬಾಬಿ ಅವರನ್ನು ವಜಾಗೊಳಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಟೀಕೆಗಳು ಕೇಳಿ ಬಂದವು. ಕಾರ್ಮಿಕ ಕಸದ ಗಾಡಿಯನ್ನು ಮಾತ್ರ ತಳ್ಳಿಕೊಂಡು ಹೋಗಿದ್ದಾರೆ. ಅವರು ಫೊಟೊಗಳನ್ನು ಇಟ್ಟಿಲ್ಲ. ಆದ್ದರಿಂದ ಅವರನ್ನು ವಜಾಗೊಳಿಸಬಾರದು ಎಂದು ಅನೇಕರು ಒತ್ತಾಯಿಸಿದ್ದರು.

ಬಾಬಿ ಅವರಿಗೆ ಅಪಾರ ಬೆಂಬಲ ದೊರೆತ ನಂತರ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಮರುನೇಮಕಾತಿ ಪತ್ರ ಹೊರಡಿಸಿದ್ದರು. 

ಈ ಸುದ್ದಿ ಓದಿದ್ದೀರಾ?: ಕೃಷಿ ಸಾಲ ಮನ್ನಾ: ಕೇವಲ ಶೇ.50ರಷ್ಟು ರೈತರಿಗೆ ಮಾತ್ರ ಉಪಯೋಗ: ಎಸ್‌ಬಿಐ ಪರಿಣಿತರ ವರದಿ  

"ಬಾಬಿ ಅವರು ತಮ್ಮ ಕುಟುಂಬಕ್ಕೆ ಒಬ್ಬರೇ ಆಧಾರ. ಅವರಿಗೆ ಒಬ್ಬ ಮಗ ಮತ್ತು ಮೂರು ಮಂದಿ ಹೆಣ್ಣು ಮಕ್ಕಳಿದ್ದಾರೆ. ಬಾಬಿ ಅವರು ಅನಾರೋಗ್ಯ ಪೀಡಿತರಾಗಿರುವ ತಮ್ಮ ಸಹೋದರನ ಕುಟುಂಬಕ್ಕೂ ಆಸರೆಯಾಗಿದ್ದಾರೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕಳೆದ ಎರಡು ದಶಕಗಳಿಂದ ಸ್ವಚ್ಛತಾ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಬಾಬಿ ಸಾಮಾನ್ಯವಾಗಿ ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. 

ತಮ್ಮ ಕಸದ ಗಾಡಿಯಲ್ಲಿದ್ದ ಪ್ರಧಾನಿ ಮೋದಿ ಮತ್ತು ಯೋಗಿ ಅವರ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬಗ್ಗೆ ಬಾಬಿ ವಿವರಿಸಿದ್ದಾರೆ.

“ಶನಿವಾರ ಸುಭಾಷ್‌ ನಗರ ಇಂಟರ್‍‌ ಕಾಲೇಜು ಬಳಿ ನಾನು ಕೆಲಸದಲ್ಲಿದ್ದ ವೇಳೆ ಮೂರು ಮಂದಿ ನನ್ನನ್ನು ತಡೆದರು. ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರ ಚಿತ್ರಗಳು ಕಸದ ಗಾಡಿಯಲ್ಲೇಕಿವೆ ಎಂದು ಪ್ರಶ್ನಿಸಿದರು. ನನಗೆ ತಿಳಿದಿಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆಂದು ಉತ್ತರಿಸಿದೆ. ನಂತರ ಆ ಫೊಟೊಗಳನ್ನು ನಾನು ತೆಗೆದುಕೊಂಡೆ” ಎಂದು ಬಾಬಿ ಹೇಳಿದ್ದಾರೆ. 

“ಬೆಳಗಿನ ಪಾಳಿ ಮುಗಿದ ನಂತರ ಪಾಲಿಕೆಯ ಅಧಿಕಾರಿಗಳು ನನ್ನನ್ನು ಕರೆಸಿ ಈ ಬಗ್ಗೆ ವಿವರಣೆ ಕೇಳಿ ನೋಟಿಸ್‌ ನೀಡಿದ್ದರು. ಅದಕ್ಕೆ ಉತ್ತರಿಸಿದ್ದೆ” ಎಂದು ಬಾಬಿ ವಿವರಿಸಿದ್ದಾರೆ. 

"ಪ್ರಮಾಣಿಕತೆಯಿಂದ ಕೆಲಸ ಮಾಡುವುದಾಗಿ ಬಾಬಿ ಹೇಳಿದ್ದಾರೆ. ಕುಟುಂಬಕ್ಕೆ ಅವರೊಬ್ಬರೇ ಆಧಾರ ಎಂಬ ಅವರ ಮನವಿಯನ್ನು ಪುರಸ್ಕರಿಸಿ ಅವರನ್ನು ಮರುನೇಮಕ ಮಾಡಲಾಗಿದೆ” ಎಂದು ಪಾಲಿಕೆಯ ನಗರ ಸ್ವಾಸ್ಥ್ಯ ಅಧಿಕಾರಿ ಡಾ.ಕರೀಮ್‌ ಅಖ್ತರ್‍‌ ಖುರೇಷಿ ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
1 ವೋಟ್