ಬಪ್ಪನಾಡು ಜಾತ್ರೋತ್ಸವಕ್ಕೆ ತೊಂದರೆ ಆತಂಕ| ಅಂಗಡಿ ಹಾಕದಿರಲು ತೀರ್ಮಾನಿಸಿದ ಮುಸ್ಲಿಮ್ ವರ್ತಕರು

ಮಂಗಳೂರು ಹೊರವಲಯದ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮುಸ್ಲಿಂ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ ಹಾಕದೆ ಇರಲು ತೀರ್ಮಾನಿಸಿದ್ದಾರೆ.

ಮಂಗಳೂರು ನಗರದ ಹೊರವಲಯದ ಬಪ್ಪನಾಡು ಕ್ಷೇತ್ರದ ಜಾತ್ರೆಯಲ್ಲಿ ಅಂಗಡಿ ಹಾಕದಿರಲು ಮುಸ್ಲಿಂ ವರ್ತಕರು ತೀರ್ಮಾನಿಸಿದ್ದಾರೆ.

Eedina App

ದೇವಸ್ಥಾನದ ವಠಾರದಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎನ್ನುವ ಬ್ಯಾನರ್ ಕಂಡು ಬಂದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.

"ದೇವಸ್ಥಾನದ ವಠಾರದಲ್ಲಿ ಬ್ಯಾನರ್ ಹಾಕೋಕೆ ಅವಕಾಶ ಇಲ್ಲ. ದೇವಸ್ಥಾನದ ಹೊರಭಾಗದಲ್ಲಿ ಯಾರು ಬ್ಯಾನರ್ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ಪ್ರತಿವರ್ಷ ಇಲ್ಲಿ ಮುಸ್ಲಿಮರು ವ್ಯಾಪಾರ ಮಾಡುತ್ತಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ಎಂದೂ ನಿಷೇಧ ಹಾಕಿಲ್ಲ. ಮುಸ್ಲಿಂ ವ್ಯಾಪಾರಿಗಳು ಬಂದರೂ ಹಿಂದೆ ಕಳುಹಿಸೋಲ್ಲ. ಆದರೆ ಅವರಿಗೆ ತೊಂದರೆ ಆದರೆ ದೇವಸ್ಥಾನ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ" ಎಂದು ದೇವಸ್ಥಾನ ಮಂಡಳಿಯ ಮೊಕ್ತೇಸರ ಮನೋಹರ್ ಶೆಟ್ಟಿ ಸ್ಪಷ್ಟನೆ ನೀಡಿದ್ದರು.

AV Eye Hospital ad

ಈದಿನ.ಕಾಮ್ನೊಂದಿಗೆ ಮಾತನಾಡಿದ ಪಡುಬಿದ್ರಿ ಭಾಗದ ಮುಸ್ಲಿಂ ವ್ಯಾಪಾರಸ್ಥರೊಬ್ಬರು,  "ನಾನು ಕಳೆದ ಆರು ವರ್ಷಗಳಿಂದ ಬಪ್ಪನಾಡು ಜಾತ್ರೆಯ ವೇಳೆ ಸ್ಟಾಲ್ ಹಾಕುತ್ತಿದ್ದೆ. ಅಲ್ಲದೇ, ಈ ಬಾರಿ ಕೂಡ ನಾವು ಈಗಾಗಲೇ 500 ರೂ. ಕೊಟ್ಟು ಬುಕ್ ಸ್ಟಾಲ್ ಬುಕ್ ಮಾಡಿದ್ದೆವು. ಯಾವಾಗ ಬ್ಯಾನರ್ ಹಾಕಿದರೊ ಅಂದಿನಿಂದ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಯಿತು" ಎಂದು ಹೇಳಿದ್ದಾರೆ.

"ದೇವಸ್ಥಾನ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರೂ,  ನಾವು ಅಂಗಡಿ ಹಾಕಿದಾಗ ಏನಾದರೂ ತೊಂದರೆಯಾದರೆ ದೇವಸ್ಥಾನ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಹೀಗಾಗಿ ನಾವು ಹಿಂಜರಿದೆವು. ಅಲ್ಲದೇ, ಅಂಗಡಿ ಹಾಕಿರುವವರು ಕೇಸರಿ ಬಾವುಟ ಹಾರಿಸಬೇಕು ಎಂಬ ಮೌಖಿಕ ಆದೇಶ ಕೆಲವರು ನೀಡಿದ್ದಾರೆ. ಈ ಬಗ್ಗೆ ನಮ್ಮ  ಪರಿಚಯದ ಹಿಂದೂ ಸ್ನೇಹಿತರು ಮಾಹಿತಿ ನೀಡಿದ್ದರಿಂದ ನಾವು ಅಂಗಡಿ ಹಾಕಿಲ್ಲ. ನೀಡಿದ್ದ ಮುಂಗಡ ಹಣ 500 ರೂ.ಯನ್ನು ಹಿಂಪಡೆಯಲು ಹೋಗಿಲ್ಲ. ಅದು ದೇವಸ್ಥಾನಕ್ಕೆ ಇರಲಿ" ಎಂದು ಅವರು ತಿಳಿಸಿದ್ದಾರೆ.

ಫ್ಲೆಕ್ಸ್ ಹಿಂದೆ ಜಿಲ್ಲಾಡಳಿತ ಕುಮ್ಮಕ್ಕಿನ ಆರೋಪ
ಬಪ್ಪನಾಡು ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂದು ಹೇಳಿ ಬ್ಯಾನರ್ ಹಾಕಿರುವುದರ ಹಿಂದೆ ಜಿಲ್ಲಾಡಳಿತದ ಕುಮ್ಮಕ್ಕು ಇರುವ ಅನುಮಾನ ಕಾಡುತ್ತಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಆರೋಪಿಸಿದ್ದಾರೆ.

ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಮಂಡಳಿ ಆ ಬ್ಯಾನರ್ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿಯಾಗಿದೆ. ಆದರೆ ಜಿಲ್ಲಾಡಳಿತ ಇನ್ನೂ ಬ್ಯಾನರ್ ತೆರವುಗೊಳಿಸಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮೌನ ವಹಿಸಿದ್ದಾರೆ" ಎಂದು ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.

ದ.ಕ. ಜಿಲ್ಲೆಯನ್ನು ಕೋಮು ಗಲಭೆಗೆ ಪ್ರಯೋಗಶಾಲೆಯಾಗಿ ಉಪಯೋಗಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಪುಂಡ ಪೋಕರಿಗಳ ಕೆಲಸಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಮಿಥುನ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ವ್ಯಾಪಾರ ನಡೆಸಲು ಹಿಂದೂಯೇತರರಿಗೆ ಸರ್ಕಾರ ಅವಕಾಶ ಕಲ್ಪಿಸಬಾರದು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app