
- ಆರೋಪಿಯನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಕೋರಿದ್ದ ವಕೀಲರ ಮನವಿ ತಿರಸ್ಕೃತ
- ಒಂದೇ ಜೈಲಿನಲ್ಲಿ ಬಂಧಿಯಾದ ಶಿವಮೂರ್ತಿ ಸ್ವಾಮೀಜಿ, ಎಸ್ ಕೆ ಬಸವರಾಜನ್
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸುವಂತೆ ಪ್ರಚೋದಿಸಿದ ಆರೋಪದಡಿ ಬಂಧಿತರಾಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಮತ್ತು ಶಿಕ್ಷಕ ಬಸವರಾಜೇಂದ್ರ ಅವರಿಗೆ ಜಿಲ್ಲಾ ನ್ಯಾಯಾಲಯ ನ.28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ತನಿಖಾ ತಂಡ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಪೊಲೀಸ್ ವಿಚಾರಣೆ ಪೂರ್ಣಗೊಂಡಿದ್ದರಿಂದ ಇಬ್ಬರು ಆರೋಪಿಗಳನ್ನು ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಈ ವೇಳೆ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಶಿವಮೂರ್ತಿ ಸ್ವಾಮಿಗಳಿದ್ದಾರೆ. ಹಾಗಾಗಿ, ತಮ್ಮ ಕಕ್ಷಿದಾರರನ್ನು ದಾವಣಗೆರೆ ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸುವಂತೆ ಬಸವರಾಜನ್ ಪರ ವಕೀಲರು ನಿವೇದಿಸಿಕೊಂಡರು. ಈ ಕೋರಿಕೆಯನ್ನು ನಿರಾಕರಿಸಿದ ನ್ಯಾಯಾಲಯವು, ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಕಳಿಸಿತು.
ಸದ್ಯ ಪೋಕ್ಸೊ ಪ್ರಕರಣ ಆರೋಪಿ ಶಿವಮೂರ್ತಿ ಸ್ವಾಮಿ ಹಾಗೂ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಒಂದೇ ಜೈಲಿನಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮುರುಘಾ ಶ್ರೀ ಪ್ರಕರಣ | ಶಿವಮೂರ್ತಿ ಸ್ವಾಮೀಜಿಗೆ ನ.21ರವರೆಗೆ ನ್ಯಾಯಾಂಗ ಬಂಧನ
ಮುರುಘಾ ಶ್ರೀ ವಿರುದ್ಧ ಪ್ರಕರಣ ದಾಖಲಿಸಲು ಪ್ರಚೋದನೆ ನೀಡಿದ್ದಾರೆ ಎಂದು ಮೈಸೂರಿನ ʻಒಡನಾಡಿʼ ಸಂಸ್ಥೆ ಮತ್ತು ಮಠದ ಉದ್ಯೋಗಿ ಗಾಯತ್ರಿ ವಿರುದ್ಧ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ನ.9ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣ ಸಂಬಂಧ ನ.10ರಂದು ಪೊಲೀಸರು ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಮತ್ತು ಶಿಕ್ಷಕ ಬಸವರಾಜೇಂದ್ರ ಅವರನ್ನು ಬಂಧಿಸಿದ್ದರು.