Technical Issue

ಮುಝಫ್ಫರ್ ನಗರ | ಹಿಂದೂ ಕೈದಿಗಳೊಂದಿಗೆ ನವರಾತ್ರಿ ಉಪವಾಸ ಆಚರಿಸುತ್ತಿರುವ ಮುಸ್ಲಿಂ ಕೈದಿಗಳು

  • ಜಿಲ್ಲಾ ಕಾರಾಗೃಹದಲ್ಲಿ 218 ಮುಸ್ಲಿಂ ಕೈದಿಗಳಿಂದ ಉಪವಾಸ
  • ಪ್ರೀತಿಗೆ ಉತ್ತರ ಪ್ರೀತಿಯೇ ಹೊರತು ದ್ವೇಷವಲ್ಲ ಎಂದ ಕೈದಿಗಳು

ಕೋಮು ಸಾಮರಸ್ಯವನ್ನು ಉತ್ತೇಜಿಸುವ ಘಟನೆಯೊಂದು ಉತ್ತರ ಪ್ರದೇಶದ ಮುಝಫ್ಫರ್ ನಗರದ ಜಿಲ್ಲಾ ಕಾರಾಗೃಹದಿಂದ ವರದಿಯಾಗಿದೆ.

ಮುಝಫ್ಫರ್ ನಗರದ ಜಿಲ್ಲಾ ಜೈಲಿನಲ್ಲಿ ಮುಸ್ಲಿಂ ಕೈದಿಗಳು ಹಿಂದೂ ಕೈದಿಗಳೊಂದಿಗೆ ಒಂಬತ್ತು ದಿನಗಳ ನವರಾತ್ರಿ ಉಪವಾಸವನ್ನು ಆಚರಿಸುತ್ತಿದ್ದಾರೆ. ಈ ಹಿಂದೆ ರಮಝಾನ್ ಉಪವಾಸದ ವೇಳೆ ಮುಸ್ಲಿಂ ಕೈದಿಗಳೊಂದಿಗೆ ಹಿಂದೂ ಕೈದಿಗಳು ಉಪವಾಸ ಕೈಗೊಂಡು ಕೋಮು ಸೌಹಾರ್ದತೆ ಮೆರೆದಿದ್ದರು. 3,000 ಕೈದಿಗಳ ಪೈಕಿ ಸುಮಾರು 1,100 ಹಿಂದೂ ಕೈದಿಗಳೊಂದಿಗೆ ಸುಮಾರು 218 ಮುಸ್ಲಿಮರು ಉಪವಾಸವನ್ನು ಆಚರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಝಫ್ಫರ್ ನಗರದ ಜೈಲು ಅಧಿಕಾರಿಗಳು ಉಪವಾಸ ನಿರತರಾದ ಕೈದಿಗಳಿಗೆ ವಿಶೇಷ ಆಹಾರ ಪದಾರ್ಥಗಳ ವ್ಯವಸ್ಥೆ ಮಾಡಿದ್ದಾರೆ.

"ಜೈಲಿನ ಕ್ಯಾಂಟಿನ್‌ನಲ್ಲಿ ವಿವಿಧ ಹಣ್ಣುಗಳು, ಹಾಲು, ಕುಟ್ಟು (ಹುರುಳಿ ಹಿಟ್ಟು), ಚಹಾ ಮತ್ತು ಇತರ ಪದಾರ್ಥಗಳಿಂದ ತಯಾರಿಸಿದ ಪೂರಿಗಳನ್ನು ನೀಡಲಾಗುತ್ತಿದೆ" ಎಂದು ಮುಝಫ್ಫರ್ ನಗರ ಜಿಲ್ಲಾ ಜೈಲಿನ ಅಧೀಕ್ಷಕ ಸೀತಾರಾಮ್ ಶರ್ಮಾ ತಿಳಿಸಿದ್ದಾರೆ. 

"ಕೈದಿಗಳ ನಡುವೆ ಕೋಮು ಸೌಹಾರ್ದತೆಯನ್ನು ಬೆಳೆಸಲು ಸಹಾಯ ಮಾಡುವ ಕಾರಣ ನಾವು, ಜೊತೆಯಾಗಿ ಉಪವಾಸ ಮಾಡುವಂತಹ ಕೈದಿಗಳ ನಿರ್ಧಾರಗಳನ್ನು ಗೌರವಿಸಿ, ಉತ್ತೇಜಿಸುತ್ತೇವೆ" ಎಂದವರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಭಾರತ್ ಜೋಡೋ ಯಾತ್ರೆ | 29 ವರ್ಷಗಳ ವೈಷಮ್ಯ ಮರೆಸಿದ ಐಕ್ಯತಾ ಯಾತ್ರೆ: ಬದನವಾಳಿನಲ್ಲಿ ದಲಿತರು-ವೀರಶೈವರ ಸಹಭೋಜನ

"ಕೋಮು ಸೌಹಾರ್ದತೆಗಾಗಿ ಜೊತೆಯಾಗಲು ಮತ್ತು ಅದು ಎಲ್ಲರಿಗೂ ಮಾದರಿಯಾಗಲು ನಮಗೆ ಹೆಮ್ಮೆ ಎನಿಸುತ್ತದೆ. ರಮಝಾನ್‌ನಲ್ಲಿ ಹಿಂದೂ ಬಾಂಧವರು ನಮ್ಮೊಂದಿಗೆ ಉಪವಾಸ ಮಾಡಿದ್ದಾರೆ. ನವರಾತ್ರಿಯಲ್ಲಿ ನಾವೂ ಉಪವಾಸ ವ್ರತ ಆಚರಿಸುತ್ತಿದ್ದೇವೆ. ಪ್ರೀತಿಗೆ ಉತ್ತರ ಪ್ರೀತಿಯೇ ಹೊರತು ದ್ವೇಷವಲ್ಲ" ಎಂದು ಮುಸ್ಲಿಂ ಕೈದಿಯೊಬ್ಬರು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್