ಮುಂಗಾರು ಅಧಿವೇಶನ | ಆಡಳಿತ- ವಿಪಕ್ಷಗಳಿಂದ ವೆಂಕಯ್ಯ ನಾಯ್ಡು ಬಣ್ಣನೆ, ಮಂಡನೆಯಾಗದ ಮಸೂದೆಗಳು

PM Narendra Modi
  • ವೆಂಕಯ್ಯ ನಾಯ್ಡು ಬೀಳ್ಕೊಡುಗೆಗೆ ಸಾಕ್ಷಿಯಾದ ಉಭಯ ಸದನ
  • ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದ ಲೋಕಸಭೆ

ಮುಂಗಾರು ಅಧಿವೇಶನದ 19ನೇ ದಿನವಾದ ಸೋಮವಾರ (ಆಗಸ್ಟ್‌ 8) ಸಭಾಪತಿ ಎಂ ವೆಂಕಯ್ಯನಾಯ್ಡು ಅವರು ತಮ್ಮ ಉಪರಾಷ್ಟ್ರಪತಿ ಹುದ್ದೆಯ ಕೊನೆಯ ಕ್ಷಣಗಳನ್ನು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕಳೆಯುತ್ತಿದ್ದಾರೆ. 

ಆಗಸ್ಟ್‌ 10ರಂದು ವೆಂಕಯ್ಯನಾಯ್ಡು ಅವರ ಉಪರಾಷ್ಟ್ರಪತಿ ಅಧಿಕಾರವಧಿ ಕೊನೆಗೊಳ್ಳಲಿದೆ. ಉಭಯ ಸದನದಲ್ಲಿ ವೆಂಕಯ್ಯನಾಯ್ಡು ಅವರ ಬೀಳ್ಕೊಡುಗೆ ನಡೆದಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಯ್ಡು ಜೊತೆಗಿನ ಒಡನಾಟ ಸ್ಮರಿಸಿ, "ಉಪರಾಷ್ಟ್ರಪತಿ ಭಾರತೀಯ ಭಾಷೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದರು. ಮಾತೃಭಾಷೆಗಳಿಗೆ ಪ್ರಾಧಾನ್ಯತೆ ನೀಡುತ್ತಿದ್ದರು" ಎಂದು ಹೇಳಿದರು. 

“ವೆಂಕಯ್ಯ ನಾಯ್ಡು ಚಮತ್ಕಾರಭರಿತ, ಸ್ವಾರಸ್ಯಕರ ರೀತಿಯಲ್ಲಿ ಭಾಷಣ ಮಾಡುತ್ತಿದ್ದರು. ಅವರ ಅವಧಿಯಲ್ಲಿ ಸದನದ ಕಲಾಪಗಳು ಶೇ. 70ರಷ್ಟು ಯಶಸ್ವಿಯಾಗಿದ್ದವು. ವೆಂಕಯ್ಯ ನಾಯ್ಡು ತಮ್ಮ ಉತ್ತರಾಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತಹ ಗುಣಮಟ್ಟ ಮತ್ತು ಪರಂಪರೆಯನ್ನು ಕೊಡುಗೆಯಾಗಿ ನೀಡಿದ್ದಾರೆ” ಎಂದು ಮೋದಿ ಬಣ್ಣಿಸಿದರು.

“ನಾವಿಬ್ಬರೂ ವಿಭಿನ್ನ ಧ್ಯೇಯ ಹೊಂದಿರುವ ವ್ಯಕ್ತಿಗಳು. ಸಂಸತ್ತಿನ ಉಭಯ ಸದನಗಳಲ್ಲಿ ಕಷ್ಟದ ಮತ್ತು ಒತ್ತಡದ ಪರಿಸ್ಥಿತಿಗಳಲ್ಲೂ ಉತ್ತಮವಾಗಿ ನಿಮ್ಮ ಪಾತ್ರ ನಿರ್ವಹಿಸಿದ್ದೀರಿ. ಅದಕ್ಕಾಗಿ ಧನ್ಯವಾದ ಹೇಳುತ್ತೇನೆ” ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಾಯ್ಡು ಅವರ ಕಾರ್ಯವೈಖರಿ ಬಣ್ಣಿಸಿದರು. 

ಹುತಾತ್ಮರಿಗೆ ಲೋಕಸಭೆಯ ಶ್ರದ್ಧಾಂಜಲಿ

ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿದ್ದ ಕ್ವಿಟ್ ಇಂಡಿಯಾ ಚಳವಳಿ ನಡೆದು ಆಗಸ್ಟ್‌ 8ಕ್ಕೆ 80 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಲೋಕಸಭೆಯು ಸ್ವಾತಂತ್ರ್ಯ ಚಳವಳಿಯಲ್ಲಿ ಹುತಾತ್ಮರಾದವರಿಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

ವಾರಾಂತ್ಯದ ವಿರಾಮದ ನಂತರ ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಅವರು 80 ವರ್ಷಗಳ ಹಿಂದೆ ಇದೇ ದಿನದಂದು ಮಹಾತ್ಮ ಗಾಂಧಿಯವರು ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದ್ದರು ಎಂದು ಹೇಳಿದರು. 

ಹುತಾತ್ಮ ಯೋಧರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸ್ಪೀಕರ್‌ ಬಿರ್ಲಾ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ- ಬಲಿದಾನಗಳು ಪ್ರತಿಯೊಬ್ಬರಿಗೂ ಸಮರ್ಪಣಾ ಭಾವದಿಂದ ದೇಶ ಸೇವೆ ಮಾಡಲು ಪ್ರೇರಣೆ ನೀಡುತ್ತದೆ ಎಂದರು.

1942ರ ಆಗಸ್ಟ್‌ 8ರಂದು ಮಹಾತ್ಮಾ ಗಾಂಧಿಯವರು ಪ್ರಾರಂಭಿಸಿದ ಕ್ವಿಟ್ ಇಂಡಿಯಾ ಚಳುವಳಿಯು ಮುಂದೆ ಸ್ವಾತಂತ್ರ್ಯ ಚಳವಳಿಗೆ ನಾಂದಿ ಹಾಡಿತು. 

ಮಂಡನೆಗೆ ಕಾದಿರುವ ಎರಡು ಮಸೂದೆಗಳು

ಸೋಮವಾರ ನಡೆಯುತ್ತಿರುವ ಅಧಿವೇಶನದಲ್ಲಿ ‘ನವದೆಹಲಿ ಅಂತಾರಾಷ್ಟ್ರೀಯ ಆರ್ಬಿಷನ್‌ ಸೆಂಟರ್‌ (ತಿದ್ದುಪಡಿ) ಮಸೂದೆ, 2022 ಲೋಕಸಭೆಯಲ್ಲಿ ಮಂಡನೆಯಾಗಲಿದೆ. 

ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ, 2022 ರಾಜ್ಯಸಭೆಯಲ್ಲಿ ಸೋಮವಾರ ಮಂಡನೆಯಾಗಲಿದೆ. ಸದ್ಯ 2.5ಕ್ಕೆ ಮುಂದೂಡಿಕೆಯಾಗಿದ್ದ ರಾಜ್ಯಸಭೆ ಮತ್ತು 2.15ಕ್ಕೆ ಮುಂದೂಡಿಕೆಯಾಗಿದ್ದ ಲೋಕಸಭೆಯ ಕಲಾಪಗಳು ವೆಂಕಯ್ಯನಾಯ್ಡು ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಿರತವಾಗಿವೆ. 

ನಿಮಗೆ ಏನು ಅನ್ನಿಸ್ತು?
0 ವೋಟ್