ನನ್ನ ತಂದೆಯ ಎಲ್ಲ ಸ್ವಾತಂತ್ರ್ಯ ಕಸಿದು ಕತ್ತಲ ಕೋಣೆಯೊಳಗೆ ನೂಕಲಾಗಿದೆ: ಪತ್ರಕರ್ತ ಸಿದ್ದೀಕ್ ಕಪ್ಪನ್ ಮಗಳ ಭಾಷಣ ವೈರಲ್

Siddique Kappan and Daughter Mehanaz Kappan
  • ತನ್ನ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣ ಮಾಡಿದ ಮೆಹನಾಝ್ ಕಪ್ಪನ್
  • 2020ರ ಅಕ್ಟೋಬರ್ 5ರಂದು ಸಿದ್ದೀಕ್ ಕಪ್ಪನ್ ಅವರನ್ನು ಬಂಧಿಸಿದ್ದ ಉತ್ತರ ಪ್ರದೇಶ ಪೊಲೀಸರು 

"ನಾನು ಮೆಹನಾಝ್ ಕಪ್ಪನ್. ಒಬ್ಬ ನಾಗರಿಕನ ಎಲ್ಲ ಸ್ವಾತಂತ್ರ್ಯವನ್ನು ಕಸಿದು ಬಲವಂತದಿಂದ ಕತ್ತಲ ಕೋಣೆಯೊಳಗೆ ನೂಕಲ್ಪಟ್ಟ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಮಗಳು ನಾನು, '' ಹೀಗೆಂದು ಮಲಯಾಳಂನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣವನ್ನು ಮಾಡಿರುವ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಮಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಕೇರಳದ ನೊಟ್ಟಪಾರಂ ಜಿಎಲ್‍ಪಿ ಸರಕಾರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಮೆಹನಾಝ್ ಕಪ್ಪನ್, ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ 9 ವರ್ಷದ ಪುತ್ರಿ. ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ವರದಿ ಮಾಡಲೆಂದು ಹತ್ರಾಸ್‍ಗೆ ತೆರಳುತ್ತಿದ್ದ ವೇಳೆ ಉತ್ತರ ಪ್ರದೇಶ ಪೊಲೀಸರು ಸಿದ್ದೀಖ್ ಕಪ್ಪನ್ ಅವರನ್ನು ಬಂಧಿಸಿದ್ದರು. ಇದು ದೇಶಾದ್ಯಂತ ಸುದ್ದಿಯಾಗಿತ್ತು.

ಈ ಸುದ್ದಿ ಓದಿದ್ದೀರಾ? ಸಿದ್ದೀಕ್‌ ಕಪ್ಪನ್‌ ಜಾಮೀನು ಅರ್ಜಿ ವಜಾ | ಮಾನವ ಹಕ್ಕುಗಳ ಉಲ್ಲಂಘನೆ ಎಂದ ಮೇರಿ ಲಾಲರ್

ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣವನ್ನು ತನ್ನ ಮಾತೃ ಭಾಷೆ ಮಲಯಾಳಂನಲ್ಲೇ ಮಾಡಿದ ಮೆಹನಾಝ್ ಕಪ್ಪನ್. "ನಾನು ಮೆಹನಾಝ್ ಕಪ್ಪನ್. ಒಬ್ಬ ನಾಗರಿಕನ ಎಲ್ಲ ಸ್ವಾತಂತ್ರ್ಯವನ್ನು ಕಸಿದು ಬಲವಂತದಿಂದ ಕತ್ತಲ ಕೋಣೆಯೊಳಗೆ ನೂಕಲ್ಪಟ್ಟ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಮಗಳು ನಾನು. ದೇಶ ತನ್ನ 76ನೇ ಸ್ವಾತಂತ್ರ್ಯ ದಿನಕ್ಕೆ ಕಾಲಿಡುತ್ತಿರುವ ಈ ಮಹತ್ವದ ಸಂದರ್ಭದಲ್ಲಿ ಹೆಮ್ಮೆಯ ಭಾರತೀಯಳಾಗಿ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುತ್ತೇನೆ. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಗಾಂಧೀಜಿ, ನೆಹರೂ, ಭಗತ್ ಸಿಂಗ್ ಸಹಿತ ಅಸಂಖ್ಯಾತ ಕ್ರಾಂತಿಕಾರರ ಹೋರಾಟದ ಫಲವಾಗಿದೆ. ಇಂದು ಪ್ರತಿಯೊಬ್ಬ ಭಾರತೀಯನಿಗೆ ಒಂದು ಆಯ್ಕೆಯಿದೆ- ಅವರೇನು ಮಾತನಾಡಬಹುದು, ತಿನ್ನಬಹುದು ಹಾಗೂ ಯಾವ ಧರ್ಮವನ್ನು ಅನುಸರಿಸಬೇಕೆಂದು. ಅವರಿಗೆ  ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ. ಈ ಮಹಾನ್ ದೇಶದ ಘನತೆಯನ್ನು ಯಾರೊಂದಿಗೂ ರಾಜಿ ಮಾಡಿಕೊಳ್ಳಕೂಡದು, ಆದರೆ ಕೆಲವೆಡೆ ಅಶಾಂತಿಯಿದೆ. ಇಂದು ಧರ್ಮ, ಜಾತಿ ರಾಜಕೀಯ ಕಾರಣಗಳಿಗಾಗಿ ಹಿಂಸೆ ನಡೆಯುತ್ತಿದೆ. ಇವುಗಳೆಲ್ಲವೂ ಅಂತ್ಯಗೊಳ್ಳಬೇಕು, ಅಶಾಂತಿಯ ನೆರಳನ್ನೂ ನಿರ್ಮೂಲನೆಗೊಳಿಸಬೇಕು. ಜೊತೆಯಾಗಿ ನಾವು ಈ ಜೀವನವನ್ನು ನಡೆಸಬೇಕಿದೆ. ನಾವು ಭಾರತವನ್ನು ಉನ್ನತಿಯ ಉತ್ತುಂಗಕ್ಕೆ  ಏರಿಸಬೇಕು, ಉತ್ತಮ ಮತ್ತು ಯಾವುದೇ ಒಡಕುಗಳಿಲ್ಲದ ನಾಳೆಯ ಬಗ್ಗೆ ಕನಸು ಕಾಣಬೇಕು. ದೇಶದ ಸಾಮಾನ್ಯ ನಾಗರಿಕರ ಸ್ವಾತಂತ್ರ್ಯವನ್ನು ಸೆಳೆಯಬಾರದು ಎಂದು ಹೇಳಿ ನಾನು ನನ್ನ ಮಾತನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಜೈ ಹಿಂದ್, ಜೈ ಭಾರತ್,'' ಎಂದು ಹೇಳಿ ತನ್ನ ಭಾಷಣವನ್ನು ಮೆಹನಾಝ್ ನಿಲ್ಲಿಸಿದ್ದಾಳೆ.

ಮೆಹನಾಝ್ ಅವರ ಭಾಷಣವನ್ನು ಟ್ವಿಟರ್‌ನಲ್ಲಿ 'ದಿ ನ್ಯೂಸ್ ಮಿನಿಟ್‌'ನ ಪತ್ರಕರ್ತೆ ಅಝೀಪಾ ಹಂಚಿಕೊಂಡಿದ್ದಾರೆ. 2020ರ ಅಕ್ಟೋಬರ್ 5 ರಂದು ಉತ್ತರ ಪ್ರದೇಶದ ಮಥುರಾ ಪೊಲೀಸರು ಸಾಮೂಹಿಕ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಹತ್ರಾಸ್‌ನ ಹಳ್ಳಿಗೆ ತೆರಳುತ್ತಿದ್ದಾಗ ಸಿದ್ದಿಕ್ ಕಪ್ಪನ್ ಮತ್ತು ಇತರ ಮೂವರನ್ನು ಬಂಧಿಸಿದ್ದರು. ಈ ನಾಲ್ವರನ್ನು ಶಾಂತಿ ಭಂಗವನ್ನು ಉಂಟುಮಾಡುವ ಭೀತಿಯ ಮೇಲೆ ಬಂಧಿಸಲಾಗಿತ್ತು. ಆ ಬಳಿಕ ದೇಶದ್ರೋಹ ಮತ್ತು ವಿವಿಧ ಭಯೋತ್ಪಾದಕ ಅಪರಾಧಗಳಲ್ಲಿ ಭಾಗಿಯಾಗಿರುವ ಕಠಿಣ ಆರೋಪಗಳನ್ನು ಹೊರಿಸಲಾಗಿತ್ತು. ಅವರ ಬಿಡುಗಡೆಗಾಗಿ ಅವರ ಪತ್ನಿ ಹಾಗೂ ಕೇರಳ ಪತ್ರಕರ್ತರ ಯೂನಿಯನ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ಫಲ ನೀಡಿಲ್ಲ.

ನಿಮಗೆ ಏನು ಅನ್ನಿಸ್ತು?
4 ವೋಟ್