ಬ್ರಿಟನ್‌ನಲ್ಲಿ ಮೇಯರ್ ಆದ ಭಾರತ ಮೂಲದ ಮೊದಲ ದಲಿತ ಮಹಿಳೆ

London
  • ಈಲಿಂಗ್ ಕೌನ್ಸಿಲ್‌ನ ಅತ್ಯುನ್ನತ ಹುದ್ದೆಗೆ ಮೊಹಿಂದರ್ ಕೌರ್ ಮಿಧಾ ಆಯ್ಕೆ
  • 2022ರ ಚುನಾವಣೆಯಲ್ಲಿ 59 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಲೇಬರ್ ಪಕ್ಷ

ಬ್ರಿಟನ್‌ನ ಈಲಿಂಗ್ ಕೌನ್ಸಿಲ್‌ನ ಮೇಯರ್ ಆಗಿ ಭಾರತೀಯ ಮೂಲದ ಮೊಹಿಂದರ್ ಕೌರ್ ಮಿಧಾ ಆಯ್ಕೆಯಾಗಿದ್ದಾರೆ. ದಲಿತ ಮಹಿಳೆಯೊಬ್ಬರು ಮೇಯರ್‌ ಹುದ್ದೆ ಪಡೆಯುವ ಮೂಲಕ ಮೊಹಿಂದರ್ ಕೌರ್ ಮಿಧಾ ಬ್ರಿಟನ್‌ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ಮೊಹಿಂದರ್ ಕೌರ್ ಮಿಧಾ ಅವರ ಆಯ್ಕೆ ಬಗ್ಗೆ ಟ್ವೀಟ್ ಮಾಡಿರುವ ಲಂಡನ್‌ನ ಲೇಬರ್ ಪಕ್ಷ "ಮುಂದಿನ ಒಂದು ವರ್ಷದ ಅವಧಿಗೆ ಈಲಿಂಗ್‌ ಕೌನ್ಸಿಲ್‌ನ ಮೇಯರ್‌ ಆಗಿದ್ದಾರೆ. ಅವರ ಆಯ್ಕೆ ನಮಗೆ ಹೆಮ್ಮೆಯ ವಿಷಯ. ಎಂದು ಪ್ರಕಟಿಸಿದೆ." 

ಮೂಲತಃ ಭಾರತದ ಪಂಜಾಬ್‌ ಮೂಲದ ಅವರು ಚಂಡೀಗಢದ ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ದಲಿತ ಮಹಿಳೆ ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಈಲಿಂಗ್ ಕೌನ್ಸಿಲ್‌ನ ಅತ್ಯುನ್ನತ ಹುದ್ದೆಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವೆಂದು ಸಮುದಾಯದ ಪ್ರಮುಖರು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಲಂಡನ್ ಮೇಯರ್ ಮತ್ತು ಅಸೆಂಬ್ಲಿ ಚುನಾವಣೆಗಳು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮೇ ತಿಂಗಳ ಮೊದಲ ಗುರುವಾರ ನಡೆಯುತ್ತವೆ. 2022ರ ಮೇ 5ರಂದು ನಡೆದ ಸ್ಥಳೀಯ ಕೌನ್ಸಿಲ್ ಚುನಾವಣೆಯಲ್ಲಿ 70 ಸದಸ್ಯ ಬಲದ ಈಲಿಂಗ್ ಕೌನ್ಸಿಲ್‌ನಲ್ಲಿ ಲೇಬರ್ ಪಕ್ಷದ ಸದಸ್ಯರು 59 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. 23 ವಾರ್ಡ್‌ಗಳಲ್ಲಿ ತಲಾ ಮೂವರು ಸದಸ್ಯರು ಪ್ರತಿನಿಧಿಸುತ್ತಾರೆ. ಈ ಪೈಕಿ ಪಾಲಿಕೆಯ ಎರಡು ವಾರ್ಡ್‌ಗಳ ತಲಾ ಇಬ್ಬರು ಸದಸ್ಯರು ಇರುತ್ತಾರೆ. 59 ಸ್ಥಾನ ಪಡೆಯುವ ಮೂಲಕ ಲೇಬರ್ ಪಕ್ಷ ಈಲಿಂಗ್ ಕೌನ್ಸಿಲ್ ಮೇಲೆ ನಿಯಂತ್ರಣ ಹೊಂದಿತ್ತು. ಲಿಬರಲ್ ಡೆಮಾಕ್ರಾಟ್ ಮತ್ತು ಕನ್ಸರ್ವೇಟಿವ್ ಪಕ್ಷಗಳು ಕ್ರಮವಾಗಿ 6 ಮತ್ತು 5 ಸ್ಥಾನಗಳಿಗೆ ತೃಪ್ತಿಪಟ್ಟಿದ್ದವು. ಫಲಿತಾಂಶ ಮೇ 6ರಂದು ಪ್ರಕಟವಾಗಿತ್ತು.

ಈ ಸುದ್ದಿ ಓದಿದ್ದೀರಾ:? ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ; 18 ವಿದ್ಯಾರ್ಥಿಗಳು ಸೇರಿ 21 ಜನ ಸಾವು

ಮಿಧಾ ಮೊಹಿಂದರ್ ಕೌರ್ 2018ರಲ್ಲಿ ಬರೋ ಕ್ಷೇತ್ರದ ಡಾರ್ಮರ್ಸ್ ವೆಲ್ಸ್ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕೌನ್ಸಿಲರ್ ತೇಜ್ ರಾಮ್ ಬಾಘಾ ನಿಧನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಉಪ ಚುನಾವಣೆ ನಡೆದಿತ್ತು. ಬರೋ ಕ್ಷೇತ್ರದ ಡಾರ್ಮರ್ಸ್ ವೆಲ್ಸ್ ವಾರ್ಡ್‌ನ ಮೂವರು ಸದಸ್ಯರ ಪೈಕಿ ಇವರೂ ಒಬ್ಬರಾಗಿದ್ದಾರೆ. ಲೇಬರ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಮಿಧಾ ಮೊಹಿಂದರ್ ಕೌರ್ 2272 ಮತಗಳೊಂದಿಗೆ ಗೆಲುವು ಸಾಧಿಸಿದ್ದರು. ನಂತರ 2010ರಲ್ಲಿ  ನಡೆದ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು. ಬರೋನಲ್ಲಿ 23 ವಾರ್ಡ್‌ಗಳಿದ್ದು, ಪ್ರತಿಯೊಂದನ್ನೂ ಮೂವರು ಸದಸ್ಯರು ಪ್ರತಿನಿಧಿಸುತ್ತಾರೆ. 

ಐತಿಹಾಸಿಕ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಬಂದ ಲೇಬರ್ ಪಕ್ಷ

ಈಲಿಂಗ್ ಕೌನ್ಸಿಲ್‌ ವ್ಯಾಪ್ತಿಯ 7 ಪಟ್ಟಣಗಳಾದ್ಯಂತ ಮತದಾರರ ಅಗಾಧ ಬೆಂಬಲದೊಂದಿಗೆ 59 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಲೇಬರ್ ಗ್ರೂಪ್ ಹೊರಹೊಮ್ಮಿತ್ತು. ನಾರ್ತ್‌ಫೀಲ್ಡ್ ವಾರ್ಡ್‌ನ ಹೊಸ ಸ್ಥಾನ ಗಳಿಸುವುದರೊಂದಿಗೆ 2022ರ ಚುನಾವಣೆಯಲ್ಲಿ ಐತಿಹಾಸಿಕ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಬಂದಿದೆ. 

ಈಲಿಂಗ್ ಕೌನ್ಸಿಲ್‌ನ ಲೇಬರ್‌ ಪಕ್ಷದ ನಾಯಕ, ಸದಸ್ಯ ಪೀಟರ್ ಮೇಸನ್, "ನಾವು ಮುಕ್ತ, ಪಾರದರ್ಶಕ ಆಡಳಿತ ನೀಡುತ್ತೇವೆ. ಹೆಚ್ಚಿನ ಬಹುಮತದೊಂದಿಗೆ ಐತಿಹಾಸಿಕ ನಾಲ್ಕನೇ ಅವಧಿಗೆ ಮರು ಆಯ್ಕೆಯಾಗಿರುವುದು ಸಂತಸದ ವಿಷಯ. ವಾರ್ಡ್‌ನ ಜನ ನಮ್ಮ ಪಕ್ಷಕ್ಕೆ ಅಭೂತಪೂರ್ವ ಗೆಲುವು ನೀಡಿದ್ದಾರೆ. ಅವರ ನಂಬಿಕೆ ಮತ್ತು ವಿಶ್ವಾಸದೊಂದಿಗೆ ನಮ್ಮ ಬರೋ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ" ಎಂದಿದ್ದಾರೆ. 

ನಿಮಗೆ ಏನು ಅನ್ನಿಸ್ತು?
3 ವೋಟ್