ನೈತಿಕ ಪೊಲೀಸ್‌ಗಿರಿ | ಬಸ್‌ ನಿಲ್ದಾಣದಲ್ಲಿ ಜೊತೆಗೆ ನಿಂತಿದ್ದ ಶಾಲಾ ಮಕ್ಕಳ ಮೇಲೆ ಹಲ್ಲೆ

  • ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳ ಮೇಲೆ ನೈತಿಕ ಪೊಲೀಸ್‌ಗಿರಿ
  • ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿದ ಪಾಲಕ್ಕಾಡ್ ಪೊಲೀಸರು

ಬಾಲಕ ಮತ್ತು ಬಾಲಕಿ ಬಸ್‌ ನಿಲ್ದಾಣದಲ್ಲಿ ಜೊತೆಯಲ್ಲಿ ನಿಂತಿದ್ದರು ಎಂಬ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ಕೇರಳದ ಮನ್ನರ್‌ಕ್ಕಾಡ್‌ನಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮಗುವೂ ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅರ್ಹರು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಸೋಮವಾರ ಹೇಳಿದೆ.

"ಪ್ರತಿ ಮಗುವಿನ ವಯಸ್ಸು ಏನೇ ಇರಲಿ, ಅವರು ಕೇವಲ ಮಕ್ಕಳಲ್ಲ. ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅವಕಾಶ ಸಿಗುವ ಹಕ್ಕನ್ನು ಹೊಂದಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಇನ್ನೂ ಅರಿವು ಬಂದಿಲ್ಲ. ಅವರಿಗೆ ಜಾಗೃತಿ ಮೂಡಿಸಬೇಕಾಗಿದೆ” ಎಂದು ಪಾಲಕ್ಕಾಡ್‌ನ ಸಿಡಬ್ಲ್ಯೂಸಿ ಅಧ್ಯಕ್ಷ ಎಂ ವಿ ಮೋಹನನ್ ಟಿವಿ ವಾಹಿನಿಯೊಂದರಲ್ಲಿ ಹೇಳಿದ್ದಾರೆ.

ಮನ್ನರ್‌ಕ್ಕಾಡ್‌ನ ಬಸ್ಸು ನಿಲ್ದಾಣದಲ್ಲಿ ಮಕ್ಕಳ ಮೇಲೆ ಇತ್ತೀಚೆಗೆ ನಡೆದ ನೈತಿಕ ಪೊಲೀಸ್‌ಗಿರಿ ಘಟನೆಯಲ್ಲಿ ಹಲ್ಲೆಗೊಳಗಾದ ಮಕ್ಕಳಿಗೆ ಅಗತ್ಯ ಬಿದ್ದರೆ, ವೈದ್ಯಕೀಯ ಚಿಕಿತ್ಸೆ ಮತ್ತು ಸಮಾಲೋಚನೆ ನಡೆಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಿಂದ ವರದಿ ನೀಡುವಂತೆ ಹೇಳಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಡಿಎಲ್ಎಸ್ಎ) ಪ್ರಕರಣದ ಬಗ್ಗೆ ತನಿಖೆ ನಡೆಸಲು, ಅಗತ್ಯವಿರುವ ಯಾವುದೇ ಕಾನೂನು ಸಹಾಯ ಒದಗಿಸುವುದಾಗಿ ಮೋಹನನ್ ಹೇಳಿದ್ದಾರೆ. “ಈ ವಿಚಾರದಲ್ಲಿ ಪೊಲೀಸರಿಂದ ಏನಾದರೂ ತಪ್ಪಾಗಿದಿಯೇ ಎಂಬುದರ ಬಗ್ಗೆ ಸಿಡಬ್ಲ್ಯೂಸಿ ವಿಚಾರಿಸಿದೆ. ಆದರೆ, ಪೊಲೀಸರು ಪ್ರಕರಣದ ಬಗ್ಗೆ ಸರಿಯಾದ ದಾರಿಯಲ್ಲಿ ತನಿಖೆ ಮುಂದುವರೆಸಿರುವುದು ಕಂಡುಬಂದಿದೆ” ಎಂದು ಅವರು ಹೇಳಿದ್ದಾರೆ.

“ಪೊಲೀಸರಿಂದ ಬಂದ ವರದಿಯ ಪ್ರಕಾರ, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆಯಿಂದ ಇನ್ನೊಬ್ಬ ವ್ಯಕ್ತಿ ಭಾಗಿಯಾಗಿರುವ ಬಗ್ಗೆ ಅನುಮಾನವಿದೆ. ಜೊತೆಗೆ ಹಲ್ಲೆಗೊಳಗಾದ ಶಾಲಾ ಮಕ್ಕಳ ಸುರಕ್ಷತೆಗಾಗಿ ಲಿಖಿತ ರೂಪದಲ್ಲಿ ವಿನಂತಿ ಸಲ್ಲಿಸಿದ ನಂತರ ಸಿಡಬ್ಲ್ಯುಸಿ, ಪೊಲೀಸ್ ರಕ್ಷಣೆ ಸೇರಿದಂತೆ ಅಗತ್ಯ ನೆರವು ನೀಡಲಿದೆ” ಎಂದು ಮೋಹನನ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಂಗಳೂರು ವಿವಿ | ಮಳೆಯಿಂದಾಗಿ ತರಗತಿಗಳ ನಷ್ಟ; ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವ್ಯತ್ಯಯ

ಕಳೆದ ಶುಕ್ರವಾರ ಮನ್ನರ್‌ಕಾಡ್‌ನ ಬಸ್ ನಿಲ್ದಾಣದಲ್ಲಿ ಬಾಲಕಿಯರು ಸೇರಿದಂತೆ ಇತರ ಶಾಲಾ ಮಕ್ಕಳು ಮನೆಗೆ ಮರಳಲು ಬಸ್ಸಿಗಾಗಿ ಕಾಯುತ್ತಿದ್ದಾಗ ಅವರನ್ನು ನಿಂದಿಸಿ ಥಳಿಸಲಾಗಿದೆ.

"ಪ್ರಾಂಶುಪಾಲರ ಜೊತೆಗೆ ಬಸ್ಸು ನಿಲ್ದಾಣದಲ್ಲಿ ನಿಂತಿದ್ದಾಗ, ಒಬ್ಬ ವ್ಯಕ್ತಿ ಬಂದು ಹುಡುಗಿಯರಿಗೆ ನಿಂದಿಸಿದ್ದಾನೆ. ಆತನೊಂದಿಗೆ ಸ್ಥಳೀಯರು ಸೇರಿಕೊಂಡು ನಮ್ಮನ್ನು ಥಳಿಸಿದರು. ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಸ್ಥಳೀಯರು ಪ್ರತಿಬಾರಿ ಹುಡುಗ- ಹುಡುಗಿಯರನ್ನು ಜೊತೆಗೆ ನೋಡಿದಾಗ ಹೀಗೆ ವರ್ತಿಸುತ್ತಾರೆ” ಎಂದು ವಿದ್ಯಾರ್ಥಿನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

“ಭಾರತೀಯ ದಂಡ ಸಂಹಿತೆಯ (ಐಪಿಸಿ) 341 (ತಪ್ಪು ಗ್ರಹಿಕೆ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 324 (ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಹಾಗೂ 294 ಬಿ (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಪದಗಳನ್ನು ಬಳಸುವುದು) ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ 'ಪಿಟಿಐ' ವರದಿ ಉಲ್ಲೇಖಿಸಿದೆ.

ಘಟನೆ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಿಪಿಐ(ಎಂ)ನ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಒತ್ತಾಯಿಸಿದೆ. 

“ಮಕ್ಕಳನ್ನು ಥಳಿಸಿದ ನಂತರ ಅವರನ್ನು ಬಲವಂತವಾಗಿ ಬಸ್ಸಿಗೆ ಹತ್ತಿಸಿ, ಜಾಗ ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ. ನನ್ನ ಮಗನಿಂದ ನನಗೆ ಕರೆ ಬಂದಿತು. ಕೆಲವರು ಹಲ್ಲೆ ಮಾಡಿದ್ದಾರೆ. ನೋವಾಗುತ್ತಿದೆ ಎಂದು ಮಗ ಹೇಳಿದ. ಮಕ್ಕಳಿಗೆ ಹೊಡೆಯಲು ಇವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ” ಎಂದು ಹಲ್ಲೆಗೊಳಗಾದ ಬಾಲಕನ ತಾಯಿ ಪ್ರಶ್ನಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್