
- ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ
- ತನಿಖಾಧಿಕಾರಿ ಡಿವೈಎಸ್ಪಿ ಲೋಕೇಶ್ ಅವರಿಂದ ನೋಟಿಸ್ ಜಾರಿ
ಪೋಕ್ಸೊ ಪ್ರಕರಣ ಆರೋಪಿ, ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧದ ಪ್ರಕರಣದಿಂದ ಹಿಂದೆ ಸರಿಯಲು 3 ಕೋಟಿ ರೂ. ಆಮಿಷ ಒಡ್ಡಲಾಗಿತ್ತು ಎಂಬ ಹೇಳಿಕೆ ನೀಡಿದ್ದ ಒಡನಾಡಿಯ ಪರಶುರಾಮ್ ಅವರಿಗೆ ಚಿತ್ರದುರ್ಗ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿರುವ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಎಂ ಎಲ್ ಪರಶುರಾಮ್, "ಪ್ರಕರಣದಿಂದ ಹಿಂದೆ ಸರಿಯಲು ತನಗೆ ಮೂರು ಕೋಟಿ ಆಮಿಷ ಒಡ್ಡಲಾಗಿತ್ತು ಎಂಬ ಹೇಳಿಕೆ ವಿಚಾರವಾಗಿ, ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ನಾಳೆ (ನ.29) ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನನಗೆ ನೋಟಿಸ್ ನೀಡಿದ್ದಾರೆ" ಎಂದು ಮಾಹಿತಿ ನೀಡಿದರು.
"ಪ್ರಕರಣದಿಂದ ಹಿಂದೆ ಸರಿಯಲು ಆಮಿಷವೊಡ್ಡಿರುವುದಕ್ಕೆ ಪೂರಕ ಸಾಕ್ಷ್ಯಗಳೊಂದಿಗೆ ವಿಚಾರಣೆಗೆ ಹಾಜರಾಗಿ ಎಂದು ಮೇಲ್ ಮೂಲಕ ತನಿಖಾಧಿಕಾರಿ ಡಿವೈಎಸ್ಪಿ ಲೋಕೇಶ್ ನೋಟಿಸ್ ಜಾರಿ ಮಾಡಿದ್ದಾರೆ" ಎಂದು ಅವರು ತಿಳಿಸಿದರು.
ಆರೋಪಿಗಳ ಪರ ವಕಾಲತು ವಹಿಸಿದ್ದ ಸಚಿವರೊಬ್ಬರು ತನಗೆ, 3 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪರಶುರಾಮ್ ಬಹಿರಂಗಪಡಿಸಿದ್ದರು. ಪರಶುರಾಮ್ ಅವರ ಈ ಹೇಳಿಕೆ ಭಾರಿ ಸಂಚಲನ ಮೂಡಿಸಿತ್ತು.
ಡಿ.1ಕ್ಕೆ ಮುರುಘಾ ಸ್ವಾಮಿ ಜಾಮೀನು ವಿಚಾರಣೆ
ಎರಡನೇ ಪ್ರಕರಣದಲ್ಲಿ ಶಿವಮೂರ್ತಿಯ ಸ್ವಾಮಿ ಜಾಮೀನು ಕೋರಿ ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ ಕೆ ಕೋಮಲಾ ಡಿಸೆಂಬರ್ 1ಕ್ಕೆ ವಿಚಾರಣೆ ಮುಂದೂಡಿದರು.
ಈ ಸುದ್ದಿ ಓದಿದ್ದೀರಾ?: ಮೈಸೂರು | ಮುರುಘಾ ಪ್ರಕರಣದಿಂದ ಹಿಂದೆ ಸರಿಯುವಂತೆ ಸಚಿವರಿಂದ 3 ಕೋಟಿ ಆಮಿಷ: ಒಡನಾಡಿ ಆರೋಪ
ಮಾಜಿ ಆಡಳಿತಾಧಿಕಾರಿ ನ್ಯಾಯಾಂಗ ಬಂಧನ ವಿಸ್ತರಣೆ
ಶಿವಮೂರ್ತಿ ಶರಣರ ವಿರುದ್ಧ ಪ್ರಕರಣ ದಾಖಲಿಸುವಂತೆ ವಿದ್ಯಾರ್ಥಿನಿಯರಿಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿತರಾಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಹಾಗೂ ಶಿಕ್ಷಕ ಬಸವರಾಜೇಂದ್ರ ನ್ಯಾಯಾಂಗ ಬಂಧನವನ್ನು ಡಿ.12ರವರೆಗೆ ವಿಸ್ತರಿಸಿ ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.